

ಶಿವಮೊಗ್ಗ: ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ನೇಮಿಸಿರುವ ಸಮಿತಿ ಸದಸ್ಯರು ಅಧಿಕಾರಿಗಳೊಂದಿಗೆ ವಿಶ್ವಾಸದಿಂದ ಕಾರ್ಯನಿರ್ವಹಿಸಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್ ಸಲಹೆ ನೀಡಿದರು.
ನಗರದ ತಹಸೀಲ್ದಾರ್ ಕಚೇರಿಯಲ್ಲಿ ಮಂಗಳವಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರಕ್ಕೆ ನೇಮಕವಾದ ಜಿಲ್ಲಾ, ತಾಲೂಕು ಮಟ್ಟದ ಅಧ್ಯಕ್ಷರು, ಸದಸ್ಯರಿಗೆ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಹಂತ ಹಂತವಾಗಿ ಎಲ್ಲ ಯೋಜನೆಗಳನ್ನು ಬಡವರು, ಕೂಲಿ ಕಾರ್ಮಿಕರಿಗೆ ಅನುಕೂಲವಾಗುವ ರೀತಿ ಜಾರಿಗೊಳಿಸಿದೆ. ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ಉದ್ದೇಶದಿಂದ ಅನುಷ್ಠಾನ ಪ್ರಾಧಿಕಾರವನ್ನು ನೇಮಕ ಮಾಡಿದೆ ಎಂದರು.
ಪ್ರಾಧಿಕಾರದ ಸದಸ್ಯರ ಕೆಲಸ ಜವಾಬ್ದಾರಿಯುತ. ತಾಂತ್ರಿಕ ಹಾಗೂ ಇತರೆ ಸಮಸ್ಯೆಗಳಿಂದ ಇನ್ನೂ ಯಾರಿಗೆ ಸೌಲಭ್ಯ ಪಡೆಯಲು ಸಾಧ್ಯವಾಗಿಲ್ಲವೋ ಅವರನ್ನು ಗುರುತಿಸಿ ನೀಡಬೇಕು. ಅವುಗಳ ಬಗ್ಗೆ ಜಾಗೃತಿ ಮೂಡಿಸುವ ಜತೆಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕು ಎಂದು ತಿಳಿಸಿದರು.
ತಾಲೂಕು ಮಟ್ಟದ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರಕ್ಕೆ ನೇಮಕವಾದ ನೂತನ ಸದಸ್ಯರನ್ನು ತಾಲೂಕು ಆಡಳಿತದಿಂದ ಸನ್ಮಾನಿಸಲಾಯಿತು. ಶಿವಮೊಗ್ಗ ತಹಸೀಲ್ದಾರ್ ಬಿ.ಎನ್.ಗಿರೀಶ್, ತಾಪಂ ಇಒ ಅವಿನಾಶ್, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಎಚ್.ಎಂ.ಮಧು, ಸದಸ್ಯರಾದ ದೇವಿಕುಮಾರ್, ನಿಖಿಲ್ಮೂರ್ತಿ, ಕುಮಾರೇಶ್, ಮಹೇಶ್ವರಪ್ಪ, ಭಾರತಿ, ಮಲ್ಲಿಕಾರ್ಜುನ್, ಮೋಹನ್, ಎಲಿಜಬೆತ್ ಗ್ಲಾಡೀಸ್, ಅಜೀಜ್‌ವುಲ್ಲಾ ಖಾನ್, ವಾಗೀಶ್, ಜಗದೀಶ್ವರ, ಬಸವರಾಜ್, ಇರ್ಫಾನ್, ಚಾಂದ್ ಪಾಷಾ ಇತರರಿದ್ದರು.