ಅಕ್ರಮ ವಲಸಿಗರಿಗೂ ಗ್ಯಾರಂಟಿ: ಎನ್.ರವಿಕುಮಾರ್ ಕಳವಳ | Problem escalation

MLC ravikumar
Published on

ಬೆಂಗಳೂರು: ಅಕ್ರಮವಾಗಿ ವಲಸೆ ಬಂದು ರಾಜ್ಯದಲ್ಲಿ ನೆಲೆಸಿರುವ ರೋಹಿಂಗ್ಯಾ, ಬಾಂಗ್ಲಾದೇಶಿ ನಿವಾಸಿಗಳೂ ಐದು ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆದುಕೊಳ್ಳುತ್ತಿದ್ದು, ದೊಡ್ಡಮಟ್ಟದಲ್ಲಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್.ರವಿಕುಮಾರ್ ಕಳವಳ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಕುರಿತು ಸೋಮವಾರ ಬಹಿರಂಗ ಪತ್ರ ಬರೆದಿರುವ ಅವರು, ನಾಡಿನ ಜನರು, ನಾಡಿನಲ್ಲಿ ನೆಲೆಸಿದ ಕನ್ನಡ ಮಾತನಾಡಲು ಬರುವ ಇತರ ಭಾಷಿಕರಿಗೆ ಗ್ಯಾರಂಟಿ ಯೋಜನೆಗಳನ್ನು ಅನ್ವಯಿಸಲಾಗಿದೆ.

ಆದರೆ ಕನ್ನಡ ಭಾಷೆಯನ್ನು ತುಚ್ಛವಾಗಿ ಕಾಣುವ ಇತರ ಭಾಷಿಕರು ಕನ್ನಡಿಗರ ತೆರಿಗೆ ಹಣದಿಂದ ಅನುಷ್ಠಾನಗೊಳಿಸಿದ ಪಂಚ ಗ್ಯಾರಂಟಿಗಳ ಲಾನುಭವಿಗಳಾಗಿರುವುದು ದುರದೃಷ್ಟಕರವೆಂದು ವಿಷಾದಿಸಿದ್ದಾರೆ.

ಸಮಸ್ಯೆಗಳು ಉಲ್ಬಣ

ಅಕ್ರಮವಾಗಿ ಬಾಂಗ್ಲಾದೇಶಿ, ರೋಹಿಂಗ್ಯಾ ಜನರು ಪಂಚ ಗ್ಯಾರಂಟಿಗಳ ಪ್ರಯೋಜನ ಪಡೆಯುತ್ತಿದ್ದು, ನಾಡಿನ ಆರ್ಥಿಕ ಸದೃಢತೆ ಹಾಗೂ ಕಾನೂನು-ಸುವ್ಯವಸ್ಥೆ ದೃಷ್ಟಿಯಿಂದ ಸಮಂಜಸವಲ್ಲ ಎಂದು ಎನ್.ರವಿಕುಮಾರ್ ಆಕ್ಷೇಪಿಸಿದ್ದಾರೆ.

ರಾಜ್ಯದ ಗಡಿಭಾಗಗಳಲ್ಲಿ ವಾಸಿಸುತ್ತಿರುವ ಅಕ್ಕಪಕ್ಕದ ರಾಜ್ಯಗಳ ಜನರು ಗ್ಯಾರಂಟಿಗಳ ಲಾನುಭವಿಗಳಾಗಿದ್ದು, ಮುಂದೆ ಗಡಿ ಭಾಗದ ಸಮಸ್ಯೆ ಉಲ್ಬಣಕ್ಕೂ ಕಾರಣವಾಗಲಿದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.

ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಬಹುಮಹಡಿ ವಸತಿ ಸಮುಚ್ಚಯದಲ್ಲಿ ಶೇಕಡ 60 ರಿಂದ 80ರಷ್ಟು ಅನ್ಯಭಾಷಿಕರಾಗಿದ್ದು, ಗೃಹಜ್ಯೋತಿ ಯೋಜನೆ ಲಾನುಭವಿಗಳಾಗಿದ್ದಾರೆ ಎಂದು ಈ ಪತ್ರದಲ್ಲಿ ಗಮನಸೆಳೆದಿದ್ದಾರೆ.

ಪಂಚ ಗ್ಯಾರಂಟಿಗಳ ವೆಚ್ಚವನ್ನು ಕನ್ನಡಿಗರ ತೆರಿಗೆ ಹಣದಿಂದ ಭರಿಸುತ್ತಿದ್ದು, ಈ ಯೋಜನೆಗಳ ಲಾನುಭವಿಗಳಾಗಲು ಕನ್ನಡ ಭಾಷೆಯ ಕನಿಷ್ಠ ಜ್ಞಾನಬೇಕೆಂದು ಕಡ್ಡಾಯ ಮಾಡಬೇಕು ಎಂದು ಎನ್.ರವಿಕುಮಾರ್ ಒತ್ತಾಯಿಸಿದ್ದು, ಕನ್ನಡಪರ ಸಂಘಟನೆ, ಹೋರಾಟಗಾರರು ಬೆಂಬಲಿಸಲು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net