ಮೈಸೂರು: ಸಣ್ಣ ವ್ಯಾಪಾರಿಗಳ ಮೇಲೆ ಜಿಎಸ್‌ಟಿ ವಿಧಿಸುತ್ತಿರುವುದನ್ನು ವಿರೋಧಿಸಿ ಮೈಸೂರು ಕನ್ನಡ ವೇದಿಕೆ ವತಿಯಿಂದ ನಗರದ ಹಳೇ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.
ಮೈಸೂರು ಕನ್ನಡ ವೇದಿಕೆ: ಸರ್ಕಾರಿ ಕೆಲಸ ನಿರೀಕ್ಷೆ ಮಾಡದೆ ಸ್ವಾಲಂಬಿಯಾಗಿ ಬದುಕುತ್ತಿರುವ ಬೀದಿ ವ್ಯಾಪಾರಿಗಳನ್ನು ಬೀದಿ ಪಾಲು ಮಾಡಲು ಹೊರಟಿರುವ ಸರ್ಕಾರದ ಆರ್ಥಿಕ ನೀತಿ ಖಂಡನೀಯ. ಡಿಜಿಟಲ್ ಹೆಸರಿನಲ್ಲಿ ವ್ಯಾಪಾರಿಗಳನ್ನು ನಂಬಿಸಿ ಈಗ ಏಕಾಏಕಿ ಯಾವುದೇ ಮುನ್ಸೂಚನೆ ನೀಡದೆ ತೆರಿಗೆ ಪಾವತಿಸಲು ನೋಟಿಸ್ ನೀಡಿರುವುದು ಸಮಂಜಸವಲ್ಲ ಎಂದು ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್. ಬಾಲಕೃಷ್ಣ ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರದ ನೀತಿಯಿಂದ ಬೀದಿ ವ್ಯಾಪಾರಿಗಳು, ಹೂವಿನ ವ್ಯಾಪಾರಿಗಳು ,ಹಾಲಿನ ವ್ಯಾಪಾರಿಗಳ ಕುಟುಂಬಗಳು ಬೀದಿಗೆ ಬೀಳುವುದರಲ್ಲಿ ಅನುಮಾನವಿಲ್ಲ. ಸರ್ಕಾರ ಕೂಡಲೇ ಎಚ್ಚೆತ್ತು ವ್ಯಾಪಾರಸ್ಥರು ಹಾಗೂ ತೆರಿಗೆ ಅಧಿಕಾರಿಗಳ ನಡುವೆ ಸಭೆ ಏರ್ಪಡಿಸಿ ಗೊಂದಲ ಪರಿಹರಿಸಬೇಕು. ಆ ಮೂಲಕ ಸಣ್ಣಪುಟ್ಟ ವ್ಯಾಪಾರಿಗಳು ನೆಮ್ಮದಿಯಿಂದ ಬದುಕುವಂತೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಈಗಾಗಲೇ ಸುಮಾರು ವ್ಯಾಪಾರಿಗಳು ಡಿಜಿಟಲ್ ಪೇಮೆಂಟ್ ರದ್ದು ಮಾಡಿ ನಗದು ವ್ಯವಾರ ಮಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಬಹಳ ತೊಂದರೆಯಾಗಿದೆ. ಸರ್ಕಾರ ಕೂಡಲೇ ಸಣ್ಣ ವ್ಯಾಪಾರಿಗಳು ಮತ್ತು ಸಾರ್ವಜನಿಕರಿಗೆ ಇದರಿಂದ ಆಗುತ್ತಿರುವ ತೊಂದರೆ ತಪ್ಪಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ವೇದಿಕೆ ಪದಾಧಿಕಾರಿಗಳಾದ ನಾಲಬೀದಿ ರವಿ, ಗುರುಬಸಪ್ಪ, ಬೋಗಾದಿ ಸಿದ್ದೇಗೌಡ, ಗೋಪಿ, ಪ್ಯಾಲೇಸ್ ಬಾಬು, ಹರೀಶ್, ಮಹದೇವಸ್ವಾಮಿ, ಸಿದ್ದಪ್ಪ ಎಲ್ಐಸಿ, ಗೋವಿಂದರಾಜು, ಸ್ವಾಮಿ, ಚಿನ್ನಪ್ಪ, ಶಿವಗೌಡ, ಪ್ರೇಮ ಮಾಲಿನಿ, ಪುಷ್ಪಲತಾ ಹಾಗೂ ಇತರರು ಪಾಲ್ಗೊಂಡಿದ್ದರು.