

ಬೆಂಗಳೂರು: ವಾಣಿಜ್ಯ ತೆರಿಗೆ ಇಲಾಖೆ ಗಾಂಧಿ ನಗರದಲ್ಲಿರುವ ಕೇಂದ್ರ ಕಚೇರಿಯಲ್ಲಿ ಸರಕು ಮತ್ತು ಸೇವಾ ತೆರಿಗೆ ಬಯೋಮೆಟ್ರಿಕ್ ಸೇವಾ ಕೇಂದ್ರ ಮಂಗಳವಾರದಿಂದ ಕಾರ್ಯಾರಂಭ ಮಾಡಿವೆ.
ವಾಣಿಜ್ಯ ತೆರಿಗೆ ಇಲಾಖೆಯು ರಾಜ್ಯಾದ್ಯಂತ ಒಟ್ಟು 120 ಇಂತಹ ಕೇಂದ್ರಗಳನ್ನು ಆರಂಭಿಸಿದ್ದು, ಅರ್ಜಿದಾರರು ಮುಂಚಿತವಾಗಿ ಸಮಯವನ್ನು ನಿಗದಿ ಮಾಡಿಕೊಂಡು ಸೌಲಭ್ಯ ಪಡೆದುಕೊಳ್ಳಬಹುದಾಗಿದೆ.
ಈ ಕೇಂದ್ರಗಳಲ್ಲಿ ಆಧಾರ್ ಬಯೋಮೆಟ್ರಿಕ್ ದೃಢೀಕರಣದ ಮೂಲಕ ಹೊಸದಾಗಿ ನೋಂದಣಿ ಪಡೆಯಲು ಇಚ್ಛಿಸುವ ಅರ್ಜಿದಾರರ ಬಯೋಮೆಟ್ರಿಕ್ ದೃಢೀಕರಣ ಮತ್ತು ದಾಖಲೆಗಳ ಪರಿಶೀಲನೆ ಮಾಡಲಾಗುತ್ತದೆ.
ಈ ಹಂತದ ಪ್ರಕ್ರಿಯೆಯು ಅಮಾಯಕರ ದಾಖಲೆಗಳನ್ನು ಬಳಸಿಕೊಂಡು ನಕಲಿ ಜಿಎಸ್‌ಟಿ ನೋಂದಣಿ ತಡೆಯುವಲ್ಲಿ ನೆರವಾಗಿ ರಾಜ್ಯದಲ್ಲಿ ಉತ್ತಮ ವ್ಯವಹಾರಿಕ ವಾತಾವರಣ ಉತ್ತೇಜಿಸಲಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರಾದ ಶಿಖಾ ತಿಳಿಸಿದ್ದಾರೆ.