ಗ್ಯಾರಂಟಿ ಯೋಜನೆಗಳು ಸ್ಥಗಿತವಾಗಲ್ಲ

RemasterDirector_22abe5b5f
RemasterDirector_22abe5b5f
Published on

ಪಿರಿಯಾಪಟ್ಟಣ : ಕಾಂಗ್ರೆಸ್ ಸರ್ಕಾರದ ಎಲ್ಲ ಗ್ಯಾರಂಟಿ ಯೋಜನೆಗಳು ಮಧ್ಯವರ್ತಿಗಳ ಉಪಟಳವಿಲ್ಲದೆ ನೇರವಾಗಿ ಫಲಾನುಭವಿಗಳಿಗೆ ತಲುಪುತ್ತಿವೆ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್ ತಿಳಿಸಿದರು.


ಪಟ್ಟಣದ ಎಪಿಎಂಸಿ ಅವರಣದಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳಿಯಿಂದ ಭಾನುವಾರ ಏರ್ಪಡಿಸಿದ್ದ ಗ್ರಾಮೀಣ ಮಹಿಳೆಯರಿಗೆ ನಾಟಿ ಕೋಳಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಚುನಾವಣೆಗೂ ಮೊದಲು ವಿವಿಧ ಪಕ್ಷಗಳ ಮುಖಂಡರು ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದರು. ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ಮುಖಂಡರು ಸವಾಲು ಹಾಕಿದ್ದರು. ರಾಜ್ಯದ ಮತದಾರರ ಸಹಕಾರದಿಂದ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ನುಡಿದಂತೆ ನಡೆದಿದೆ ಎಂದರು.


ಈ ಸಾಲಿನ ಬಜೆಟ್ ನಲ್ಲಿ ಮುಖ್ಯಮಂತ್ರಿಗಳು ಗ್ಯಾರಂಟಿ ಯೋಜನೆಗಳಿಗಾಗಿ 54 ಸಾವಿರ ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದು, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇರುವವರೆಗೂ ಈ ಎಲ್ಲ ಯೋಜನೆಗಳು ಮುಂದುವರಿಯುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಗ್ಯಾರಂಟಿ ಯೋಜನೆಗಳಿಂದ ಒಮ್ಮೆಲೆ ಬಡತನವನ್ನು ಹೋಗಲಾಡಿಸಲು ಸಾಧ್ಯವಿಲ್ಲ. ಹಂತ ಹಂತವಾಗಿ ಬಡವರ, ಹಿಂದುಳಿದವರ ಆರ್ಥಿಕ ಪರಿಸ್ಥಿತಿ ಉತ್ತಮಗೊಳಿಸುವುದು ಮುಖ್ಯ ಉದ್ದೇಶವಾಗಿದೆ. ಯಾವ ಪಕ್ಷ ಬಡವರ ಪರವಾಗಿ ಕೆಲಸ ಮಾಡುತ್ತಿದೆ ಎಂಬುದನ್ನು ನೀವೆಲ್ಲರೂ ತಿಳಿದುಕೊಳ್ಳಬೇಕು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸುವ ಮೂಲಕ ನಮ್ಮ ಸರ್ಕಾರವನ್ನು ಬಲಪಡಿಸಬೇಕು ಎಂದು ಕೋರಿದರು.


ಬಿಪಿಎಲ್ ಕಾರ್ಡ್ ಹೊಂದಿರುವ ಗ್ರಾಮೀಣ ಪ್ರದೇಶದಲ್ಲಿನ ಮಹಿಳೆಯರಿಗೆ ಕುಕ್ಕುಟ ಮಹಾಮಂಡಳಿ ಸಹಕಾರದೊಂದಿಗೆ ನಾಟಿಕೋಳಿ ಮರಿಗಳನ್ನು ವಿತರಣೆ ಮಾಡಲಾಗುತ್ತಿದೆ. ಒಬ್ಬ ಫಲಾನುಭವಿಗೆ ತಲಾ 20 ಕೋಳಿ ಮರಿಗಳನ್ನು ನೀಡಲಾಗುತ್ತಿದ್ದು, ಕೋಳಿಗಳನ್ನು ಪಡೆದವರು ಉತ್ತಮವಾಗಿ ಸಾಕಣೆ ಮಾಡಬೇಕು ಎಂದು ತಿಳಿಸಿದರು.


ಕುಕ್ಕುಟ ಮಹಾಮಂಡಳವು ಒಂದು ನಾಟಿ ಕೋಳಿ ಮರಿಗೆ ಸಾಗಣೆ ವೆಚ್ಚ ಸೇರಿ 130 ರೂ.ಗಳನ್ನು ಖರ್ಚು ಮಾಡುತ್ತಿದ್ದು, ಆರಂಭಿಕ ಹಂತವಾಗಿ ಪಿರಿಯಾಪಟ್ಟಣ ತಾಲೂಕಿನಲ್ಲಿ ಒಟ್ಟು 20 ಸಾವಿರ ನಾಟಿ ಕೋಳಿ ಮರಿಗಳನ್ನು ವಿತರಣೆ ಮಾಡಲಾಗುತ್ತಿದೆ. ಹಂತ ಹಂತವಾಗಿ ಈ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು. ಸರ್ಕಾರವು ಸದುದ್ದೇಶ ಇಟ್ಟುಕೊಂಡು ಈ ಯೋಜನೆಯನ್ನು ಜಾರಿಗೆ ತಂದಿದ್ದು, ವೈದ್ಯರ ಸೂಚನೆಯಂತೆ ಕೋಳಿ ಮರಿಗಳಿಗೆ ನಿಗದಿತ ಸಮಯದಲ್ಲಿ ಲಸಿಕೆ ಹಾಕಿಸಿ ಎಚ್ಚರಿಕೆಯಿಂದ ಕಾಪಾಡಿಕೊಳ್ಳುವಂತೆ ಕಿವಿಮಾತು ಹೇಳಿದರು.


ಕುಕ್ಕುಟ ಮಹಾಮಂಡಳ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಆರಂಭಿಕ ಹಂತದಲ್ಲಿ ತಾಲೂಕಿನಲ್ಲಿ 20 ಸಾವಿರ ನಾಟಿ ಕೋಳಿ ಮರಿಗಳನ್ನು ವಿತರಿಸಲಾಗುತ್ತಿದ್ದು, ಮೊದಲ ಹಂತವಾಗಿ ಕಳೆದ ತಿಂಗಳು ಬೆಟ್ಟದಪುರದಲ್ಲಿ 10 ಸಾವಿರ ಕೋಳಿ ಮರಿಗಳನ್ನು ವಿತರಿಸಲಾಗಿತ್ತು. ಇದೀಗ ಪಟ್ಟಣದಲ್ಲಿ 500 ಫಲಾನುಭವಿಗಳಿಗೆ 10 ಸಾವಿರ ಕೋಳಿ ಮರಿಗಳನ್ನು ವಿತರಿಸಲಾಗುತ್ತಿದೆ. ಕೋಳಿ ಮರಿಗಳನ್ನು ಪಡೆದವರು ಮನೆಗೆ ಕೊಂಡೊಯ್ದು ಕೂಡಲೇ ಮರಿಗಳಿಗೆ ಬೆಲ್ಲದ ನೀರು ಅಥವಾ ಸಕ್ಕರೆಯ ನೀರು ಕುಡಿಸಬೇಕು. ಒಂದು ವಾರಗಳ ಕಾಲ ಹೆಚ್ಚುವರಿ ಆಹಾರ ನೀಡಬೇಕು. ಆರರಿಂದ ಎಂಟು ವಾರಗಳ ಒಳಗೆ ಒಂದು ಬಾರಿ ಲಸಿಕೆಯನ್ನು ಕೊಡಿಸಬೇಕು ಎಂದು ಸೂಚನೆ ನೀಡಿದರು.


ಕುಕ್ಕುಟ ಮಹಾಮಂಡಳ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರಕಾಶ್, ನಿರ್ದೇಶಕರಾದ ಸಿದ್ದೇಗೌಡ, ದೇವರಾಜ್, ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ.ನಾಗರಾಜ್, ಸಹಾಯಕ ನಿರ್ದೇಶಕ ಡಾ.ಸೋಮಯ್ಯ, ತಹಸೀಲ್ದಾರ್ ಕುಂಞ ಅಹಮದ್, ತಾಪಂ ಇಒ ಸುನೀಲ್ ಕುಮಾರ್, ಪುರಸಭೆ ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಟಿ.ಸ್ವಾಮಿ, ರಹಮತ್ ಜಾನ್ ಬಾಬು, ಮುಖಂಡರಾದ ಕೆ.ಹೊಲದಪ್ಪ, ಬಿ.ಜೆ.ಬಸವರಾಜ್, ಅಶೋಕ್ ಕುಮಾರ್ ಗೌಡ, ಅಬ್ದುಲ್ ಅಜೀಜ್, ರವಿ, ಪುಟ್ಟರಾಜು, ಈ.ಪಿ.ಲೋಕೇಶ್, ರಾಮಚಂದ್ರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net