

ನವದೆಹಲಿ: ಕರೊನಾ ಪರಿಸ್ಥಿತಿ ನಡುವೆಯೂ ಡಿಸೆಂಬರ್ ತಿಂಗಳ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹ 1.15 ಲಕ್ಷ ಕೋಟಿ ರೂ. ದಾಖಲಾಗಿದೆ. ದೇಶದಲ್ಲಿ ಜಿಎಸ್ಟಿ ಜಾರಿಯಾದ ಬಳಿಕ ತಿಂಗಳೊಂದರಲ್ಲಿ ಕಂಡುಬಂದ ಅತ್ಯಧಿಕ ತೆರಿಗೆ ಸಂಗ್ರಹ ಇದಾಗಿದೆ. ದೇಶದ ವಿತ್ತ ವ್ಯವಸ್ಥೆ ಸುಧಾರಣೆಯ ಪಥದಲ್ಲಿ ಸಾಗುತ್ತಿದೆ ಎಂಬುದರ ಸೂಚಕ ಇದು ಎಂದು ವಿಶ್ಲೇಷಿಸಲಾಗಿದೆ.
ಕಳೆದ ಮೂರು ತಿಂಗಳಿಂದ ಸತತವಾಗಿ ತೆರಿಗೆ ಸಂಗ್ರಹ ಪ್ರಮಾಣ 1 ಲಕ್ಷ ಕೋಟಿ ರೂ. ದಾಟುತ್ತಿದೆ. ಕರೊನಾ ಮಹಾಮಾರಿ ಹಾಗೂ ಲಾಕ್ಡೌನ್ ಪರಿಣಾಮ ನೆಲಕಚ್ಚಿದ್ದ ಆರ್ಥಿಕತೆಯನ್ನು ಸುಧಾರಿಸುವ ಸಂಬಂಧ ಕೇಂದ್ರ ಸರ್ಕಾರ ಕೈಗೊಂಡ ಕ್ಷಿಪ್ರ ಕ್ರಮಗಳು ಹಾಗೂ ಜಿಎಸ್ಟಿ ವಂಚಕರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡಿದ್ದರಿಂದಾಗಿ ತೆರಿಗೆ ಸಂಗ್ರಹದಲ್ಲಿ ಏರಿಕೆ ಕಂಡುಬರುತ್ತಿದೆ ಎಂದು ಇಲಾಖೆ ಹೇಳಿದೆ. 2017ರ ಜುಲೈ 1ರಂದು ಜಿಎಸ್ಟಿ ಜಾರಿಗೆ ಬಂದ ನಂತರ 2019ರ ಏಪ್ರಿಲ್ನಲ್ಲಿ ರೂ. 1,13,866 ಕೋಟಿ ತೆರಿಗೆ ಸಂಗ್ರಹವಾಗಿದ್ದು ಈವರೆಗಿನ ಅತ್ಯಧಿಕ ಪ್ರಮಾಣವಾಗಿದೆ. ದೇಶಾದ್ಯಂತ ಕರೊನಾ ಲಾಕ್ಡೌನ್ ಬಳಿಕ ಕಳೆದ ಏಪ್ರಿಲ್ನಲ್ಲಿ ಜಿಎಸ್ಟಿ ಸಂಗ್ರಹ 32, 172 ಕೋಟಿಗೆ ಕುಸಿದಿತ್ತು.
ರಾಜ್ಯಕ್ಕೆ ಮೂರನೇ ಸ್ಥಾನ
ಕರೊನಾಘಾತದ ಬಳಿಕ ಸರಕು ಮತ್ತು ಸೇವಾ ತೆರಿಗೆ ಸಂಗ್ರಹದಲ್ಲಿ ಕರ್ನಾಟಕದಲ್ಲಿ ಗಮನಾರ್ಹ ಬೆಳವಣಿಗೆ ಕಾಣಿಸಿದ್ದು, 2019ರ ಡಿಸೆಂಬರ್ಗೆ ಹೋಲಿಸಿದರೆ ಶೇ. 8 ಹೆಚ್ಚಳವಾಗಿದೆ. ಮಹಾರಾಷ್ಟ್ರದಲ್ಲಿ 17,699 ಕೋಟಿ ರೂ. ಸಂಗ್ರಹವಾಗಿದ್ದರೆ, ಗುಜರಾತ್ನಲ್ಲಿ 7469 ಕೋಟಿ ರೂ. ಮತ್ತು ಕರ್ನಾಟಕದಲ್ಲಿ 7459 ಕೋಟಿ ಸಂಗ್ರಹಿಸಲಾಗಿದೆ. ಈ ಮೂಲಕ ರಾಜ್ಯಗಳ ಪೈಕಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ರಾಜ್ಯದಲ್ಲಿ 6886 ಕೋಟಿ ಸಂಗ್ರಹಿಸಲಾಗಿತ್ತು. ಅನ್ಲಾಕ್ ಪ್ರಕ್ರಿಯೆ ಆರಂಭವಾದ ಬಳಿಕ ರಾಜ್ಯದಲ್ಲಿ ಆರ್ಥಿಕ ಚಟುವಟಿಕೆ ಹೆಚ್ಚಾಗಿದ್ದು, ಉತ್ಪಾದನಾ ವಲಯ ಸಹಜತೆಯತ್ತ ಮರಳಿದೆ.
ಕಳೆದ 6 ತಿಂಗಳ ಜಿಎಸ್ಟಿ ಸಂಗ್ರಹ