ಕರ್ನಾಟಕದಲ್ಲಿ 19 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಕೊಲೆ, ದರೋಡೆ ಪ್ರಕರಣದ ಆರೋಪಿಯನ್ನು ಬಂಧಿಸಿದ ಗುಜರಾತ್ ಪೊಲೀಸರು| Arrest

Untitled design (14)
Published on

Arrest: 2007ರಲ್ಲಿ ಗುಜರಾತ್​ನ ಸೂರತ್​ನಲ್ಲಿ ನಡೆದಿದ್ದ ಕೊಲೆ, ದರೋಡೆ ಪ್ರಕರಣದ ಪ್ರಮುಖ ಆರೋಪಿಯನ್ನು 19 ವರ್ಷಗಳ ಬಳಿಕ ಸೂರತ್ ಪೊಲೀಸರು ಕರ್ನಾಟದ ಉಡುಪಿ ಜಿಲ್ಲೆಯಲ್ಲಿ ಪತ್ತೆ ಹಚ್ಚಿ ಬಂಧಿಸಿದ್ದಾರೆ ಎಂದು ಶನಿವಾರ (ಸೆ. 13) ವರದಿಯಾಗಿದೆ.

ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ನರೇಶ್ ಕೇಸ್ರಿಮಲ್ಜಿ ರಾವಲ್​ನನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಕಳೆದ 19 ವರ್ಷಗಳಿಂದ ತಲೆಮರೆಸಿಕೊಂಡು, ನಕಲಿ ಗುರುತಿನ ಚೀಟಿ ಮಾಡಿಸಿಕೊಂಡು ಉಡುಪಿಯಲ್ಲಿ ವಾಸಿಸುತ್ತಿದ್ದ ಎನ್ನಲಾಗಿದ್ದು, ವಿಶೇಷ ಕಾರ್ಯಾಪಡೆ ರಹಸ್ಯ ಕಾರ್ಯಾಚರಣೆ ನಡೆಸಿ ಬಂಧಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಸೂರತ್ ನಗರ ಡಿಸಿಪಿ ರಾಜದೀಪ್ ಸಿಂಗ್ ನಕುಮ್, ನಮ್ಮ ವಿಶೇಷ ಕಾರ್ಯಾಚರಣೆ ತಂಡ (SOG), 45 ಸಾವಿರ ರೂಪಾಯಿಗಳ ಬಹುಮಾನ ಘೋಷಿತ ಆರೋಪಿಯಾಗಿದ್ದ  ವಾಂಟೆಡ್ ಆರೋಪಿಯನ್ನು ಬಂಧಿಸಿದೆ. 2007ರಲ್ಲಿ, ಆತ ಚಾಲಕನಾಗಿ ಕೆಲಸ ಮಾಡುತ್ತಿದ್ದಾಗ, ತನ್ನ ಸಹಚರರೊಂದಿಗೆ ಓರ್ವ ಭದ್ರತಾ ಸಿಬ್ಬಂದಿಯನ್ನು ಕೊಂದು ದರೋಡೆ ಮಾಡಿದ್ದ. ನಮ್ಮ ತಂಡವು ಆತನನ್ನು ಕರ್ನಾಟಕದ ಉಡುಪಿಯಲ್ಲಿ ಪತ್ತೆಹಚ್ಚಿ, ಅಂತಿಮವಾಗಿ ಬಂಧಿಸಿದೆ ಎಂದು ಹೇಳಿದ್ದಾರೆ.

ಘಟನೆಯ ಹಿನ್ನೆಲೆ

2007ರ ಸಮಯದಲ್ಲಿ ಆರೋಪಿ ರಾವಲ್ ಸೂರತ್‌ನ ಉಮ್ರಾದಲ್ಲಿ ಓರ್ವ ಶ್ರೀಮಂತ ಮನೆಯ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಆ ಮನೆ ಪುತ್ರರು ವಿದೇಶದಲ್ಲಿ ವಾಸಿಸುತ್ತಿದ್ದರು, ಮನೆಯಲ್ಲಿ ವೃದ್ಧ ದಂಪತಿಗಳು ಮಾತ್ರ ಇದ್ದದ್ದನ್ನು ನೋಡಿಕೊಂಡು ಮನೆಯ ದರೋಡೆಗೆ ಪ್ಲಾನ್ ಮಾಡಿದ್ದ ಎನ್ನಲಾಗಿದೆ.

ಮನೆಯಲ್ಲಿ ಸಲುಗೆ ಬೆಳೆಸಿಕೊಂಡು ತನ್ನ ಸಹಚರ ರವಿ ಪಾಂಡೆ ಜೊತೆಗೆ, ವಿಜಯ್ ಗುಪ್ತಾ, ಸಂತೋಷ್ ಗುಪ್ತಾರನ್ನು ಕರೆತಂದು ವೃದ್ಧ ದಂಪತಿಗೆ ಬೆದರಿಕೆ ಹಾಕಿ ಮನೆ ದರೋಡೆ ಮಾಡಿದ್ದರು. ಈ ವೇಳೆ ಅಡ್ಡ ಬಂದಿದ್ದ ಮನೆಯ ಸೆಕ್ಯೂರಿಟಿ ಒಬ್ಬನನ್ನು ಕೊಲೆ ಮಾಡಿ ಪರಾರಿಯಾಗಿದ್ದರು.

ಅಂದು ಮನೆಯಿಂದ ₹2 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣಗಳು ಮತ್ತು ವಿದೇಶಿ ಕರೆನ್ಸಿಯೊಂದಿಗೆ ಪರಾರಿಯಾಗಿದ್ದರು. ಪೊಲೀಸರು ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಿ ವಿಜಯ್ ಮತ್ತು ಸಂತೋಷ್ ಗುಪ್ತಾ ಅವರನ್ನು ಬಂಧಿಸಿದರು, ಆದರೆ ರಾವಲ್ ಮತ್ತು ಪಾಂಡೆ ಯಾವುದೇ ಕುರುಹು ಇಲ್ಲದೆ ನಾಪತ್ತೆಯಾಗಿದ್ದರು. ಸೂತ್ರಧಾರಿಯಾಗಿದ್ದ ರಾವಲ್ಮ ಪೊಲೀಸರ ಕಣ್ತಪ್ಪಿಸಲು ಮುಂಬೈ, ಚೆನ್ನೈ, ಬೆಳಗಾವಿ, ಉತ್ತರ ಕನ್ನಡ ನಗರಗಳಲ್ಲಿ ಆಗಾಗ್ಗೆ ತನ್ನ ಹೆಸರು ಮತ್ತು ಗುರುತನ್ನು ಬದಲಾಯಿಸುತ್ತಿದ್ದ ಎಂದು ತಿಳಿದು ಬಂದಿದೆ.

‘ಆರೋಪಿ ರಾವಲ್ ಬಂಧಿಸಿದವರಿಗೆ 45 ಸಾವಿರ ರೂ. ಬಹುಮಾನ ಘೋಷಿಸಲಾಗಿತ್ತು. ಇತ್ತೀಚಿನ ಗುಪ್ತಚರ ಮಾಹಿತಿಯ ಪ್ರಕಾರ ಆತ ಉಡುಪಿಯಲ್ಲಿ ವಾಸಿಸುತ್ತಿದ್ದಾನೆಂದು ತಿಳಿಯಿತು. ಈ ಸುಳಿವು ಆಧರಿಸಿ, ಎಸ್‌ಒಜಿ ಅಧಿಕಾರಿಗಳು ದಕ್ಷಿಣ ಭಾರತದ ವ್ಯಾಪಾರಿಗಳಂತೆ ವೇಷ ಧರಿಸಿ, ಪ್ರದೇಶಕ್ಕೆ ನುಸುಳಿ, ಆತನ ಗುರುತನ್ನು ಪತ್ತೆ ಹಚ್ಚಿದ್ದರು ಎನ್ನಲಾಗಿದೆ.

ರಾವಲ್, ಉಡುಪಿಯಲ್ಲಿ ತನ್ನ ಹೆಸರಲ್ಲಿ ಕೊರಾವರ್ ಅಡ್ಡ ಹೆಸರಿಟ್ಟುಕೊಂಡು ಅಮೃತಶಿಲೆಯ ಕಾರ್ಮಿಕ ಮತ್ತು ಚಾಲಕನಾಗಿ ಕೆಲಸ ಮಾಡ್ತಿದ್ದ. ಜೊತೆಗೆ ಇಲ್ಲಿಯೇ ಕೊರಾವರ್ ಸಮುದಾಯದ ಮಹಿಳೆಯನ್ನು ಮದುವೆಯಾಗಿದ್ದ ಎಂದು ತಿಳಿದು ಬಂದಿದೆ. ಸದ್ಯ ಆರೋಪಿಯನ್ನು ಬಂಧಿಸಿ ಪೊಲೀಸರು ಕರೆದೊಯ್ದಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net