ಜಿಎಸ್​ಟಿ ಸಂಗ್ರಹ ಶೇ. 6.5 ಏರಿಕೆ

photo-5-68b5e3202a52b
Published on

ನವದೆಹಲಿ: ಆಗಸ್ಟ್​ನಲ್ಲಿ ಒಟ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಸಂಗ್ರಹ ಶೇ. 6.5ರಷ್ಟು ಏರಿಕೆಯಾಗಿ 1.86 ಲಕ್ಷ ಕೋಟಿ ರೂ.ಗೆ ತಲುಪಿದೆ. 2024ರ ಆಗಸ್ಟ್ನಲ್ಲಿ ಇದು 1.75 ಲಕ್ಷ ಕೋಟಿ ರೂ. ಇತ್ತು. ಕಳೆದ ತಿಂಗಳು 1.96 ಲಕ್ಷ ಕೋಟಿ ರೂ. ಸಂಗ್ರಹವಾಗಿತ್ತು ಎಂದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ದತ್ತಾಂಶದಲ್ಲಿ ತಿಳಿಸಲಾಗಿದೆ.

ಒಟ್ಟು ದೇಶೀಯ ಆದಾಯ ಶೇ. 9.6ರಷ್ಟು ಏರಿಕೆಯಾಗಿ 1.37 ಲಕ್ಷ ಕೋಟಿ ರೂ.ಗೆ ತಲುಪಿದ್ದರೆ, ಆಮದುಗಳಿಂದ ಬಂದ ತೆರಿಗೆ ಆಗಸ್ಟ್​ನಲ್ಲಿ ಶೇ. 1.2ರಷ್ಟು ಕುಸಿತಗೊಂಡು 49,354 ಕೋಟಿ ರೂ.ಗೆ ಇಳಿದಿದೆ. ಜಿಎಸ್​ಟಿ ರಿಫಂಡ್​ಗಳು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 20ರಷ್ಟು ಕಡಿಮೆಯಾಗಿ 19,359 ಕೋಟಿ ರೂ.ಗೆ ಇಳಿಕೆಯಾಗಿವೆ. ನಿವ್ವಳ ಜಿಎಸ್​ಟಿ ಆದಾಯ 2025ರ ಆಗಸ್ಟ್ನಲ್ಲಿ 1.67 ಲಕ್ಷ ಕೋಟಿ ರೂ. ಆಗಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 10.7ರಷ್ಟು ಬೆಳವಣಿಗೆ ದಾಖಲಿಸಿದೆ.

ಜಿಎಸ್​ಟಿ ಆದಾಯದಲ್ಲಿ ಚಿಕ್ಕ ರಾಜ್ಯಗಳ ಪೈಕಿ ಸಿಕ್ಕಿಂ (ಶೇ. 39), ಮೇಘಾಲಯ (ಶೇ. 35) ಮತ್ತು ನಾಗಾಲ್ಯಾಂಡ್ (ಶೇ. 33) ವೇಗವಾದ ಬೆಳವಣಿಗೆಯನ್ನು ಕಂಡಿವೆ. ದೊಡ್ಡ ರಾಜ್ಯಗಳಲ್ಲಿ, ಮಹಾರಾಷ್ಟ್ರ 28,900 ಕೋಟಿ ರೂ. (ಶೇ. +10), ಕರ್ನಾಟಕ 14,204 ಕೋಟಿ ರೂ. (ಶೇ. +15), ತಮಿಳುನಾಡು 11,057 ಕೋಟಿ ರೂ. (ಶೇ. +9), ಮತ್ತು ಉತ್ತರ ಪ್ರದೇಶ 9,086 ಕೋಟಿ ರೂ. (ಶೇ. +10) ಸಂಗ್ರಹಿಸಿವೆ. ಇನ್ನೊಂದೆಡೆ, ಚಂಡೀಗಢ (ಶೇ. -12), ಮಣಿಪುರ (ಶೇ. -24) ಮತ್ತು ಜಾರ್ಖಂಡ್ (ಶೇ. -1) ಜಿಎಸ್​ಟಿ ಸಂಗ್ರಹದಲ್ಲಿ ಕುಸಿತ ದಾಖಲಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net