ನಾಳೆಯಿಂದ ಗೂಳೂರು ಗಣೇಶನ ದರ್ಶನ: ಕಾರ್ತೀಕ ಮಾಸದಲ್ಲಿ 1 ತಿಂಗಳ ಸಂಭ್ರಮಾಚರಣೆ

03Tmk_Guluru_Ganesha_01
Published on

ತುಮಕೂರು: ಇತಿಹಾಸ ಪ್ರಸಿದ್ಧ ಗೂಳೂರು ಗಣೇಶೋತ್ಸವವು ಕಾರ್ತೀಕ ಮಾಸದಲ್ಲಿ 1 ತಿಂಗಳು ನಡೆಯಲಿದೆ. ಬಲಿಪಾಡ್ಯದಂದು ಗಣೇಶಮೂರ್ತಿಗೆ ಕಣ್ಣುಧಾರಣೆ ಮಾಡಿದ ಬಳಿಕ ನ.5 ರಿಂದ ಡಿ.10ರವರೆಗೆ ಸಾರ್ವಜನಿಕರ ದರ್ಶನಕ್ಕೆ ಅನುವು ಮಾಡಲಾಗುವುದು.

ಗಣೇಶ ಚೌತಿ ಬದಲು ಕಾರ್ತೀಕ ಮಾಸದಲ್ಲಿ ಗೂಳೂರಿನಲ್ಲಿ ಗಣೇಶೋತ್ಸವ ನಡೆಯುತ್ತದೆ. ಈ ಸಂದರ್ಭದಲ್ಲಿ 1 ತಿಂಗಳು ಗಣೇಶಮೂರ್ತಿಗೆ ನಿತ್ಯ ವಿಶೇಷ ಪೂಜೆ ನಡೆಯಲಿದೆ. ಡಿ.11ರಂದು ರಾತ್ರಿ ಮಹಾಗಣಪತಿ ಉತ್ಸವ ಜರುಗಲಿದ್ದು, 12 ರಂದು ಸಂಜೆ 5ಕ್ಕೆ ಗೂಳೂರು ಕೆರೆಯಲ್ಲಿ ಗಣೇಶಮೂರ್ತಿಯನ್ನು ವಿಸರ್ಜನೆ ಮಾಡಲಾಗುವುದು.

ಕಾರ್ತೀಕ ಮಾಸದ ಬಲಿಪಾಡ್ಯಮಿ ದಿನವಾದ ಶುಕ್ರವಾರ ಬೆಳಗಿನ ಜಾವ 5 ರಿಂದ 6ವರೆಗೆ ಶುಭ ಮುಹೂರ್ತದಲ್ಲಿ ದೃಷ್ಟಿ ಧಾರಣೆ ಮೂಲಕ ಪ್ರಥಮ ಪೂಜೆ ಸಲ್ಲಿಕೆಯಾಗಲಿದೆ. 1 ತಿಂಗಳು ಪ್ರತಿದಿನ ರಾತ್ರಿ 9ಕ್ಕೆ ವಿಶೇಷ ಪೂಜೆಗಳನ್ನು ಸೇವಾಕರ್ತರು ನಡೆಸಿಕೊಡಲಿದ್ದಾರೆ. ನಂತರ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು.

ಚೌತಿಗೆ ಮೂರ್ತಿ ನಿರ್ಮಾಣ ಆರಂಭ: ಗೂಳೂರು ಗಣೇಶ ವಿಶೇಷವೆಂದರೆ ಗಣೇಶ ಚೌತಿಯಂದು ಗಣೇಶ ಮೂರ್ತಿ ನಿರ್ಮಾಣ ಆರಂಭವಾಗುತ್ತದೆ. ಆಯುಧಪೂಜೆ, ವಿಜಯದಶಮಿ ಹೊತ್ತಿಗೆ ಗಣೇಶ ಮೂರ್ತಿ ಒಂದು ಆಕಾರಕ್ಕೆ ಬರುತ್ತದೆ. ಆ ಸಂದರ್ಭದಲ್ಲಿ ಅದರ ನಾಭಿಯೊಳಗೆ ಚಿಕ್ಕಗಣಪತಿ ಕೂರಿಸಲಾಗುವುದು. ಕಾರ್ತೀಕ ಪಾಡ್ಯ ಪ್ರಾರಂಭವಾಗುವ ವೇಳೆಗೆ ಸರ್ವಾಲಂಕಾರ ಭೂಷಿತನಾಗಿ ರೂಪುಗೊಳ್ಳುವ ಗಣಪತಿಗೆ ಅಂತಿಮ ಸ್ಪರ್ಶ ನೀಡಲಾಗುವುದು. ಬಲಿಪಾಡ್ಯದಂದು ಬೆಳಗ್ಗೆ ಶುಭ ಮುಹೂರ್ತದಲ್ಲಿ ದೃಷ್ಟಿಧಾರಣೆ ಮೂಲಕ ಪ್ರಥಮ ಪೂಜೆಗೆ ಅಣಿಗೊಳಿಸಲಾಗುವುದು.

ಒಂದು ತಿಂಗಳು ನಡೆಯುವ ಗಣೇಶೋತ್ಸವದಲ್ಲಿ ಕರೊನಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲಾಗುವುದು. ಗಣೇಶಮೂರ್ತಿ ವಿಸರ್ಜನೆ ಅಂಗವಾಗಿ ಡಿ.11ರಂದು ರಾತ್ರಿ ವಿವಿಧ ಜಾನಪದ ಕಲಾತಂಡಗಳೊಂದಿಗೆ ಉತ್ಸವವು ಊರಿನ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ. ಮರುದಿನ ಗೂಳೂರು ಕೆರೆಯಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ವಿಸರ್ಜಿಸಲಾಗುವುದು.

ಜಿ.ಎಸ್.ಶಿವಕುಮಾರ್ ಅಧ್ಯಕ್ಷ, ಮಹಾಗಣಪತಿ ಸೇವಾ ಮಂಡಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net