ಕಾರ್ಮಿಕರ ಬಾಕಿ ವೇತನಕ್ಕೆ ಮಾರ್ಗಸೂಚಿ: ಶೀಘ್ರ ಪರಿಹಾರ ಪಾವತಿಗೆ ಕ್ರಮ

highcourt
Published on

ಬೆಂಗಳೂರು:  ಕಾರ್ಮಿಕರು ಉದ್ಯೋಗದಾತರಿಂದ ಬಾಕಿ ವೇತನ ಸೇರಿ ಇತರ ಸೌಲಭ್ಯ ಪಡೆದುಕೊಳ್ಳಲು ನಿಗದಿತ ಸಮಯದಲ್ಲಿ ಪ್ರಕ್ರಿಯೆ ಪೂರ್ಣಗೊಳಿಸುವ ಸಂಬಂಧ ಹೈಕೋರ್ಟ್ ಮಾರ್ಗಸೂಚಿ ರಚಿಸಿ ಆದೇಶಿಸಿದೆ.

ಕೇಂದ್ರ ಕೈಗಾರಿಕಾ ನ್ಯಾಯಾಧಿಕಾರ ನೀಡಿರುವ ಆದೇಶದಂತೆ ಉದ್ಯೋಗಕ್ಕೆ ಮತ್ತೆ ಪರಿಗಣಿಸುವುದು ಮತ್ತು ಎಲ್ಲ ತರಹದ ಪರಿಹಾರಗಳನ್ನು ಪಾವತಿಸುವಂತೆ ಕೋರಿ ಎಲ್ಐಸಿ ಉದ್ಯೋಗಿಯಾಗಿದ್ದ ಕೆ.ಎಂ.ಗುರುಶಿವಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ಇದರ ಅನ್ವಯ ಕೈಗಾರಿಕಾ ವಿವಾದ ಕಾಯ್ದೆಯಡಿ ಕಾರ್ಮಿಕರಿಗೆ ಬಾಕಿ ಸೌಲಭ್ಯಗಳ ಪಾವತಿಗೆ ಸಂಬಂಧಿಸಿ ಕಾರ್ಮಿಕ ನ್ಯಾಯಾಧಿಕರಣಗಳು ಮತ್ತು ಕಾರ್ಮಿಕ ನ್ಯಾಯಾಲಯಗಳು ಪರಿಗಣಿಸಲು ಅವಕಾಶವಿದೆ ಎಂಬುದನ್ನು ಪೀಠ ತಿಳಿಸಿದೆ.

ಹಲವು ಸನ್ನಿವೇಶದಲ್ಲಿ ಕಾರ್ಮಿಕರಿಗೆ ಪಾವತಿಸಬೇಕಾಗಿರುವ ವಿವಾದಿತ ಮೊತ್ತ ಮತ್ತು ಬಾಕಿ ಮೊತ್ತ ತಿಳಿದುಕೊಳ್ಳದೆ ವಿಚಾರಣೆ ಆಮೆಗತಿಯಲ್ಲಿ ಸಾಗುತ್ತಿರುತ್ತದೆ. ಇದು ಆಗಬಾರದು, ಶೀಘ್ರ ಪರಿಹಾರ ಪಾವತಿಗೆ ಕ್ರಮವಹಿಸಬೇಕು ಎಂದು ಪೀಠ ಹೇಳಿದೆ.

ಕೈಗಾರಿಕಾ ವಿವಾದ ಕಾಯ್ದೆಯ ಸೆಕ್ಷನ್ 33 ಉದ್ಯೋಗದಾತರಿಂದ ಬಾಕಿ ಹಣ ವಸೂಲಿ ಮಾಡಲು ಅವಕಾಶವಿದೆ. ಸೆಕ್ಷನ್ 33ಇ(2)ರ ಪ್ರಕಾರ ನೌಕರ, ಉದ್ಯೋಗದಾತರಿಂದ ಹಣದ ರೂಪದಲ್ಲಿ ಯಾವುದೇ ಹಣ ಅಥವಾ ಪ್ರಯೋಜನ ಪಡೆಯಲು ಅರ್ಹನಾಗಿದ್ದರೆ ಮತ್ತು ಬಾಕಿ ಇರುವ ಹಣದ ಮೊತ್ತ ಅಥವಾ ಅಂತಹ ಪ್ರಯೋಜನ ಯಾವ ಮೊತ್ತದಲ್ಲಿ ಲೆಕ್ಕ ಹಾಕಬೇಕು ಎಂಬುದರ ಕುರಿತು ಪ್ರಶ್ನೆ ಉದ್ಭವಿಸಿದರೆ, ಆ ಪ್ರಶ್ನೆಯನ್ನು ಕಾರ್ಮಿಕ ನ್ಯಾಯಾಲಯವು 3 ತಿಂಗಳೊಳಗೆ ನಿರ್ಧರಿಸಬಹುದು ಎಂದು ಪೀಠ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net