ಮಜ್ಜಿಗೆ ಮಾರಿ ಅತಿಥಿ ಉಪನ್ಯಾಸಕರ ಪ್ರತಿಭಟನೆ

22 smg 5
Published on

ಶಿವಮೊಗ್ಗ: ಸೇವೆ ಕಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದೈದು ದಿನಗಳಿಂದ ಹೋರಾಟ ಮಾಡುತ್ತಿರುವ ಅತಿಥಿ ಉಪನ್ಯಾಸಕರು ಬುಧವಾರ ಡಿಸಿ ಕಚೇರಿ ಎದುರು ಮಜ್ಜಿಗೆ ಮಾರಾಟ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಡಾ. ಎಚ್.ಸೋಮಶೇಖರ್ ಶಿಮೊಗ್ಗಿ ನೇತೃತ್ವದಲ್ಲಿ ವಿವಿಧ ಕೆಲಸದ ನಿಮಿತ್ತ ಡಿಸಿ ಮತ್ತು ತಾಲೂಕು ಕಚೇರಿಗಳಿಗೆ ಬಂದಿದ್ದ ಜನರಿಗೆ ಮಜ್ಜಿಗೆ ವಿತರಿಸಿದರು. ಪ್ರತಿ ಗ್ಲಾಸ್ ಮಜ್ಜಿಗೆಗೆ ಐದು ರೂ. ಸಂಗ್ರಹಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸೇವೆ ಕಾಯಂಗೆ ಒತ್ತಾಯಿಸಿ ಹಲವು ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ ಈವರೆಗೂ ಸರ್ಕಾರ ಕಿವಿಗೊಡುತ್ತಿಲ್ಲ. ಬೆಳಗಾವಿ ಅಧಿವೇಶನದ ಸಂದರ್ಭ ಸಾವಿರಾರು ಅತಿಥಿ ಉಪನ್ಯಾಸಕರು ಪ್ರತಿಭಟನೆ ನಡೆಸಿದರೂ ಪ್ರಯೋಜನವಾಗಿಲ್ಲ. ಹಾಗಾಗಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರದಲ್ಲೂ ಮಚ್ಚಿಗೆ ಮಾರಾಟ ಮಾಡಿ ಅತಿಥಿ ಉಪನ್ಯಾಸರು ಅಸಮಾಧಾನ ವ್ಯಕ್ತಪಡಿಸಿದರು.

430 ಪ್ರಥಮದರ್ಜೆ ಕಾಲೇಜುಗಳಲ್ಲಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು ಜೀವನ ಭದ್ರತೆ ಇಲ್ಲ. ಸರ್ಕಾರದ ಸೌಲಭ್ಯಗಳು ಸಿಗುತ್ತಿಲ್ಲ. ಹಾಗಾಗಿ ತಮ್ಮ ಸೇವೆಯನ್ನು ನಿಯಮ 14ರ ಅಡಿಯಲ್ಲಿ ವಿಲೀನಗೊಳಿಸಿ ಕಾಯಂಗೊಳಿಸಬೇಕು. ಸೇವಾ ವಿಲೀನ ಪ್ರಕ್ರಿಯೆ ಪೂರ್ಣಗೊಳಿಸುವವರೆಗೂ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಅಧಿಸೂಚನೆ ತಡೆಯಬೇಕು ಎಂದು ಆಗ್ರಹಿಸಿದರು. ಖಜಾಂಚಿ ರಾಜೇಶ್ ಕುಮಾರ್, ಜಿಲ್ಲಾಧ್ಯಕ್ಷ ಸರ್ವಜ್ಞಮೂರ್ತಿ, ಸತೀಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net