

ಬೆಂಗಳೂರು: ನಗರ ಪೊಲೀಸ್ ಕಮಿಷನರೇಟ್‌ನ ಒಂದೇ ಠಾಣೆಯಲ್ಲಿ 5 ವರ್ಷ ಸೇವೆ ಸಲ್ಲಿಸಿರುವ ಕಾನ್‌ಸ್ಟೇಬಲ್ ಮತ್ತು ಹೆಡ್ ಕಾನ್‌ಸ್ಟೇಬಲ್‌ಗಳ ವರ್ಗಾವಣೆಗೆ ಮಾರ್ಗಸೂಚಿ ಹೊರಡಿಸಲಾಗಿದೆ. ಒಂದೇ ಠಾಣೆಯಲ್ಲಿ ಠಿಕಾಣಿ ಹೂಡಿರುವ ಪೊಲೀಸರ ವರ್ಗಾವಣೆಗೆ ಹೆಚ್ಚುವರಿ ಪೊಲೀಸ್ ಆಯುಕ್ತ (ಆಡಳಿತ) ಹೇಮಂತ್ ನಿಂಬಾಳ್ಕರ್, ಇತ್ತೀಚೆಗೆ ಆದೇಶಿಸಿ ಡಿ.5ರ ಒಳಗಾಗಿ ಜಾರಿಗೆ ತರುವಂತೆ ಸೂಚಿಸಿದ್ದರು. ಕರ್ನಾಟಕ ಬಂದ್ ಮತ್ತು ಭಾರತ್ ಬಂದ್ ಭದ್ರತೆ ಕರ್ತವ್ಯದ ಕಾರಣಕ್ಕೆ ಹಾಗೂ ಕೆಲ ತಾಂತ್ರಿಕ ಸಮಸ್ಯೆಯಿಂದ ವರ್ಗಾವಣೆ ಮುಂದೂಡಿದ್ದರು. ಇದೀಗ ವರ್ಗಾವಣೆಗೆಮಾರ್ಗಸೂಚಿ ರೂಪಿಸಿ ಹೇಮಂತ್ ನಿಂಬಾಳ್ಕರ್ ಆದೇಶಿಸಿದ್ದಾರೆ.
ಈ ಪ್ರಕಾರ ಡಿ.31ರ ಅಂತ್ಯಕ್ಕೆ ಒಂದೇ ಠಾಣೆಯಲ್ಲಿ 5 ವರ್ಷಕ್ಕೂ ಅಧಿಕ ಸೇವೆ ಸಲ್ಲಿಸಿರುವ ಪಿಸಿ, ಎಚ್‌ಸಿಗಳನ್ನು ಜ್ಯೇಷ್ಠತಾ ಪಟ್ಟಿ ಆಧಾರದ ಮೇಲೆ ವರ್ಗಾವಣೆ ಮಾಡಬೇಕು. ಪಿಸಿ ಮತ್ತು ಎಚ್‌ಸಿ ಆಗಿ 7 ವರ್ಷ ಸೇವೆ ಸಲ್ಲಿಸಿದವರಿಗೂ ಅನ್ವಯ ಆಗಲಿದೆ. 5 ವರ್ಷ ಸೇವೆ ಮತ್ತು 2 ವರ್ಷ ಕಚೇರಿ ಕರ್ತವ್ಯ ಮೇರೆಗೆ (ಒಒಡಿ) ಸೇರಿಸಿ 7 ವರ್ಷ ಪೂರ್ಣ ಆದವರನ್ನು ವರ್ಗಾವಣೆಗೆ ಸೂಚನೆ ನೀಡಿದ್ದಾರೆ. ಒಂದು ವೇಳೆ 5 ವರ್ಷ ಕರ್ತವ್ಯ ಪೂರ್ಣವಾಗದೆ ಇದ್ದರೆ ಒಒಡಿ ಸೇವೆ ಪರಿಗಣಿಸಿ 5 ವರ್ಷವಾದರೆ ಅಂಥವರನ್ನು ಬೇರೆಡೆ ವರ್ಗಾವಣೆ ಮಾಡುವಂತೆ ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.
ಅನಾರೋಗ್ಯ ಮತ್ತು ದಂಪತಿ ಇದ್ದರೆ ಅಂಥವರಿಗೆ ವಿನಾಯಿತಿ ಕೊಡುವಂತೆ ತಿಳಿಸಿದ್ದಾರೆ. ವರ್ಗಾವಣೆಗೆ ಅರ್ಹನಾಗಿರುವ ಪಿಸಿ ಅಥವಾ ಮುಖ್ಯಪೇದೆ ಕಾನೂನು ಸುವ್ಯವಸ್ಥೆ ಠಾಣೆಯಿಂದ ಸಂಚಾರ ವಿಭಾಗಕ್ಕೆ ಅಥವಾ ಮತ್ಯಾವುದೇ ವಿಭಾಗಕ್ಕೆ ವರ್ಗಾವಣೆಗೆ ಮನವಿ ಮಾಡಿದರೆ ಅಂಥವರ ಪಟ್ಟಿಯನ್ನು ಪ್ರತ್ಯೇಕವಾಗಿ ನೀಡುವಂತೆ ಎಲ್ಲ ಡಿಸಿಪಿಗಳಿಗೆ ಹೇಮಂತ್ ನಿಬಾಳ್ಕರ್ ಸೂಚಿಸಿದ್ದಾರೆ.