ಗೂಳಿಹಟ್ಟಿ ಶೇಖರ್ ಹೇಳಿಕೆ ಹಿಂದೆ ಕಾಣದ ಕೈಗಳ ಒತ್ತಡ: ಪಿ.ರಾಜೀವ್

P Rajeev
Published on

ಬೆಂಗಳೂರು:
ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುರಿತು ನೀಡಿದ ಹೇಳಿಕೆ ತಪ್ಪು ಮಾಹಿತಿಯಿಂದ ಕೂಡಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಪಿ.ರಾಜೀವ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಅವರು ಯಾವ ಮಾನಸಿಕ ಸ್ಥಿತಿಯಲ್ಲಿ, ಯಾರಿಂದ ಪ್ರೇರಣೆಗೆ ಒಳಗಾಗಿ ಈ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ ಎಂದರು.
ಹೇಳಿಕೆ ಹಿಂದೆ ಕಾಣದ ಕೈಗಳ ಒತ್ತಡವಿದೆ ಎಂದು ಶಂಕಿಸಿದ ಅವರು, ನಾನು ಒಬ್ಬ ದಲಿತನಾಗಿದ್ದು, ರಾಜಕಾರಣಕ್ಕೆ ಬಂದ ಮೇಲೆ ಆರೆಸ್ಸೆಸ್ ಸಂಪರ್ಕದಲ್ಲಿದ್ದು, ಹತ್ತಿರದಿಂದ ನೋಡಿದ್ದೇನೆ. ಆ ರೀತಿ ಏನೂ ಆಗಿಲ್ಲ ಎಂದರು.
ಆರೆಸ್ಸೆಸ್ ಎಲ್ಲರನ್ನೂ ಜೋಡಿಸುತ್ತದೆ. ಸಂಪೂರ್ಣ ಹಿಂದೂ ಸಮಾಜವನ್ನು ಒಗ್ಗೂಡಿಸುತ್ತದೆ. ಆರೆಸ್ಸೆಸ್, ಭಾರತ ಮಾತೆಯ ಫೋಟೊ ಇಟ್ಟುಕೊಂಡು ಪೂಜೆ ಮಾಡುತ್ತದೆ. ಅಲ್ಲಿ ಜಾತೀಯತೆ, ಒಡೆಯುವಂಥದ್ದು, ಜಾತಿ ಕೇಳುವ ಆಚರಣೆ ನನ್ನ ಗಮನಕ್ಕೆ ಬಂದಿಲ್ಲ ಎಂದರು.
ದೇಶ ಕಟ್ಟಲು ಶ್ರಮಿಸುವ ಸಂಘಟನೆ ಇದು. ಸ್ವಯಂಸೇವಕರು ಯಾವ ಸನ್ಯಾಸಿಗೂ ಕಡಿಮೆ ಇಲ್ಲದಂತೆ ತ್ಯಾಗದ ಜೀವನ ರೂಪಿಸಿಕೊಳ್ಳುತ್ತಾರೆ. ದೇಶಸೇವೆಗೆ ಕಂಕಣಬದ್ಧರಾಗಿ ನಿಂತಿರುತ್ತಾರೆ. ಸ್ವಾರ್ಥರಹಿತ ಸೇವೆ ಮಾಡುವ ಈ ಸಂಘಟನೆಯ ಕುರಿತು ಅರಿವಿಲ್ಲದೆ, ತಿಳಿದುಕೊಳ್ಳದೆ, ಅನುಭವಕ್ಕೆ ಬರಲಾಗದೆ ಇಂಥ ಮಾತು ಹೇಳುವುದು ತಪ್ಪು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net