

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಐದು ಗ್ಯಾರೆಂಟಿಗಳಲ್ಲಿ ಪ್ರಮುಖವಾದ ‘ಗೃಹಲಕ್ಷ್ಮೀ ಯೋಜನೆ’ ಗೆ ಆಗಸ್ಟ್ 30ರಂದು ಮೈಸೂರಿನಲ್ಲಿ ಚಾಲನೆ ದೊರೆಯಲಿದ್ದು, ಅಗತ್ಯ ಸಿದ್ಧತೆಗಳು ಆರಂಭವಾಗಿವೆ.
ಈಗಾಗಲೇ ಯೋಜನೆಯ ಲಾಭ ಪಡೆಯಲು ರಾಜ್ಯಾದ್ಯಂತ 1.09 ಕೋಟಿ ಗೂ ಅಧಿಕ ಲಾನುಭವಿಗಳು ನೋಂದಣಿ ಮಾಡಿಸಿದ್ದಾರೆ. ಯೋಜನೆಯಡಿ ಮನೆಯ ಯಜಮಾನಿಗೆ ಮಾಸಿಕ ಎರಡು ಸಾವಿರ ರೂ. ಮೊತ್ತವನ್ನು ಸರ್ಕಾರ ಲಾನುಭವಿಗಳ ಖಾತೆಗೆ ಹಾಕಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ನಾಗರ ಪಂಚಮಿ ಹಬ್ಬದ ಪ್ರಯುಕ್ತ ಬೆಂಗಳೂರಿನ ಅರಮೆನ ಮೈದಾನದಲ್ಲಿನ ವೃಕ್ಷ ಸಾಂಪ್ರದಾಯಿಕ ಕಲಾಮಂದಿರ ಶನಿವಾರ ನಡೆದ ‘ನಮ್ಮೂರ ನಾಗರ ಪಂಚಮಿ’ ಹಬ್ಬದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಚಾಮುಂಡೇಶ್ವರಿ ತಾಯಿಯ ಕ್ಷೇತ್ರದಲ್ಲಿ ಈ ಮಹತ್ವದ ಯೋಜನೆಗೆ ಚಾಲನೆ ಸಿಗುತ್ತಿರುವುದು ನನ್ನ ಅದೃಷ್ಟು ಎಂದ ಅವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಯೋಜನೆಗೆ ಚಾಲನೆ ನೀಡಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿ ಪ್ರಮುಖ ನಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಸಿದ್ಧತೆ ಪರಿಶೀಲನೆ: ಗೃಹ ಲಕ್ಷ್ಮೀ ಯೋಜನೆ ಉದ್ಘಾಟನಾ ಕಾರ್ಯಕ್ರಮಕ್ಕೆ ಈಗಾಗಲೇ ಸಿದ್ಧತೆ ಆರಂಭವಾಗಿದ್ದು, ಪರಿಶೀಲನೆಗಾಗಿ ಮೈಸೂರಿಗೆ ತೆರಳಲಿದ್ದೇನೆ. ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಮೈಸೂರು, ಮಂಡ್ಯ ಹಾಗೂ ಹಾಸನ ಜಿಲ್ಲೆಯ ಸಚಿವರು ಹಾಗೂ ಶಾಸಕರೊಂದಿಗೆ ಸಭೆ ನಡೆಸುವುದಾಗಿ ಹೇಳಿದರು.
ಈ ಮೊದಲು ಗೃಹಜ್ಯೋತಿ ಯೋಜನೆಗೆ ಕಲಬುರ್ಗಿಯಲ್ಲಿ ಚಾಲನೆ ನೀಡಲಾಯಿತು. ಗೃಹಲಕ್ಷ್ಮೀ ಯೋಜನೆಯನ್ನು ಬೆಳಗಾವಿಯಲ್ಲಿ ಉದ್ಘಾಟಿಸಲು ಉದ್ದೇಶಿಸಲಾಗಿತ್ತು. ಆದರೆ ರಾಹುಲ್ ಗಾಂಧಿ ಅವರ ದಿನಾಂಕ ಹೊಂದಾಣಿಕೆ ಆಗದ ಕಾರಣ, ಆ. 30ರಂದು ಮೈಸೂರಿನಲ್ಲಿ ನಡೆಸಲು ತೀರ್ಮಾನಿಸಲಾಯಿತು ಎಂದು ತಿಳಿಸಿದರು.