

Arrest: ದೇಶದಲ್ಲಿ ಅಲ್ಖೈದಾ ಉಗ್ರ ಸಂಘಟನೆಯ ಪ್ರಭಾವ ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡ್ತಿದ್ದ ಆರೋಪ ಹಿನ್ನೆಲೆ ಜಾರ್ಖಂಡ್ ಮೂಲದ 33 ವರ್ಷದ ಮಹಿಳೆಯೊಬ್ಬರನ್ನು ಗುಜರಾತ್ ಎಟಿಎಸ್ ಅಧಿಕಾರಿಗಳು ಬುಧವಾರ (ಜು.30) ಬೆಂಗಳೂರಿನಲ್ಲಿ ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಶಮಾ ಪರ್ವೀನ್ ಎಂಬ ಶಂಕಿತ ಮಹಿಳೆಯನ್ನು ಬೆಂಗಳೂರಿನ ಮನೋರಾಯನಪಾಳ್ಯದಲ್ಲಿ ಬಂಧಿಸಲಾಗಿದೆ. ಬೆಂಗಳೂರು ಪೊಲೀಸರ ಜೊತೆಗೂಡಿ ಗುಜರಾತ್ ಎಟಿಎಸ್ ಅಧಿಕಾರಿಗಳು ಆಕೆಯ ನಿವಾಸದ ಮೇಲೆ ದಾಳಿ ಮಾಡಿ ಬಂಧಿಸಿದ್ದಾರೆ. ಅಲ್ಖೈದಾ ಸಂಘಟನೆಯ ಸಾಮಾಜಿಕ ಮಾಧ್ಯಮ ಪ್ರಚಾರದ ಅವಿಭಾಜ್ಯ ಅಂಗವಾಗಿದ್ದಳು ಎನ್ನಲಾಗಿದೆ.
ಶಂಕಿತ ಪರ್ವೀನ್ ಪದವಿ ಪಡೆದಿದ್ದು, ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ತನ್ನ ಸಹೋದರನೊಂದಿಗೆ ಮೂರು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. 'strangers_nation02' ಇನ್‌ಸ್ಟಾಗ್ರಾಮ್ ಖಾತೆ ಮತ್ತು 'Strangers of The Nation' ಮತ್ತು 'Strangers of The Nation 2' ಫೇಸ್‌ಬುಕ್ ಪುಟಗಳು ಶಮಾ ನಿರ್ವಹಣೆ ಮಾಡ್ತಿದ್ದಳು ಎನ್ನಲಾಗಿದೆ. ಈ ಪುಟಗಳಲ್ಲಿ ಜಿಹಾದಿ ಘೋಷಣೆಗಳನ್ನು ಪ್ರಸಾರ ಮಾಡುತ್ತಿರುವುದು ಕಂಡುಬಂದಿದೆ.
ಎಟಿಎಸ್ ಡಿಐಜಿ ಸುನಿಲ್ ಜೋಶಿ ಮಾತನಾಡಿ "ಈ ಹಿಂದೆ ಗುಜರಾತ್ನಲ್ಲಿ ಬಂಧಿಸಲಾದ ನಾಲ್ವರು ಭಯೋತ್ಪಾದಕರ ರಿಮಾಂಡ್ ವಿಚಾರಣೆಯ ಸಮಯದಲ್ಲಿ, ಮಹಿಳೆಯೊಬ್ಬರ ಹೆಸರು ಹೊರಬಂದಿತು. ನಮ್ಮ ತನಿಖೆಯಲ್ಲಿ ಆಕೆಗೆ ಪಾಕಿಸ್ತಾನದೊಂದಿಗಿನ ಸಂಪರ್ಕ ಇರುವುದು ಬೆಳಕಿಗೆ ಬಂದಿತು, ನಂತರ ನಾವು ಆಳವಾದ ತನಿಖೆಯನ್ನು ಪ್ರಾರಂಭಿಸಿದ್ದೇವೆ. ಆಕೆ ದೆಹಲಿಯ ಮೊಹಮ್ಮದ್ ಫೈಕ್ ಜೊತೆ ಸಂಪರ್ಕದಲ್ಲಿದ್ದಾಳೆ ಎಂದು ಕಂಡುಬಂದಿದೆ" ಎಂದು ಹೇಳಿದರು.
"ನಾವು 'ಸ್ಟ್ರೇಂಜರ್ ನೇಷನ್-2' ಹೆಸರಿನ ಖಾತೆಯ ಬಗ್ಗೆ ತನಿಖೆ ಆರಂಭಿಸಿದೆವು ಮತ್ತು ತಕ್ಷಣ ಅದಕ್ಕೆ ಸಂಬಂಧಿತ ಫೇಸ್‌ಬುಕ್ ಪುಟಗಳನ್ನು ಗುರುತಿಸಿದೆವು. ಅದೇ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯು ವಿಶೇಷವಾಗಿ ಜನಪ್ರಿಯವಾಗಿತ್ತು. ಅದರ ಮೂಲವನ್ನು ಪತ್ತೆಹಚ್ಚುತ್ತಿದ್ದಂತೆ, ಶಮಾ ಪರ್ವೀನ್ ಅವರೇ ಆ ಖಾತೆಗಳನ್ನು ನಡೆಸುತ್ತಿದ್ದಾರೆ ಎಂದು ತಿಳಿಯಿತು" ಎಂದು ಡಿಐಜಿ ಜೋಶಿ ಹೇಳಿದರು.
ಶಮಾ ಪರ್ವೀನ್ ನಿರ್ವಹಿಸುವ ಫೇಸ್‌ಬುಕ್ ಪುಟಗಳು ಭಾರತೀಯ ಉಪಖಂಡದಲ್ಲಿ ನಿಷೇಧಿತ ಭಯೋತ್ಪಾದಕ ಗುಂಪು ಅಲ್-ಖೈದಾ (AQIS) ನ ನಾಯಕ ಮೌಲಾನಾ ಅಸಿಮ್ ಉಮರ್ ಹೊರಡಿಸಿದ ಜಿಹಾದಿ ಘೋಷಣೆಗಳನ್ನು ಪ್ರಸಾರ ಮಾಡುತ್ತಿರುವುದು ಕಂಡುಬಂದಿದೆ.ಈ ಪೋಸ್ಟ್‌ಗಳು ಸಶಸ್ತ್ರ ದಂಗೆಯನ್ನು ವೈಭವೀಕರಿಸಿದವು, ಘಜ್ವಾ-ಎ-ಹಿಂದ್ ಅನ್ನು ಪ್ರಚಾರ ಮಾಡಿದವು ಮತ್ತು ಭಾರತ ಸರ್ಕಾರದ ವಿರುದ್ಧ ಪುರಾಣ ಆಧಾರಿತ ಹಿಂಸೆ ಮತ್ತು ಭಯೋತ್ಪಾದಕ ಕೃತ್ಯಗಳನ್ನು ಉತ್ತೇಜಿಸಿದವು" ಎಂದು ಭಯೋತ್ಪಾದನಾ ನಿಗ್ರಹ ದಳ (ATS) ಹೇಳಿದೆ.
ಸದ್ಯ ಶಮಾ ಫೋನ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದು, ವಿದೇಶಿ ಸಂಸ್ಥೆ, ವ್ಯಕ್ತಿಗಳ ಜೊತೆ ಸಂಪರ್ಕ ಸೇರಿದಂತೆ ಹಲವಾರು ಅನುಮಾನಾಸ್ಪದ ಸಾಮಾಜಿಕ ಮಾಧ್ಯಮ ಮತ್ತು ಇಮೇಲ್ ಖಾತೆಗಳು ಪತ್ತೆಯಾಗಿವೆ ಎನ್ನಲಾಗಿದೆ. ಶಂಕಿತಳನ್ನು ಎಟಿಎಸ್ ತೀವ್ರ ವಿಚಾರಣೆಗೊಳಪಡಿಸಿದೆ. (ಏಜೆನ್ಸೀಸ್)