ಗುಜರಾತ್ ಗೆಲ್ಲಲು ಬಿಜೆಪಿ ಕಸರತ್ತು

dfgasdasd
Published on

ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯವಾದ ಗುಜರಾತ್​ನಲ್ಲಿ ಈ ವರ್ಷಾಂತ್ಯದ ವೇಳೆಗೆ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಬಿಜೆಪಿ ಈಗಲೇ ಪೂರ್ಣಪ್ರಮಾಣದ ತಯಾರಿ ನಡೆಸಿದೆ. 182 ಸ್ಥಾನಗಳ ಪೈಕಿ 150ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಮೋದಿ ಜನಪ್ರಿಯತೆಯನ್ನು ಉತ್ತುಂಗಕ್ಕೆ ಕೊಂಡೊಯ್ಯಬೇಕೆಂಬ ಗುರಿ ಬಿಜೆಪಿಯದ್ದು. ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೂ ಗುಜರಾತ್ ಚುನಾವಣೆ ಪ್ರತಿಷ್ಠೆಯ ಸಂಗತಿ. ಸ್ವಂತ ರಾಜ್ಯದಲ್ಲಿ ಮತ್ತೆ ಜಯ ಗಳಿಸಲು ಎಲ್ಲ ರೀತಿಯ ತಂತ್ರಗಾರಿಕೆ ಪ್ರಯೋಗಿಸಲು ಅವರು ಸಜ್ಜಾಗುತ್ತಿದ್ದಾರೆ.

2017ರ ಚುನಾವಣೆಯಿಂದ ಬಿಜೆಪಿ ಸಾಕಷ್ಟು ಪಾಠ ಕಲಿತಂತಿದೆ. ಹಿಂದಿನ ಬಾರಿಯಂತೆ ಚುನಾವಣೆಯನ್ನು ಹಗುರವಾಗಿ ತೆಗೆದುಕೊಳ್ಳುತ್ತಿಲ್ಲ. ಏಕೆಂದರೆ, 2017ರಲ್ಲಿ ಕೊನೆಯ ಸುತ್ತಿನಲ್ಲಿ ನರೇಂದ್ರ ಮೋದಿ ಅವರು ಪ್ರಚಾರದ ಜವಾಬ್ದಾರಿ ತೆಗೆದುಕೊಳ್ಳದೆ ಹೋಗಿದ್ದರೆ, ಗುಜರಾತ್​ನಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವ ಸಾಧ್ಯತೆ ಇರಲಿಲ್ಲ ಎಂಬ ಭಾವನೆ ಪಕ್ಷದಲ್ಲಿ ಈಗಲೂ ಇದೆ.

ಹೀಗಾಗಿ, ಮುಂಬರುವ ಚುನಾವಣೆಯನ್ನು ಪಕ್ಷದ ನಾಯಕತ್ವ ಗಂಭೀರವಾಗಿ ತೆಗೆದುಕೊಂಡಿದ್ದು, ಅಲ್ಲಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ರಾಷ್ಟ್ರಮಟ್ಟದಲ್ಲಿ ಬಿಜೆಪಿಯನ್ನು ಮುನ್ನಡೆಸುತ್ತಿರುವ ಪ್ರಧಾನ ಮಂತ್ರಿ ಮತ್ತು ಗೃಹ ಸಚಿವರು- ಇವರಿಬ್ಬರ ತವರು ರಾಜ್ಯವಾಗಿರುವುದರಿಂದ ಗುಜರಾತ್ ಚುನಾವಣೆ ರಾಷ್ಟ್ರ ರಾಜಕಾರಣದ ದೃಷ್ಟಿಯಿಂದ ಬಿಜೆಪಿಗೆ ನಿರ್ಣಾಯಕವಾಗಿದೆ.

ನರೇಂದ್ರ ಮೋದಿಯವರ ಜನಪ್ರಿಯತೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಮೂಲಕ ಈ ಬಾರಿ 150 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಬಿಜೆಪಿ ಹಾಕಿಕೊಂಡಿದೆ. ಪಶ್ಚಿಮದ ಈ ರಾಜ್ಯದಲ್ಲಿ ಬಿಜೆಪಿ 1995ರಿಂದ ನಿರಂತರವಾಗಿ ವಿಧಾನಸಭೆ ಚುನಾವಣೆಗಳನ್ನು ಗೆಲ್ಲುತ್ತ ಬಂದಿದೆ. ಆದರೆ, ಇದುವರೆಗೆ 127ಕ್ಕಿಂತ ಹೆಚ್ಚಿನ ಸ್ಥಾನಗಳಲ್ಲಿ ಅದು ಗೆಲುವು ಸಾಧಿಸಿಲ್ಲ. 2017ರಲ್ಲಿ 100 ಅಂಕಿಗಳ ಗಡಿಯನ್ನು ಕೂಡ ದಾಟಲು ಬಿಜೆಪಿಗೆ ಸಾಧ್ಯವಾಗಿರಲಿಲ್ಲ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಇತ್ತೀಚೆಗೆ ದೆಹಲಿಯಲ್ಲಿ ಚುನಾವಣೆ ತಂತ್ರಗಾರಿಕೆ ಹೆಣೆಯಲು ಪ್ರಮುಖರೊಂದಿಗೆ ಸರಣಿ ಸಭೆಗಳನ್ನು ನಡೆಸಿದರು. ನಿರ್ದಿಷ್ಟ ಸಮುದಾಯವನ್ನು ಹೇಗೆ ತಲುಪಬೇಕು ಎಂಬ ಬಗೆಗೆ ರ್ಚಚಿಸಿದರು. ಇನ್ನೊಂದೆಡೆ, ಮೋದಿ ಮತ್ತು ಅಮಿತ್ ಷಾ ಅವರು ರಾಜ್ಯದ ಪರಿಸ್ಥಿತಿ ಅವಲೋಕಿಸಲು ಆಗಾಗ್ಗೆ ಅಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದಂತೆ ಇಂತಹ ಭೇಟಿಗಳ ಸಂಖ್ಯೆಯೂ ಹೆಚ್ಚಾಗಲಿದೆ.

ಸುಲಭವಾಗಿಲ್ಲ ಗುರಿ

150 ಸ್ಥಾನಗಳನ್ನು ಗೆಲ್ಲುವ ಗುರಿ ಸಾಧಿಸಬೇಕಾದರೆ ಬಿಜೆಪಿ ಹರಸಾಹಸಪಡಬೇಕಾಗಿದೆ. ತನ್ನ ಸಾಂಪ್ರದಾಯಿಕ ನಗರ ಮತದಾರರನ್ನು ಮಾತ್ರವಲ್ಲದೆ, ಕಾಂಗ್ರೆಸ್​ನ ಸಾಂಪ್ರದಾಯಿಕ ಮತಬ್ಯಾಂಕ್ ಆಗಿರುವ ಆದಿವಾಸಿ ಗಳು, ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಜನರು, ದಲಿತರು ಮತ್ತು ಪಾಟೀದಾರ್ ಸಮುದಾಯ ದವರನ್ನು ತನ್ನತ್ತ ಸೆಳೆಯುವ ತಂತ್ರವನ್ನು ಪಕ್ಷ ರೂಪಿಸುತ್ತಿದೆ. ಈ ಹಿನ್ನೆಲೆಯಲ್ಲಿಯೇ ಪ್ರಧಾನಿ ಮೋದಿ ಅವರು, ಇದುವರೆಗೆ ಕಾಂಗ್ರೆಸ್​ನ ಭದ್ರಕೋಟೆಯಾಗಿದ್ದ ಬುಡಕಟ್ಟು ಪ್ರಾಬಲ್ಯದ ಪ್ರದೇಶವಾದ ದಾಹೋದ್​ಗೆ ಈಚೆಗೆ ಭೇಟಿ ನೀಡಿದ್ದರು.

ಹಿನ್ನಡೆಗೆ ಕಾರಣ ಏನು?

2017ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೂ, ಸೀಟುಗಳ ಸಂಖ್ಯೆಯಲ್ಲಿ ಹಿನ್ನಡೆ ಅನುಭವಿಸಿತು. ಜಿಎಸ್​ಟಿ, ನೋಟು ರದ್ದತಿ, ಗ್ರಾಮೀಣ ಜನ ರಲ್ಲಿ ಅಸಮಾಧಾನ, ಆಡಳಿತ ವಿರೋಧಿ ಅಲೆ, ಪಾಟೀದಾರ ಸಮುದಾಯದ ಆಕ್ರೋಶ, ದುರ್ಬಲ ಮುಖ್ಯಮಂತ್ರಿ ಇವು ಬಿಜೆಪಿ ಹಿನ್ನಡೆಗೆ ಪ್ರಮುಖ ಕಾರಣಗಳು ಎಂಬುದು ತಜ್ಞರ ಅಭಿಮತವಾಗಿದೆ. ಸೌರಾಷ್ಟ್ರ ಪ್ರದೇಶದಲ್ಲಿ 12 ಸೀಟುಗಳ ಕುಸಿತವನ್ನು ಬಿಜೆಪಿ ಕಂಡಿತು. ಇದು ಹತ್ತಿ ಬೆಳೆಯುವ ಪ್ರದೇಶವಾಗಿದ್ದು, ಈ ಉತ್ಪನ್ನದ ಬೆಲೆ ಕುಸಿತವಾಗಿದ್ದ ರಿಂದ ರೈತರು ಬಿಜೆಪಿ ಬಗೆಗೆ ಭರವಸೆ ಕಳೆದುಕೊಂಡದ್ದು ಚುನಾವಣೆ ಮೇಲೆ ಪರಿಣಾಮ ಬೀರಿತು ಎನ್ನಲಾಗಿದೆ.

ಪಾಟೀದಾರ್ ಪಾಲಿಟಿಕ್ಸ್

ಗುಜರಾತ್​ನಲ್ಲಿ ಪಾಟೀದಾರ್ ಸಮುದಾಯದ ಮತಗಳು ಪ್ರಮುಖ ಪಾತ್ರ ವಹಿಸುತ್ತವೆ. ಒಟ್ಟಾರೆ ಮತದಾರರ ಪೈಕಿ ಈ ಸಮುದಾಯಕ್ಕೆ ಸೇರಿದವರು ಶೇ. 12ರಷ್ಟು ಇದ್ದಾರೆ. ಇತರೆ ಹಿಂದುಳಿದ ವರ್ಗಗಳ ಸ್ಥಾನಮಾನ ನೀಡಿ ಸಮುದಾಯಕ್ಕೆ ಮೀಸಲು ಕಲ್ಪಿಸಬೇಕೆಂದು ಪಾಟೀದಾರರು ಹೋರಾಟ ಕೈಗೊಂಡಿದ್ದಾರೆ. ಈ ಹೋರಾಟದ ನೇತೃತ್ವ ವಹಿಸಿದ ಯುವಕ ಹಾರ್ದಿಕ್ ಪಟೇಲ್. ಈ ಸಮುದಾಯದ ಬೃಹತ್ ಪ್ರಮಾಣದ ಮತಗಳ ಮೇಲೆ ಕಟ್ಟಿರುವ ಬಿಜೆಪಿ ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದ ಹಾರ್ದಿಕ್ ಪಟೇಲ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದೆ.

2017ರ ಫಲಿತಾಂಶ

ಗುಜರಾತ್​ನಲ್ಲಿ 1995ರಿಂದ ಸತತವಾಗಿ ವಿಧಾನಸಭೆ ಚುನಾವಣೆಗಳನ್ನು ಬಿಜೆಪಿ ಗೆಲ್ಲುತ್ತ ಬಂದಿದೆ. 2017ರ ಚುನಾವಣೆಯಲ್ಲಿ ಬಹುತೇಕವಾಗಿ ಅಧಿಕಾರವು ಬಿಜೆಪಿ ಕೈತಪ್ಪಿತು ಎನ್ನುವ ಪರಿಸ್ಥಿತಿ ಇತ್ತು. ಕೊನೇ ಹಂತದಲ್ಲಿ ಪ್ರಧಾನಿ ಮೋದಿ ಅವರ ಅಖಾಡ ಪ್ರವೇಶದಿಂದ ಪರಿಸ್ಥಿತಿ ಪಕ್ಷದ ಪರವಾಗಿ ತಿರುಗಿತು. ಒಟ್ಟು 182 ಸ್ಥಾನಗಳ ಪೈಕಿ ಬಿಜೆಪಿಗೆ ಗೆಲ್ಲಲು ಸಾಧ್ಯವಾಗಿದ್ದು 99 ಸ್ಥಾನಗಳಲ್ಲಿ ಮಾತ್ರ. 2012ರಲ್ಲಿ 115 ಸ್ಥಾನಗಳಲ್ಲಿ ಗೆದ್ದಿದ್ದ ಬಿಜೆಪಿ 16 ಸ್ಥಾನಗಳ ಕುಸಿತ ಕಂಡಿತ್ತು. ಬಹುಮತಕ್ಕೆ ಬೇಕಾಗಿದ್ದು 93 ಸ್ಥಾನಗಳು. ಇನ್ನು, ಕಾಂಗ್ರೆಸ್ 77 ಸ್ಥಾನಗಳನ್ನು ಗೆದ್ದು ಹಿಂದಿನ ಚುನಾವಣೆಗಿಂತ 16 ಸ್ಥಾನಗಳನ್ನು ಹೆಚ್ಚಿಸಿಕೊಂಡಿತ್ತು. ಬಿಜೆಪಿ ಶೇಕಡಾ 49 ರಷ್ಟು ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್ ಶೇಕಡಾ 41.5 ರಷ್ಟು ಮತಗಳನ್ನು ಗಳಿಸಿತ್ತು.

40 ಸ್ಥಾನ ಮೀಸಲು

ಗುಜರಾತ್ ವಿಧಾನಸಭೆಯ ಒಟ್ಟು 182 ಸ್ಥಾನಗಳ ಪೈಕಿ, 27 ಸ್ಥಾನಗಳು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿವೆ. ಬನಸ್ಕಾಂತ, ಸಬರ್ಕಾಂತ, ಅರಾವಳಿ, ಮಹಿಸಾಗರ್, ಪಂಚಮಕಲ್, ದಾಹೋದ್, ಛೋಟಾದೇಪುರ್, ನರ್ಮದಾ, ಭರೂಚ್, ತಾಪಿ, ವಲ್ಸಾದ್, ನವಸಾರಿ, ದಾಂಗ್, ಸೂರತ್ ಮುಂತಾದ ಜಿಲ್ಲೆಗಳಲ್ಲಿ ಬುಡಕಟ್ಟು ಮತದಾರರು ನಿರ್ಣಾಯಕ ಸಂಖ್ಯೆ ಯಲ್ಲಿದ್ದಾರೆ. 13 ವಿಧಾನಸಭೆ ಕ್ಷೇತ್ರಗಳು ಪರಿಶಿಷ್ಟ ಜಾತಿಗೆ ಮೀಸಲಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net