ಸಿರಿಧಾನ್ಯ ಬೆಳೆದು ಸಿರಿವಂತರಾಗಿ, ಕಂದಾಯ ಸಚಿವ ಆರ್.ಅಶೋಕ್ ಕರೆ, ಹಾಡೋನಹಳ್ಳಿಯಲ್ಲಿ ಕಿಸಾನ್ ಮೇಳ ಮತ್ತು ಸಿರಿಧಾನ್ಯಗಳ ಹಬ್ಬ

f27d3fdd-f845-4d46-8c8c-03a9b8d7a352
Published on

ಬೆಂಗಳೂರು ಗ್ರಾಮಾಂತರ/ತೂಬಗೆರೆ: ಸಿರಿ ಧಾನ್ಯ ಬಳಕೆಯಿಂದ ಆರೋಗ್ಯ ಸದೃಢಗೊಳ್ಳಲಿದೆ. ಈ ನಿಟ್ಟಿನಲ್ಲಿ ರೈತರು ಸಿರಿಧಾನ್ಯ ಬೆಳೆದು ಸಿರಿವಂತರಾಗಬೇಕು ಎಂದು ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ ಕರೆ ನೀಡಿದರು.

ಜಿಲ್ಲಾಡಳಿತ, ಕೃಷಿ ಇಲಾಖೆ, ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರ ಸಹಯೋಗದೊಂದಿಗೆ ತೂಬಗೆರೆ ಹೋಬಳಿಯ ಹಾಡೋನಹಳ್ಳಿಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಿಸಾನ್ ಮೇಳ ಮತ್ತು ಸಿರಿಧಾನ್ಯಗಳ ಹಬ್ಬದಲ್ಲಿ ಮಾತನಾಡಿದರು.

ಹಲವು ವರ್ಷದ ಹಿಂದೆ ಕೃಷಿ ವಿಜ್ಞಾನಿಗಳ ಸಲಹೆ ಮೇರೆಗೆ ರಸಗೊಬ್ಬರ ಬಳಸಲು ಮುಂದಾದ ರೈತರು, ನಂತರ ಆಹಾರ ಉತ್ಪಾದನೆ ಹೆಚ್ಚಾದರೂ ಮಣ್ಣು ತನ್ನ ಸಾರ ಕಳೆದುಕೊಂಡು ಆಹಾರ ಧಾನ್ಯಗಳಲ್ಲಿನ ಗುಣಮಟ್ಟ ಕುಸಿಯತೊಡಗಿತು. ಆದ್ದರಿಂದ ರೈತರು ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡು ಸಿರಿಧಾನ್ಯ ಬೆಳೆಯುವ ಮೂಲಕ ಜನರ ಆರೋಗ್ಯ ರಕ್ಷಣೆಗೆ ಮುಂದಾಗಬೇಕು ಎಂದರು.

ರೈತರಿಗೂ ಲಾಭದಾಯಕ: ಕೃಷಿ ಇಲಾಖೆ ಅಧಿಕಾರಿಗಳು ಸಿರಿ ಧಾನ್ಯಗಳ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು. ಸಿರಿ ಧಾನ್ಯಗಳ ಮಹತ್ವ, ಬೆಳೆಯುವ ಬಗೆಯನ್ನು ರೈತರಿಗೆ ತಿಳಿಸುವ ಮೂಲಕ ಪ್ರೋತ್ಸಾಹಿಸುವ ಕೆಲಸ ಮಾಡಬೇಕು. ಸಿರಿ ಧಾನ್ಯಗಳಿಂದ ಹತ್ತಾರು ಬಗೆಯ ಆಹಾರ ಖಾದ್ಯಗಳನ್ನು ತಯಾರಿಸಬಹುದಾಗಿದ್ದು ರೈತರಿಗೆ ಲಾಭದಾಯಕವಾಗಲಿದೆ ಎಂದು ಸಚಿವರು ಹೇಳಿದರು.

ಮಣ್ಣಿನ ಪರೀಕ್ಷೆ ಮುಖ್ಯ:ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ರೈತರು ಬೆಳೆ ಬೆಳೆಯುವ ಮುನ್ನ ಮಣ್ಣಿನ ಪರೀಕ್ಷೆ ಮಾಡಿಸಿ ನಂತರ ಕೃಷಿ ಕಾರ್ಯ ಮಾಡಬೇಕು ಎಂದು ಮನವಿ ಮಾಡಿದರು. ದೊಡ್ಡಬಳ್ಳಾಪುರ ತಾಲೂಕಿನಲ್ಲಿನ ಜಿಲ್ಲಾ ಆಸ್ಪತ್ರೆಗೆ ಮೂಲ ಸೌಕರ್ಯ ಕಲ್ಪಿಸಿ, ಮೇಲ್ದರ್ಜೆಗೆರಿಸಲು ಈಗಾಗಲೇ 90 ಕೋಟಿ ರೂಪಾಯಿ ನೀಡುವಂತೆ ಆರೋಗ್ಯ ಇಲಾಖೆಯಿಂದ ಮನವಿ ಮಾಡಲಾಗಿದ್ದು, ಬಜೆಟ್‌ನಲ್ಲಿ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಜಿಕೆವಿಕೆ ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಎಸ್.ರಾಜೇಂದ್ರ ಪ್ರಸಾದ್ ಮಾತನಾಡಿ, ಸ್ವಾತಂತ್ರ್ಯಾ ನಂತರ ದೇಶದಲ್ಲಿದ್ದ ಆಹಾರದ ಕೊರತೆ ನೀಗಿಸಲು ಬೇರೆ ಬೇರೆ ದೇಶಗಳಿಂದ ಆಹಾರ ಪದಾರ್ಥಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಆಗ, ನಮ್ಮಲ್ಲಿ ಆಹಾರ ಧಾನ್ಯಗಳ ಉತ್ಪಾದನೆ ಹೆಚ್ಚಿಸುವ ಸಲುವಾಗಿ, ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಹೊಸ ತಂತ್ರಜ್ಞಾನದ ಮೊರೆ ಹೋಗಲಾಯಿತು. ಆ ನಿಟ್ಟಿನಲ್ಲಿ ಹಸಿರು ಕ್ರಾಂತಿ ಸಾಧಿಸಲು ಸಾಧ್ಯವಾಯಿತು ಎಂದರು.

ಸಾಧಕರಿಗೆ ಸನ್ಮಾನ: ಆರ್.ಅಶೋಕ್ ರೈತ ಸಾಧಕರನ್ನು ಸನ್ಮಾನಿಸಿದರು. ಕೃಷಿ ಮಳಿಗೆಗಳನ್ನು ವೀಕ್ಷಿಸಿದರು. ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನೊಳಗೊಂಡ ಭಿತ್ತಿ ಪತ್ರಗಳನ್ನು ಬಿಡುಗಡೆ ಮಾಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿ.ಪ್ರಸಾದ್, ಜಿಪಂ ಸದಸ್ಯ ಎಚ್.ಅಪ್ಪಯ್ಯಣ್ಣ, ದೊಡ್ಡಬಳ್ಳಾಪುರ ತಾಪಂ ಅಧ್ಯಕ್ಷ ನಾರಾಯಣಗೌಡ, ತಾಪಂ ಸದಸ್ಯೆ ಯಶೋಧಮ್ಮ ಶಿವಕುಮಾರ್, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್‌ಕೆ.ನಾಯಕ, ಜಂಟಿ ಕೃಷಿ ನಿರ್ದೇಶಕ ಜಿ.ಎಸ್.ಜಯಸ್ವಾಮಿ, ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಎ.ಪಿ.ಮಲ್ಲಿಕಾರ್ಜುನಗೌಡ, ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಡಾ.ಅರುಳ್ ಕುಮಾರ್ ತಹಸೀಲ್ದಾರ್ ಶಿವರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net