

ನವದೆಹಲಿ: ಕೋವಿಡ್ 19 ಕಾರಣಕ್ಕೆ ಮುಂದೂಡಲ್ಪಟ್ಟಿದ್ದ ಶೈಕ್ಷಣಿಕ ವರ್ಷದ ಕಾಲೇಜು ತರಗತಿ ನವೆಂಬರ್ 1ರಿಂದ ಶುರುವಾಗಲಿದೆ. ಈ ಸಂಬಂಧ ಯೂನಿವರ್ಸಿಟಿ ಗ್ರಾಂಟ್ಸ್ ಕಮಿಷನ್ ಪ್ರಸ್ತಾವಿತ ಮಾರ್ಗಸೂಚಿ ಪ್ರಕಟಿಸಿದೆ. ಇದರಂತೆ, ಅಕ್ಟೋಬರ್ 31ರ ಒಳಗೆ ಪ್ರಥಮ ವರ್ಷದ ಪದವಿ, ಸ್ನಾತಕೋತ್ತರ ಪದವಿ ತರಗತಿಗಳ ಅಡ್ಮಿಷನ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಇದೇ ವೇಳೆ, ಕರೊನಾ ಕಾರಣಕ್ಕೆ ಹಣಕಾಸು ತೊಂದರೆ ಅನುಭವಿಸುತ್ತಿರುವ ಪಾಲಕರ ಅನುಕೂಲಕ್ಕಾಗಿ, ಅವರೇನಾದರೂ ವಿದ್ಯಾರ್ಥಿಗಳ ಅಡ್ಮಿಷನ್ ಕ್ಯಾನ್ಸಲ್ ಮಾಡಿದರೆ ಅಥವಾ ಬೇರೆ ಕಾಲೇಜುಗಳಿಗೆ ಪ್ರವೇಶ ಬಯಸಿದರೆ, ಅವರು ಕಟ್ಟಿರುವ ಪೂರ್ಣಶುಲ್ಕವನ್ನು ಕಾಲೇಜು ಆಡಳಿತ ಮಂಡಳಿ ಹಿಂದಿರುಗಿಸಬೇಕು. ಆದರೆ, ಈ ವಿನಾಯಿತಿ ನವೆಂಬರ್ 30ರ ತನಕ ಮಾತ್ರ ಲಭ್ಯ ಎಂದು ಮಾರ್ಗಸೂಚಿ ತಿಳಿಸಿದೆ. ಇದನ್ನು ಕೇಂದ್ರ ಶಿಕ್ಷಣ ಸಚಿವ ಡಾ.ರಮೇಶ್ ಪೋಖ್ರಿಯಾಲ್ ನಿಶಂಕ್ ಅವರು ಟ್ವೀಟ್ ಮಾಡಿದ್ದಾರೆ.