

ಭಾರತದಲ್ಲಿ ಸದ್ಯ ಲಾಕ್ಡೌನ್ ಇದೆ. ಕರೊನಾ ವೈರಸ್ ನಿಯಂತ್ರಣಕ್ಕಾಗಿ ಇಡೀ ದೇಶವನ್ನು ಬಂದ್ ಮಾಡಿದ್ದರೂ ಅಗತ್ಯ ಸೇವೆಗಳು ನಡೆಯುತ್ತಿವೆ. ಅದರಲ್ಲಿ ಬ್ಯಾಂಕ್ಗಳೂ ಹೌದು.
ಗ್ರಾಹಕರು ಬರುವ ಪ್ರಮಾಣ ಕಡಿಮೆ ಇದ್ದರೂ ಬ್ಯಾಂಕ್ಗಳ ಸೇವೆ ಅಗತ್ಯ ಆಗಿದ್ದರಿಂದ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ಅಲ್ಲಿನ ಸಿಬ್ಬಂದಿ, ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ.
ಈ ಮಧ್ಯೆ ಗುಜರಾತ್ನ ಬ್ಯಾಂಕ್ ಆಫ್ ಬರೋಡಾದ ಶಾಖೆಯಲ್ಲಿ ಕ್ಯಾಶಿಯರ್ ತೆಗೆದುಕೊಳ್ಳುತ್ತಿರುವ ಮುಂಜಾಗ್ರತಾ ಕ್ರಮ ಎಲ್ಲರ ಹುಬ್ಬೇರಿಸುವಂತೆ ಮಾಡುತ್ತಿದೆ. ಅದರ ವಿಡಿಯೋ ಎಲ್ಲೆಡೆ ಸಿಕ್ಕಾಪಟೆ ವೈರಲ್ ಆಗುತ್ತಿದೆ.
ಉದ್ಯಮಿ ಆನಂದ್ ಮಹೀಂದ್ರಾ ಅವರು ತಮ್ಮ ಟ್ವಿಟರ್ನಲ್ಲಿ ವಿಡಿಯೋ ಪೋಸ್ಟ್ ಮಾಡಿಕೊಂಡಿದ್ದಾರೆ. ಮಹಿಳೆಯೋರ್ವರು ಬ್ಯಾಂಕ್ಗೆ ಬಂದು ಹೊರಗಿನಿಂದಲೇ ಕಿಟಕಿ ಮೂಲಕ ಬ್ಯಾಂಕ್ ಸಿಬ್ಬಂದಿಯೋರ್ವನ ಕೈಯಿಗೆ ಚೆಕ್ ನೀಡುತ್ತಾರೆ. ಹಾಗೇ ಕ್ಯಾಶ್ಗಾಗಿ ಕಾಯುತ್ತ ನಿಲ್ಲುತ್ತಾರೆ. ಆ ಚೆಕ್ನ್ನು ಕ್ಯಾಶಿಯರ್ಗೆ ಕೊಟ್ಟರೆ ಅವರು ಅದನ್ನು ಕೈಯಲ್ಲಿ ಮುಟ್ಟದೆ ಚಿಮ್ಮಟಿಗೆಯಲ್ಲಿ ತೆಗೆದುಕೊಳ್ಳುತ್ತಾರೆ. ಹಾಗೇ ಚೆಕ್ ಮೇಲೆ ಇಸ್ತ್ರಿಪೆಟ್ಟಿಗೆ ಇಟ್ಟು ಅದನ್ನು ಬಿಸಿ ಮಾಡುತ್ತಾರೆ. ಅವರು ಇಷ್ಟೆಲ್ಲ ಮಾಡುವುದು ಕರೊನಾ ವೈರಸ್ ಭಯದಿಂದ. ಒಂದೊಮ್ಮೆ ವೈರಸ್ಗಳು ಇದ್ದರೂ ಹಾಗೆ ಬಿಸಿ ಮಾಡಿದರೆ ಸಾಯುತ್ತವೆ ಎಂಬ ನಂಬಿಕೆಯಿಂದ. ಮಾಸ್ಕ್, ಗ್ಲೌಸ್ ಹಾಕಿಕೊಂಡು ಹೀಗೆ ಇಸ್ತ್ರಿ ಮಾಡುತ್ತಿರುವ ಕ್ಯಾಶಿಯರ್ ಅವರ ಕೆಲಸ ಅನೇಕರ ಗಮನ ಸೆಳೆದಿದೆ.
ವಿಡಿಯೋ ಪೋಸ್ಟ್ ಮಾಡಿದ ಆನಂದ್ ಮಹೀಂದ್ರಾ ಅವರು, ನನಗೆ ಇದು ವಾಟ್ಸ್ಆ್ಯಪ್ನಲ್ಲಿ ಬಂದ ವಿಡಿಯೋ. ಕ್ಯಾಶಿಯರ್ ಅನುಸರಿಸುತ್ತಿರುವ ಕ್ರಮ ಎಷ್ಟು ಪರಿಣಾಮಕಾರಿ ಎಂಬುದು ಗೊತ್ತಿಲ್ಲ. ಆದರೆ ಅವರ ಕ್ರಿಯಾಶೀಲತೆಯನ್ನು ನಾವು ಶ್ಲಾಘಿಸಲೇಬೇಕು ಎಂದಿದ್ದಾರೆ.
ಸುಮಾರು 27 ಸೆಕೆಂಡ್ಗಳ ವಿಡಿಯೋವನ್ನು ಇದುವರೆಗೂ 20 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಹಾಗೇ 3 ಸಾವಿರಕ್ಕೂ ಹೆಚ್ಚು ಸಲ ರೀಟ್ವೀಟ್ ಆಗಿದೆ. ಹಾಗೇ ನೆಟ್ಟಿಗರು ವಿವಿಧ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ. ಅಚ್ಚರಿ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)