

ರಾಣೆಬೆನ್ನೂರ: ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದಂತೆ ಪ್ರತಿಯೊಂದು ಯೋಜನೆಯಲ್ಲಿ ಅನೇಕ ಫಲಾನುಭವಿಗಳು ಬಾಕಿ ಉಳಿದಿದ್ದು, ಕೆಳ ಹಂತದ ಸಿಬ್ಬಂದಿಗೆ ಫಲಾನುಭವಿಗಳ ಮಾಹಿತಿ ನೀಡುವ ಕುರಿತು ಆದೇಶ ಮಾಡಿ ತಿಳುವಳಿಕೆ ಪತ್ರ ನೀಡಬೇಕು ಎಂದು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮಂಜನಗೌಡ ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ತಾಪಂ ಸಭಾಭವನದಲ್ಲಿ ಶನಿವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಪಂಚ ಗ್ಯಾರಂಟಿಗಳಿಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದು ಅವರು ಮಾತನಾಡಿದರು.
ಸಭೆಯಲ್ಲಿ ವಿಶೇಷವಾಗಿ ಶಕ್ತಿ ಯೋಜನೆ, ಗೃಹಲಕ್ಷಿ$್ಮ, ಗೃಹಜ್ಯೋತಿ, ಅನ್ನಭಾಗ್ಯ ಯೋಜನೆ ಕುರಿತು ಹಲವಾರು ನ್ಯೂನತೆಗಳ ಕುರಿತು ಸದಸ್ಯರು ಪ್ರಸ್ತಾಪಿಸಿದರು. ಗೃಹಜ್ಯೋತಿ ಯೋಜನೆಯಡಿ ಮನೆ ಬದಲಾಯಿಸಿದಾಗ ಡಿ-ಲಿಂಕ್ ವ್ಯವಸ್ಥೆ ಮೂಲಕ ಪುನಃ ಹೊಸದಾಗಿ ಸೌಲಭ್ಯ ಪಡೆಯಬಹುದು. ಹೊಸದಾಗಿ ಮನೆ ನಿಮಿರ್ಸಿದವರಿಗೂ 58 ಯುನಿಟ್ಗಳನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದು ಹೆಸ್ಕಾಂ ಉಪ ವಿಭಾಗ-&1ರ ಅಧಿಕಾರಿ ಪ್ರಸಾದ ಸಭೆಗೆ ಮಾಹಿತಿ ನೀಡಿದರು.
ಆಗ ಅಧ್ಯಕ್ಷ ಮಂಜನಗೌಡ ಪಾಟೀಲ, ಬದಲಾದ ವ್ಯವಸ್ಥೆ ಕುರಿತು ಜನರಿಗೆ ಹೆಚ್ಚಿನ ಪ್ರಚಾರದ ಅವಶ್ಯಕತೆಯಿದ್ದು ಇದರ ಬಗ್ಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗೆ ಸೂಚಿಸಿದರು. ಇದೇ ವೇಳೆ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಸದಸ್ಯರು ಪ್ರಸ್ತಾಪಿಸಿದ ವಿಷಯಗಳ ಹಿನ್ನೆಲೆಯಲ್ಲಿ ಮಾತನಾಡಿದ ಅಧ್ಯಕ್ಷರು ಫಲಾನುಭವಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವಂತೆ ಪಡಿತರ ಅಂಗಡಿಯವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲು ಆಹಾರ ಇಲಾಖೆ ಅಧಿಕಾರಿಗೆ ಸಲಹೆ ನೀಡಿದರು.
ಸಾರಿಗೆ ಬಸ್ಗಳಲ್ಲಿ ಸಂಚರಿಸುವ ಮಹಿಳೆಯರಿಗೆ ಕೆಲವು ಕಂಡಕ್ಟರ್ಗಳು ಯೋಜನೆ ಬಗ್ಗೆ ಲೇವಡಿ ಮಾಡುತ್ತಿರುವುದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವ ದೂರುಗಳು ಕೇಳಿ ಬರುತ್ತಿವೆ ಎಂದು ಸದಸ್ಯರು ಸಭೆಯಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ಧ್ವನಿಗೂಡಿಸಿದ ಅಧ್ಯಕ್ಷ ಮಂಜನಗೌಡ ಪಾಟೀಲ ಮಾತನಾಡಿ, ಇದು ನಮ್ಮ ಗಮನಕ್ಕೂ ಬಂದಿದ್ದು ಮಹಿಳೆಯರು ಬಸ್ಸಿಗಾಗಿ ಕಾಯುತ್ತಾ ನಿಂತಿದ್ದರೂ ಬಸ್ ನಿಲ್ಲಿಸದಿರುವ ಪ್ರಸಂಗಗಳು ನಡೆಯುತ್ತಿವೆ. ಸರ್ಕಾರ ಮಹಿಳೆಯರ ಟಿಕೆಟ್ ಹಣ ಪಾವತಿಸುತ್ತದೆ. ಹೀಗಿದ್ದರೂ ಕಂಡಕ್ಟರ್ ಹಾಗೂ ಚಾಲಕರು ಬಸ್ ನಿಲ್ಲಿಸದಿರುವುದು ಸರಿಯಲ್ಲ. ಈ ರೀತಿ ಮಾಡುತ್ತಿರುವ ಸಿಬ್ಬಂದಿ ಮೇಲೆ ಕ್ರಮ ಜರುಗಿಸುವಂತೆ ಸಾರಿಗೆ ಅಧಿಕಾರಿಗೆ ಆದೇಶ ಮಾಡಿದರು.
ಈವರೆಗೂ ತಾಲೂಕಿನಲ್ಲಿ ಪಂಚ ಗ್ಯಾರಂಟಿಗಳಿಗಾಗಿ ಒಟ್ಟು 276.04 ಕೋಟಿ ರೂ. ಹಣ ರ್ಖಚಾಗಿದ್ದು ಗ್ಯಾರಂಟಿ ಯೋಜನೆಗಳು ಎಲ್ಲ ಸಮುದಾಯದ ಜನರಿಗೆ ಮುಟ್ಟಬೇಕು ಎಂದು ಅಧ್ಯಕ್ಷ ಮಂಜನಗೌಡ ಪಾಟೀಲ ತಿಳಿಸಿದರು.
ತಾಪಂ ಇಒ ಪರಮೇಶ, ಸಮಿತಿ ಸದಸ್ಯರಾದ ಚಂದ್ರಣ್ಣ ಬೇಡರ, ಬೀರೇಶ, ರಾಜೇಂದ್ರ ಅಂಬಿಗೇರ ಮತ್ತಿತರರು ಇದ್ದರು.