

ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು
ರಾಜ್ಯದಲ್ಲಿ ಭೂಸ್ವಾಧೀನ ಪ್ರಕ್ರಿಯೆ ವೇಳೆ ಅವೈಜ್ಞಾನಿಕ ಪರಿಹಾರ ನೀತಿಯಿಂದ ಸರ್ಕಾರದ ಬೊಕ್ಕಸಕ್ಕೆ ಉಂಟಾಗುತ್ತಿರುವ ನಷ್ಟ ತಪ್ಪಿಸಲು ಕಂದಾಯ ಇಲಾಖೆ ಮಾರ್ಗಸೂಚಿ ರಚನೆಗೆ ನಿರ್ಧರಿಸಿದೆ.
ಕೈಗಾರಿಕೆ, ಹೆದ್ದಾರಿ, ರೈಲು, ಜಲಾಶಯ, ಮೂಲಸೌಕರ್ಯ, ಹೊಸ ಬಡಾವಣೆ ಸೇರಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿವಿಧ ಜಿಲ್ಲೆಗಳಲ್ಲಿ ಸಾವಿರಾರು ಎಕರೆ ಭೂಸ್ವಾಧೀನ ನಡೆಸುತ್ತಿದೆ. ಯೋಜನೆ ಕೈಗೊಳ್ಳುವ ಪ್ರಾಧಿಕಾರ, ನಿಗಮ, ಇಲಾಖೆಗಳು ಜಮೀನು ವಾರಸುದಾರರಿಗೆ ಪರಿಹಾರ ನೀಡುತ್ತವೆ. ಈ ಪರಿಹಾರ ಮೊತ್ತ ಯೋಜನೆ ಮತ್ತು ಜಮೀನಿನ ಮಾರ್ಗಸೂಚಿ ದರದ ಆಧಾರದ ಮೇಲೆ ನಿಗದಿ ಮಾಡಲಾಗುತ್ತದೆ.
ಇದರ ಜವಾಬ್ದಾರಿಯನ್ನು ಕಂದಾಯ ಇಲಾಖೆಯಿಂದ ನೇಮಕಗೊಳ್ಳುವ ವಿಶೇಷ ಭೂಸ್ವಾಧೀನ ಅಧಿಕಾರಿ (ಎಸ್‌ಎಲ್‌ಒ) ವಹಿಸುತ್ತಾರೆ. ಕೆಲ ಅಧಿಕಾರಿಗಳ ಬೇಜವಾಬ್ದಾರಿ, ಅವೈಜ್ಞಾನಿಕ ನೀತಿಯಿಂದ ಪರಿಹಾರ ಮೊತ್ತ ಸರ್ಕಾರ ನಿಗದಿ ಮಾಡಿದಕ್ಕಿಂತ ಹೆಚ್ಚಾಗಿ ಬೊಕ್ಕಸಕ್ಕೆ ಹೊರೆ ಆಗುತ್ತಿದೆ. ಸಕಾಲದಲ್ಲಿ ಪರಿಹಾರ ನೀಡಲು ಸಾಧ್ಯವಾಗದೆ ಯೋಜನೆಯೂ ಪೂರ್ಣವಾಗುತ್ತಿಲ್ಲ.
ಬಹುತೇಕ ಸನ್ನಿವೇಶದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಶುರು ಮಾಡಿದಾಗ ಭೂ ಮಾಲೀಕರು, ನಿಗದಿಗಿಂತ ಹೆಚ್ಚಿನ ಪರಿಹಾರ ಕೋರಿ ಕೋರ್ಟ್ ಮೆಟ್ಟಿಲೇರುತ್ತಾರೆ. ಈ ವೇಳೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಎಸ್‌ಎಲ್‌ಒಗಳು ಕೋರ್ಟ್‌ಗೆ ಹಾಜರಾಗುವುದಿಲ್ಲ. ಸಕಾಲದಲ್ಲಿ ಕೋರ್ಟ್‌ಗೆ ಸೂಕ್ತ ದಾಖಲೆ ಒದಗಿಸುವುದಿಲ್ಲ. ಪರಿಣಾಮ ನ್ಯಾಯಾಲಯ, ಅರ್ಜಿದಾರನ ಪರವಾಗಿ ಹೆಚ್ಚಿನ ಪರಿಹಾರ ನೀಡುವಂತೆ ಆದೇಶಿಸುತ್ತದೆ. ಆದೇಶ ಪಾಲನೆ ಮಾಡದೆ ಇದ್ದಾಗ ಜಿಲ್ಲಾಧಿಕಾರಿ ಅಥವಾ ಸಂಬಂಧಪಟ್ಟ ಅಧಿಕಾರಿ ವಾಹನ, ಕಚೇರಿ ಜಪ್ತಿಗೂ ನ್ಯಾಯಾಲಯ ಸೂಚಿಸುತ್ತದೆ.
ಆದರಿಂದ ಇಂತಹ ಸಂದರ್ಭಗಳಲ್ಲಿ ನ್ಯಾಯಾಲಯಕ್ಕೆ ಎಸ್‌ಎಲ್‌ಒ ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಿ ಆಕ್ಷೇಪಣೆ ಸಲ್ಲಿಸಬೇಕು ಅಥವಾ ಮೇಲ್ಮನವಿ ಸಲ್ಲಿಸಿ, ದಾಖಲೆ ಸಮೇತ ವಾದ ಮಂಡಿಸಬೇಕು. ಇದಕ್ಕಾಗಿ ಹಿರಿಯ ವಕೀಲರನ್ನು ನೇಮಕ ಮಾಡಿಕೊಂಡು ಕೋರ್ಟ್‌ನಲ್ಲಿ ಸಮರ್ಥನೆ ಮಾಡಿಕೊಳ್ಳಬೇಕು. ಪರಿಹಾರ ನೀಡುವಾಗ ಸ್ಯಾಟ್‌ಲೈಟ್ ಇಮೇಜ್, ಕೆಲ ವರ್ಷಗಳ ಭೂ ದಾಖಲೆ ಪರಿಶೀಲನೆ ನಡೆಸಿ ಜಮೀನಿನ ವಾಸ್ತವಾಂಶ ಗಮನಿಸಿ ಪರಿಹಾರ ನಿಗದಿ ಮಾಡಬೇಕು. ಈ ಎಲ್ಲ ವಿಷಯ ಒಳಗೊಂಡಂತೆ ರಾಜ್ಯಕ್ಕೆ ಅನ್ವಯಿಸುವಂತೆ ಮಾರ್ಗಸೂಚಿ ರೂಪಿಸಲು ಕಂದಾಯ ಸಚಿವ ಕೃಷ್ಣಬೈರೇಗೌಡ ನಿರ್ಧರಿಸಿದ್ದಾರೆ. ಈ ನಿಟ್ಟಿನಲ್ಲಿ ಸಭೆಗಳನ್ನು ಮಾಡಿ ಸಾಧಕ-ಬಾಧಕಗಳ ಚರ್ಚೆ ನಡೆಸಿದ್ದು, ಶೀಘ್ರದಲ್ಲಿ ಮಾರ್ಗಸೂಚಿ ರಚಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪರಿಹಾರಕ್ಕೆ ಪ್ರತ್ಯೇಕ ತಂತ್ರಾಂಶ
ಭೂಸ್ವಾಧೀನ ಮತ್ತು ಜಮೀನು ಪರಿಹಾರ ಸಂಬಂಧ ಪ್ರತ್ಯೇಕ ಅಪ್ಲಿಕೇಷನ್ ರೂಪಿಸಲು ನಿರ್ಧರಿಸಲಾಗಿದೆ. ಯಾವ ಯೋಜನೆಗೆ, ಎಲ್ಲಿ ಭೂಸ್ವಾಧೀನ ಮಾಡಲಾಗುತ್ತಿದೆ? ಮಾಲೀಕರಿಗೆ ಪರಿಹಾರ ಎಷ್ಟು ನಿಗದಿಯಾಗಿದೆ? ಅದರ ಮಾನದಂಡ ಏನು? ಎಂಬ ಬಗ್ಗೆ ಸಮಗ್ರ ಮಾಹಿತಿ ಇರಲಿದೆ.
ಯೋಜನೆಗಿಂತ ಪರಿಹಾರವೇ ಹೆಚ್ಚು
ಕೃಷ್ಣಾ ಮೇಲ್ದಂಡೆ ಯೋಜನೆಯ ಭೂಸ್ವಾಧೀನಕ್ಕೆ 17,000 ಕೋಟಿ ರೂ. ಸೇರಿ ಯೋಜನೆಗೆ 51 ಸಾವಿರ ಕೋಟಿ ರೂ. ವೆಚ್ಚವೆಂದು ಅಂದಾಜಿಸಲಾಗಿತ್ತು. ಅಧಿಕಾರಿಗಳು ನಿಗದಿಪಡಿಸಿದ ದರವನ್ನು ಕೋರ್ಟ್ ಮತ್ತಷ್ಟು ಹೆಚ್ಚಿಸಿದೆ. ಪ್ರಸ್ತುತ 29,400 ಎಕರೆ ಭೂ ಸ್ವಾಧೀನಗೊಂಡಿದ್ದು, 66 ಸಾವಿರ ಕೋಟಿ ರೂ. ಪರಿಹಾರ ನೀಡಬೇಕಿದೆ. ಬಾಕಿ 1.04 ಲಕ್ಷ ಎಕರೆ ಭೂಮಿ ಸ್ವಾಧೀನಕ್ಕೆ ಈಗಿನ ನಿಗದಿತ ದರದಲ್ಲಿ 2.01 ಲಕ್ಷ ಕೋಟಿ ರೂ. ಪರಿಹಾರ ನೀಡಬೇಕಿದೆ.
ಅದೇ ರೀತಿ ರಾಷ್ಟ್ರೀಯ ಹೆದ್ದಾರಿಗಾಗಿ ಭೂಸ್ವಾಧೀನ ಮಾಡಿಕೊಂಡ ಜಮೀನಿಗೆ ಪರಿಹಾರ ನೀಡುವ ವಿಚಾರದಲ್ಲಿ ಎಸ್‌ಎಲ್‌ಒ ಕರ್ತವ್ಯಲೋಪದಿಂದ 3 ಸಾವಿರ ಕೋಟಿ ರೂ. ಹೆಚ್ಚಾಗುತ್ತಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಅಸಮಾಧಾನ ಹೊರಹಾಕಿದೆ.
ಅಧಿಕಾರಿಗಳ ಕಳ್ಳಾಟ ಎಲ್ಲೆಲ್ಲಿ?
-ಭೂ ಮಾಲೀಕರಿಗೆ ಸ್ವಾಧೀನದ ವೇಳೆ ನಿಗದಿತ ಪರಿಹಾರ ಬದಲಿಗೆ ಪರಿಷ್ಕೃತ ದರ
-ನೀರಾವರಿ ಮತ್ತು ಖುಷ್ಕಿ ಜಮೀನುಗಳಿಗೆ ನಿಯಮ ಮೀರಿ ಒಂದೇ ದರ ನಿಗದಿ
-ಭೂ ಪರಿವರ್ತನೆಗೊಂಡು ಅಭಿವೃದ್ಧಿಪಡಿಸಿದರ ಪೈಕಿ ಶೇ.55 ಭೂಮಿಗೆ ಪರಿಹಾರ ನೀಡಬೇಕು. ಆದರೆ, ಶೇ.100 ಪರಿಹಾರ ನೀಡಿಕೆ
-ಖುಷ್ಕಿ ಜಮೀನಲ್ಲಿ ದಿಢೀರನೆ ಸಸಿ ನೆಟ್ಟು ಹೆಚ್ಚು ಪರಿಹಾರ ಕೇಳಿದಾಗ ಈ ಬಗ್ಗೆ ಅಧಿಕಾರಿಗಳ ನಿರ್ಲಕ್ಷ್ಯ
-ಪರಿಹಾರ ನೀಡುವಾಗ ಜಮೀನು ಮಾಲೀಕರಿಂದ ಕಮಿಷನ್ ವಸೂಲಿ ಆರೋಪ
ಭೂಸ್ವಾಧೀನದ ವೇಳೆ ಜಮೀನು ವಾರಸುದಾರರಿಗೆ ಪರಿಹಾರ ನೀಡುವಾಗ ವೈಜ್ಞಾನಿಕ ಮಾನದಂಡ ಮತ್ತು ಲೋಪದೋಷ ಕಂಡುಬರುತ್ತಿವೆ. ಸರಿಪಡಿಸುವ ಉದ್ದೇಶಕ್ಕೆ ಮಾರ್ಗಸೂಚಿ ರೂಪಿಸಲಾಗುತ್ತಿದೆ.
ಪೊಮ್ಮಲ ಸುನೀಲ್ ಕುಮಾರ್, ಕಂದಾಯ ಇಲಾಖೆ ಆಯುಕ್ತ