

ನವದೆಹಲಿ: ಕೋವಿಡ್-19 ಲಾಕ್ಡೌನ್ನಿಂದಾಗಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಬೊಕ್ಕಸಗಳಿಗೆ ಭಾರಿ ನಷ್ಟವಾಗುತ್ತಿದೆ. ಅಲ್ಲದೆ, ಕೋವಿಡ್-19 ಲಾಕ್ಡೌನ್ನಿಂದ ಸಂಕಷ್ಟದಲ್ಲಿರುವ ಎಲ್ಲ ವರ್ಗಗಳಿಗೂ ಸಹಾಯ ಮಾಡಲು ಸರ್ಕಾರಗಳು ಆರ್ಥಿಕ ಪ್ಯಾಕೇಜ್ಗಳನ್ನು ಘೋಷಿಸುತ್ತಿವೆ. ಇವೆಲ್ಲವೂ ಬಜೆಟೇತರ ವೆಚ್ಚವಾಗಿದ್ದು, ಇದಕ್ಕೆ ಅಗತ್ಯ ಆರ್ಥಿಕ ಸಂಪನ್ಮೂಲ ಕ್ರೋಢಿಕರಣಕ್ಕಾಗಿ ಕೇಂದ್ರ ಸರ್ಕಾರ ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್ಟಿ) ಹೆಚ್ಚಿಸುವ ಸಾಧ್ಯತೆ ಇರುವುದಾಗಿ ಹೇಳಲಾಗುತ್ತಿದೆ.
ಆದರೆ, ಇದನ್ನು ಅಲ್ಲಗಳೆದಿರುವ ಕೇಂದ್ರ ವಿತ್ತ ಸಚಿವಾಲಯ, ಲಾಕ್ಡೌನ್ನಿಂದ ಸಂಕಷ್ಟದಲ್ಲಿರುವ ವಾಣಿಜ್ಯೋದ್ಯಮ ಸೇರಿ ಎಲ್ಲ ವರ್ಗದವರಿಗೂ ಅನುಕೂಲ ಮಾಡಿಕೊಡಲು ಸರ್ಕಾರ ಪ್ರಯತ್ನಮುಖಿಯಾಗಿದೆ. ಇಂಥ ಸಂದರ್ಭದಲ್ಲಿ ಜಿಎಸ್ಟಿ ಹೆಚ್ಚಿಸುವುದು ವಿರೋಧಭಾಸವೆನಿಸಿಕೊಳ್ಳುತ್ತದೆ. ಹಾಗಾಗಿ ಇಂಥ ಯಾವುದೇ ಪ್ರಯತ್ನಗಳನ್ನು ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ.
ಕರೊನಾ ಪಿಡುಗಿನ ಸಂದರ್ಭದಲ್ಲಿ ಯಾವುದೇ ಮೇಲ್ತರಿಗೆ ವಿಧಿಸುವುದು ಅಥವಾ ತೆರಿಗೆ ಹೆಚ್ಚಿಸುವುದು ಮತ್ತಷ್ಟು ಸಂಕಷ್ಟಕ್ಕೆ ಕಾರಣವಾಗುತ್ತದೆ. ಅಲ್ಲದೆ, ರಾಷ್ಟ್ರದಲ್ಲಿ ಆರ್ಥಿಕ ಪುನ್ಶೇತನಕ್ಕಾಗಿ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳಿಗೆ ಹಿನ್ನಡೆಯಾಗುತ್ತದೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಲಾಕ್ಡೌನ್ ಅವಧಿಯಲ್ಲಿ ಮಾರಾಟ ತುಂಬಾ ಕಡಿಮೆಯಾಗಿದೆ. ಅಲ್ಲದೆ, ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲದ ಕಾರಣ ಉತ್ಪಾದನಾ ವಲಯವೂ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಭವಿಷ್ಯದಲ್ಲಿ ಈ ವಲಯಕ್ಕೆ ಕಾರ್ಮಿಕರ ಕೊರತೆಯೂ ಉಂಟಾಗುವ ಸಾಧ್ಯತೆ ಇಲ್ಲದಿಲ್ಲ. ಹಾಗಾಗಿ, ತೆರಿಗೆ ಹೆಚ್ಚಿಸುವುದು ಇಲ್ಲವೇ ಮೇಲ್ತೆರಿಗೆ ವಿಧಿಸುವುದು ಸರಿಯಲ್ಲ. ಹಾಗೆ ಮಾಡುವುದರಿಂದ ಗ್ರಾಹಕರ ಮನಸ್ಸಿನ ಮೇಲೆ ಗಾಢ ಪರಿಣಾಮ ಉಂಟಾಗುವ ಅಪಾಯವಿದೆ. ಇದರಿಂದ ಪುನ್ಶೇತನದ ಹಾದಿಯಲ್ಲಿ ಉತ್ಪಾದನಾ ವಲಯ ಹಾಗೂ ಮಾರಾಟಗಾರರಿಗೆ ಎಡರುತೊಡರು ಎದುರಾಗುವ ಸಾಧ್ಯತೆ ಇದೆ ವಿವರಿಸಿದ್ದಾರೆ.