

ನವದೆಹಲಿ: ಕರ್ನಾಟಕದಲ್ಲಿ ಕೇಂದ್ರ ಜಿಎಸ್ಟಿ ಅಧಿಕಾರಿಗಳು 2024-25ರ ಹಣಕಾಸು ವರ್ಷದಲ್ಲಿ 39,577 ಕೋಟಿ ರೂ. ತೆರಿಗೆ ವಂಚನೆ ಪತ್ತೆ ಮಾಡಿದ್ದಾರೆ. ಇದು ಹಿಂದಿನ ವರ್ಷಕ್ಕಿಂತ 5 ಪಟ್ಟು ಹೆಚ್ಚು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಲೋಕಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಪತ್ತೆಯಾದ ಜಿಎಸ್ಟಿ ವಂಚನೆಯ ವಿವರಗಳಿಗೆ ಸಂಬಂಧಿಸಿದ ಮತ್ತೊಂದು ಪ್ರಶ್ನೆಗೆ, ನಿರ್ಮಲಾ ರಾಜ್ಯಕ್ಕೆ ಸಂಬಂಧಿಸಿದ ಕೇಸ್ಗಳ ವಿವರ ಹಂಚಿಕೊಂಡಿದ್ದಾರೆ. 2024-25ರಲ್ಲಿ ಸಿಜಿಎಸ್ಟಿ ಅಧಿಕಾರಿಗಳು 1,254 ಕೇಸ್ಗಳಲ್ಲಿ 39,577 ಕೋಟಿ ರೂ. ಜಿಎಸ್ಟಿ ವಂಚನೆ ಪತ್ತೆ ಹಚ್ಚಿ 9 ಜನರನ್ನು ಬಂಧಿಸಿದ್ದಾರೆ. 1,623 ಕೋಟಿ ರೂ. ಸ್ವಯಂಪ್ರೇರಿತವಾಗಿ ತೆರಿಗೆ ಪಾವತಿಯಾಗಿದೆ.
2024-25ರಲ್ಲಿ ಪತ್ತೆಯಾದ ಮೊತ್ತ 2023-24ಕ್ಕಿಂತ 5 ಪಟ್ಟು ಹೆಚ್ಚಾಗಿದೆ. 2023-24ರಲ್ಲಿ, 925 ಕೇಸ್ಗಳಲ್ಲಿ 7,202 ಕೋಟಿ ರೂ. ವಂಚನೆ ಪತ್ತೆಯಾಗಿತ್ತು. ಇಬ್ಬರು ಬಂಧನಕ್ಕೊಳಗಾಗಿದ್ದರು. 1,197 ಕೋಟಿ ರೂ. ಸ್ವಯಂಪ್ರೇರಿತವಾಗಿ ಪಾವತಿಯಾಗಿತ್ತು. 2022-23ರಲ್ಲಿ, 959 ಕೇಸ್ಗಳಲ್ಲಿ 25,839 ಕೋಟಿ ರೂ. ತೆರಿಗೆ ವಂಚನೆ ಪತ್ತೆಯಾಗಿತ್ತು. ಇಬ್ಬರು ಬಂಧನಕ್ಕೊಳಗಾಗಿದ್ದರು. 1,705 ಕೋಟಿ ರೂ. ತೆರಿಗೆ ಪಾವತಿಯಾಗಿತ್ತು.
‘ಸಣ್ಣ ವ್ಯಾಪಾರಿಗಳು ಮತ್ತು ರಸ್ತೆಬದಿ ವ್ಯಾಪಾರಿಗಳಿಗೆ ಅವರ ವ್ಯಾಪಾರ ಚಟುವಟಿಕೆ ಮೌಲ್ಯಮಾಪನ ಇಲ್ಲದೆ ಜಿಎಸ್ಟಿ ನೋಟಿಸ್ ಕಳುಹಿಸಲಾಗಿದೆಯೇ?’ ಎಂಬ ಪ್ರಶ್ನೆಗೆ ಸಚಿವರು, ‘ಕೇಂದ್ರ ಜಿಎಸ್ಟಿ ಅಧಿಕಾರಿಗಳು ಯುಪಿಐ ವಹಿವಾಟು ಆಧಾರದ ಮೇಲೆ ಯಾವುದೇ ನೋಟಿಸ್ಗಳನ್ನು ಜಾರಿಗೊಳಿಸಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.