

ಚಿಕ್ಕಮಗಳೂರು: ರಾಜ್ಯ ಸರ್ಕಾರದ ಜನಪರ ಯೋಜನೆಯಾದ 5 ಗ್ಯಾರಂಟಿಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಬದ್ಧರಾಗಿರುವುದಾಗಿ ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದ ಸ್ವಾಮಿ ತಿಳಿಸಿದರು.
ಚುನಾವಣಾ ಪೂರ್ವದಲ್ಲಿ ಘೋಷಿಸಿದ್ದ 5 ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಅನುಷ್ಠಾನಕ್ಕೆ ತಂದಿದೆ. ಶೇ.96ರಷ್ಟು ಜಾರಿ ಮಾಡಿ ರಾಜ್ಯದಲ್ಲೇ ಜಿಲ್ಲೆ 9ನೇ ಸ್ಥಾನದಲ್ಲಿದೆ ಎಂದು ಹೇಳಿದರು.
ರಾಜ್ಯ ಸರ್ಕಾರದ ಈ ಐದು ಗ್ಯಾರಂಟಿ ಯೋಜನೆಗಳು ಮಾದರಿಯಾಗಿ ಬೇರೆ-ಬೇರೆ ರಾಜ್ಯಗಳು ಇದನ್ನು ಅನುಸರಿಸುತ್ತಿವೆ. ಇದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಸರ್ಕಾರದ ಜನಪ್ರಿಯತೆ ಹೆಚ್ಚಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಜಿಲ್ಲಾಡಳಿತ ನಮ್ಮ ಸಮಿತಿಯೊಂದಿಗೆ ಸಹಕರಿಸಲಿದೆ. ಅಪರ ಜಿಲ್ಲಾಧಿಕಾರಿ ಸದಸ್ಯ ಕಾರ್ಯದರ್ಶಿಯಾಗಿದ್ದು, 5 ಜನ ಉಪಾಧ್ಯಕ್ಷರು, 15 ಸದಸ್ಯರನ್ನೊಳಗೊಂಡ ಒಟ್ಟು 21 ಪದಾಧಿಕಾರಿಗಳ ಸಮಿತಿ ಇದಾಗಿದೆ ಎಂದು ಮಾಹಿತಿ ನೀಡಿದರು.
ಗ್ಯಾರಂಟಿ ಯೋಜನೆಗಳ ಸೌಲಭ್ಯ ಸಿಗದ ಅರ್ಹ ಫಲಾನುಭವಿಗಳು ನಮ್ಮನ್ನು ಸಂಪರ್ಕಿಸಿದರೆ ಪಂಚ ಗ್ಯಾರಂಟಿ ಯೋಜನೆಗಳ ಸೌಲಭ್ಯ ಒದಗಿಸಲು ಬದ್ಧರಾಗಿದ್ದೇವೆ. ಕೆಲವು ತಾಂತ್ರಿಕ ಕಾರಣಗಳಿಂದಾಗಿ ಅರ್ಜಿ ಸಲ್ಲಿಸದೆ ಇರುವವರು ಕೂಡಲೇ ಎಲ್ಲ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಗೃಹಲಕ್ಷ್ಮೀ ಯೋಜನೆಯಡಿ ಫೆಬ್ರವರಿ ಅಂತ್ಯಕ್ಕೆ 2,44,976 ಮಹಿಳೆಯರಿಗೆ 2 ಸಾವಿರ ರೂ. ನಂತೆ 49 ಕೋಟಿ ರೂ. ಗಳನ್ನು ವ್ಯಯ ಮಾಡಲಾಗಿದೆ. ಈ ಸಂಬಂಧ ಬಾಕಿ ಇದ್ದ 12 ಸಾವಿರ ಅರ್ಜಿಗಳನ್ನು ಅಧಿಕಾರಿಗಳು ಪರಿಶೀಲಿಸಿ 11 ಸಾವಿರ ಅರ್ಜಿಗಳನ್ನು ಈಗಾಗಲೇ ಸರ್ಕಾರಕ್ಕೆ ಕಳುಹಿಸಿದ್ದಾರೆ. ಮಾ.28ಕ್ಕೆ ಈ ಅರ್ಜಿಗಳಿಗೆ ಸೌಲಭ್ಯಗಳು ತಲುಪಲಿದೆ ಎಂದು ಹೇಳಿದರು.
ಶಕ್ತಿಯೋಜನೆಯಡಿ ಜಿಲ್ಲೆಯ ಮೂಡಿಗೆರೆ, ಚಿಕ್ಕಮಗಳೂರು, ಕಡೂರು ಈ ಮೂರು ಕೆಎಸ್‌ಆರ್‌ಟಿಸಿ ಘಟಕಗಳಿಂದ ಒಟ್ಟು 1.53 ಲಕ್ಷ ಮಹಿಳೆಯರು ಪ್ರಯಾಣ ಮಾಡಿದ್ದು 56 ಕೋಟಿ ರೂ. ವೆಚ್ಚವಾಗಿದೆ. ಈ ಹಣವನ್ನು ಹಂತ ಹಂತವಾಗಿ ನಿಗಮಗಳಿಗೆ ಸರ್ಕಾರ ತುಂಬಲಿದೆ ಎಂದರು.
ಸಾರ್ವಜನಿಕ ಜೀವನದಲ್ಲಿ ಸೇವೆ ಸಲ್ಲಿಸಿದ್ದನ್ನು ಪರಿಗಣಿಸಿದ ಸರ್ಕಾರ ನನ್ನನ್ನು ಪ್ರಾಧಿಕಾರದ ಅಧ್ಯಕ್ಷನನ್ನಾಗಿ ನೇಮಕ ಮಾಡಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲ ಸಚಿವರಿಗೆ, ಜಿಲ್ಲೆಯ ಶಾಸಕರಿಗೆ ಹಾಗೂ ಪಕ್ಷದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರಾಧಿಕಾರದ ಸಮಿತಿ ಉಪಾಧ್ಯಕ್ಷರಾದ ಎಸ್.ಎನ್.ಮಂಜುನಾಥ್, ಸಮೀಉಲ್ಲಾ ಶರೀಫ್, ಚಂದ್ರಮೌಳಿ ಇದ್ದರು.