ಗುಜರಾತ್ ಮಾದರಿ ಬಿಜೆಪಿ ಸಂಘಟನೆ

kattilu jan16
Published on

ಬೆಂಗಳೂರು: ರಾಜ್ಯದಲ್ಲಿ ಗುಜರಾತ್ ಮಾದರಿಯಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಲಾಗುವುದು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ 150 ಸ್ಥಾನಗಳನ್ನು ಪಡೆಯಲಾಗುವುದು ಎಂದು ನೂತನ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ಕುಮಾರ್ ಕಟೀಲ್ ಘೋಷಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆ ಬಳಿಕ ಮಾತನಾಡಿದ ಅವರು, ಗ್ರಾಮ ಮತ್ತು ಮಂಡಳ ಮಟ್ಟದಿಂದ ಪಕ್ಷವನ್ನು ಗಟ್ಟಿಯಾಗಿ ಕಟ್ಟುವ ಕಾರ್ಯಸೂಚಿ ಇಟ್ಟುಕೊಂಡಿದ್ದೇವೆ. ಗ್ರಾಮ ಪಂಚಾಯಿತಿಗಳಿಂದ ಹಿಡಿದು ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ಬಿಜೆಪಿ ಜಯ ಸಾಧಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪಕ್ಷದ ಸಧೃಢ ಸಂಘಟನೆ ಇಂದಿನ ತುರ್ತ. ಯಡಿಯೂರಪ್ಪ ಅವರ ಸಲಹೆ-ಮಾರ್ಗದರ್ಶನದಲ್ಲಿ, ಸಂಘ- ಸಂಸ್ಥೆಗಳ ಪ್ರಮುಖರ ಸಹಕಾರದೊಂದಗೆ ಪಕ್ಷ ಕಟ್ಟಲು ಕಂಕಣಬದ್ದನಾಗಿದ್ದೇನೆ ಎಂದರು.

58700 ಮತಗಟ್ಟೆಗಳ ಪೈಕಿ ಈಗಾಗಲೇ 47700 ಮತಗಟ್ಟೆಗಳಿಗೆ ಅಧ್ಯಕ್ಷರ ನೇಮಕ ಮಾಡಲಾಗಿದೆ. 306 ಮಂಡಳಗಳ ಪೈಕಿ 264ಕ್ಕೆ ಅಧ್ಯಕ್ಷರ ನೇಮಕವಾಗಿದೆ. 37 ಸಂಘಟನಾತ್ಮಕ ಜಿಲ್ಲಾ ಅಧ್ಯಕ್ಷರ ಪೈಕಿ ಈಗಾಗಲೇ 27 ಅಧ್ಯಕ್ಷರ ನೇಮಕ ಮಾಡಲಾಗಿದೆ ಎಂದ ಕಟೀಲ್, ಸರ್ಕಾರದ ಜನಪರ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಮೂಲಕ ಪಕ್ಷ ಸಂಘಟನೆಗೆ ಇನ್ನಷ್ಟು ಬಲ ತುಂಬಲು ಕಾರ್ಯಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿಸಿದರು.

ಕಟೀಲ್ ಅಧಿಕೃತ ಘೋಷಣೆ

ಚುನಾವಣೆ ಪ್ರಕ್ರಿಯೆಯಲ್ಲಿ ಬಿಜೆಪಿ ಅಧ್ಯಕ್ಷ ಹುದ್ದೆಗೆ ನಳಿನ್​ಕುಮಾರ್ ಕಟೀಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸಿ.ಟಿ.ರವಿ ಬಿಜೆಪಿ ಕಚೇರಿಯಲ್ಲಿ ಗುರುವಾರ ಅಧಿಕೃತವಾಗಿ ಘೋಷಣೆ ಮಾಡಿದರು. ಬೆಳಿಗ್ಗೆ 10 ಗಂಟೆ ತನಕ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿದ್ದರೂ, ಕಟೀಲ್ ಹೊರತುಪಡಿಸಿ ಯಾರೊಬ್ಬರೂ ನಾಮಪತ್ರ ಸಲ್ಲಿಸಲಿಲ್ಲ. ಆದಕಾರಣ ಕಟೀಲ್ ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಲಾಗುತ್ತಿದೆ ಎಂದು ಸಿ.ಟಿ.ರವಿ ಮಾಹಿತಿ ನೀಡಿದರು. ಮತದಾನಕ್ಕೆ 252 ಮತದಾರರು ಅರ್ಹರಿದ್ದರು. ಕಟೀಲ್ ನಾಮಪತ್ರಕ್ಕೆ 20 ಜನರು ಸೂಚಕರಾಗಿದ್ದರು. ಎಲ್ಲವನ್ನು ಪರಿಶೀಲಿಸಿ, ಕ್ರಮ ಬದ್ದವಾಗಿರುವುದನ್ನು ಖಚಿತಪಡಿಸಿಕೊಂಡು ಈ ಘೋಷಣೆ ಮಾಡುತ್ತಿದ್ದು, ಚುನಾವಣೆ ಪ್ರಕ್ರಿಯೆ ವರದಿಯನ್ನು ಕೇಂದ್ರಕ್ಕೆ ಕಳುಹಿಸಿಕೊಡುವುದಾಗಿ ಹೇಳಿದರು.

ಯಡಿಯೂರಪ್ಪ ಸಿಎಂ ಆದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ನಳಿನ್​ಕುಮಾರ್ ಕಟೀಲ್​ರನ್ನು ಹೈಕಮಾಂಡ್ ನೇಮಿಸಿತ್ತು.

ಬಿಜೆಪಿ ಸಾಂಸ್ಥಿಕ ಚುನಾವಣೆಗಳ ಘೋಷಣೆ ಹಿನ್ನೆಲೆಯಲ್ಲಿ ಅಧ್ಯಕ್ಷ ಹುದ್ದೆಗೆ ನಿಯಮಾವಳಿ ಪ್ರಕಾರವೇ ನಾಮಪತ್ರ ಸಲ್ಲಿಸಿ, ಚುನಾವಣೆ ಪ್ರಕ್ರಿಯೆ ಮೂಲಕ ಅಧ್ಯಕ್ಷರು ಆಯ್ಕೆ

ಯಾಗಬೇಕು ಎನ್ನುವ ನಿಯಮಾವಳಿಗಳು ಇರುವುದ ರಿಂದ ಈ ಪ್ರಕ್ರಿಯೆ ನಡೆಯಿತು. ರಾಷ್ಟ್ರೀಯ ಸಹ ಚುನಾವಣಾಧಿಕಾರಿ ಸಿ.ಟಿ.ರವಿ, ರಾಜ್ಯ ಚುನಾವಣಾಧಿಕಾರಿ ಅಶ್ವತ್ಥ್​ನಾರಾಯಣ್, ಉಪ ಚುನಾವಣಾಧಿಕಾರಿ ಹಾಲಪ್ಪ ಆಚಾರ್ ಈ ಪ್ರಕ್ರಿಯೆ ನಡೆಸಿಕೊಟ್ಟರು.

ಸಿಎಂ ಕೆಲಸ ಶ್ರೀಗಳು ಮಾಡಬಾರದು

ಹುಬ್ಬಳ್ಳಿ: ಸಚಿವ ಸಂಪುಟದಲ್ಲಿ ಯಾರಿಗೆ ಅವಕಾಶ ಕೊಡಬೇಕು, ಯಾರನ್ನು ಕೈ ಬಿಡಬೇಕು ಎನ್ನುವುದು ಮುಖ್ಯಮಂತ್ರಿಗೆ ಬಿಟ್ಟ ವಿಚಾರ. ಆದರೆ, ಈ ಕುರಿತು ಹೇಳುವ ಅಧಿಕಾರ ಮಠಾಧೀಶರಿಗೆ ಇಲ್ಲ. ಸ್ವಾಮೀಜಿಯಾದವರು ಒತ್ತಾಯ ಮಾಡುವುದೂ ಒಳ್ಳೆಯದಲ್ಲ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರ ಸೋಮೇಶ್ವರ ಜಗದ್ಗುರುಗಳು ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಕೆಲ ಮಠಾಧೀಶರು ರಾಜಕೀಯವಾಗಿ ಕೆಲ ಜಾತಿಗಳ ಪರ ಮಾತನಾಡುವುದನ್ನು ನೋಡುತ್ತಿದ್ದೇವೆ. ಯಾರು ಏನು ಮಾಡಿದ್ದಾರೋ ಅವರು ತಕ್ಕ ಫಲ ಅನುಭವಿಸುತ್ತಿದ್ದಾರೆ ಎಂದರು. ಪಂಚಪೀಠಗಳು ರಾಜಕೀಯದಿಂದ ದೂರ ಇದ್ದು, ಆದರ್ಶ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತಿವೆ. ಸರ್ವಜನಾಂಗಕ್ಕೂ ಹತ್ತಿರವಾಗುವಂಥ ಕಾರ್ಯಯೋಜನೆಗಳನ್ನು ರೂಪಿಸುತ್ತಿವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net