

Mamata Banerjee: ಇಂದಿನಿಂದ ದೇಶಾದ್ಯಂತ ಜಿಎಸ್ಟಿ ದರದಲ್ಲಿ ಇಳಿಕೆಯಾಗುತ್ತಿದ್ದು, ಇದರಲ್ಲಿ ಕೇಂದ್ರ ಸರ್ಕಾರ ಅನಗತ್ಯವಾಗಿ ತನಗೆ ಕ್ರೆಡಿಟ್ ತೆಗೆದುಕೊಳ್ಳುತ್ತಿದೆ. ಈ ಕ್ರಮವನ್ನು ಮೊದಲಿಗೆ ಆರಂಭಿಸಿದ್ದೇ ನಮ್ಮ ರಾಜ್ಯ ಸರ್ಕಾರ ಎಂದು ಶನಿವಾರ(ಸೆ. 21) ಕೇಂದ್ರ ಬಿಜೆಪಿ ಸರ್ಕಾರದ ವಿರುದ್ದ ಪಶ್ಚಿಮ ಬಂಗಾಳ ಸಿಎಂ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.
ಕೊಲ್ಕತ್ತಾದಲ್ಲಿ ತೃಣಮೂಲ ಕಾಂಗ್ರೆಸ್ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿರುವ ಅವರು ಬ್ಯಾನರ್ಜಿ, ಜಿಎಸ್ಟಿ ದರ ಕಡಿತಕ್ಕೆ ಸಂಬಂಧಿಸಿದಂತೆ ಕೇಂದ್ರದ ಕ್ರಮಗಳನ್ನು ಟೀಕಿಸಿದರು. ಕೇಂದ್ರ ಸರ್ಕಾರವು ಜಿಎಸ್ಟಿ ದರಗಳನ್ನು ಕಡಿಮೆಗೊಳಿಸಿದ ಕೀರ್ತಿಯನ್ನು ತೆಗೆದುಕೊಳ್ಳುತ್ತಿದೆ, ಆದರೆ ಇದನ್ನು ಮೊದಲಿಗೆ ಪ್ರಸ್ತಾಪಿಸಿದ್ದು ನಾವೇ. ರಾಜ್ಯ ಸರ್ಕಾರವು ಈ ಕ್ರಮವನ್ನು ಪ್ರಾರಂಭಿಸಿತು. ಆದರೆ ಈಗ ಕೇಂದ್ರ ಸರ್ಕಾರ ಇದನ್ನು ತನ್ನದೇ ಎಂದು ಹೇಳಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರದ ಸಲಹೆಗಳ ಆಧಾರದ ಮೇಲೆ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ತೆರಿಗೆ ಕಡಿಮೆ ಮಾಡಲು ನಿರ್ಧರಿಸಲಾಯಿತು. ರಾಜ್ಯದ ಜನರ ಹಿತಾಸಕ್ತಿಗಾಗಿ ಬದಲಾವನೆ ಮಾಡಲು ಮೊದಲು ನಾವು ವಿಷಯವನ್ನು ಎತ್ತಿದ್ದೇವೆ, ಅದಕ್ಕೆ ಸಭೆಯಲ್ಲಿ ಒತ್ತಾಯಿಸಿದ್ದೇವೆ. ಈಗ ಕೇಂದ್ರ ತನ್ನದೇ ಯೋಜನೆಯಂತೆ ಚಿತ್ರಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
ಕೇಂದ್ರವು ರಾಜ್ಯ ಸರ್ಕಾರಗಳಿಗೆ ಸಾಕಷ್ಟು ಆರ್ಥಿಕ ಸ್ವಾತಂತ್ರ್ಯ ನೀಡದೆ, ಅವುಗಳನ್ನು ಒತ್ತಡಕ್ಕೆ ಒಳಪಡಿಸುತ್ತಿದೆ ಎಂದು ಆರೋಪಿಸಿದ ಅವರು, ರಾಜ್ಯಗಳು ತಮ್ಮ ಜನರಿಗಾಗಿ ಕೆಲಸ ಮಾಡುತ್ತವೆ, ಆದರೆ ಕೇಂದ್ರವು ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ರಾಜ್ಯಗಳಿಗೆ ಒತ್ತಡ ಹೇರುತ್ತಿದೆ. ನಾವು ಜನರಿಗೆ ಒಳ್ಳೆಯ ಆಡಳಿತವನ್ನು ಒದಗಿಸುತ್ತಿದ್ದೇವೆ, ಮತ್ತು ಜಿಎಸ್ಟಿ ದರ ಕಡಿತವು ರಾಜ್ಯದ ಜನರಿಗೆ ಒಳಿತನ್ನು ತರುತ್ತದೆ ಎಂದರು. (ಏಜೆನ್ಸೀಸ್)