

ಕಿಕ್ಕೇರಿ: ಗ್ರಾಮದ ಕೆಪಿಎಸ್ ಶಾಲೆಯಲ್ಲಿ ಮಕ್ಕಳು, ಶಿಕ್ಷಕರು ಸಂಭ್ರಮದಿಂದ ಯೋಗವನ್ನು ಪ್ರದರ್ಶಿಸಿದರು.
ಶನಿವಾರ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಜರುಗಿದ ಯೋಗ ಕಾರ್ಯಕ್ರಮದಲ್ಲಿ ಶಿಕ್ಷಕರು ಯೋಗಪಟುಗಳಂತೆ ಮಕ್ಕಳಿಗೆ ಉಪಯುಕ್ತ ಆಸನಳನ್ನು ಪ್ರದರ್ಶಿಸಿ ನಿರಂತರ ಅಭ್ಯಾಸದಲ್ಲಿ ತೊಡಗಲು ಹುರಿದುಂಬಿಸಿದರು.
ವಿದ್ಯಾರ್ಥಿಗಳಿಗೆ ಅವಶ್ಯವಾದ ಏಕಾಗ್ರತೆ, ಜ್ಞಾಪಕಶಕ್ತಿಯ ವಿವಿಧ ಆಸನಗಳನ್ನು ಗುರುಗಳ ಮಾರ್ಗದರ್ಶನದಲ್ಲಿ ಮಾಡಿದರು. ಪ್ರಾಂಶುಪಾಲ ಸಹದೇವು ಹಾಗೂ ಉಪಪ್ರಾಂಶುಪಾಲ ಚಲುವನಾರಾಯಣಸ್ವಾಮಿ ಮಾತನಾಡಿ, ವಿಶ್ವಾದ್ಯಂತ ಯೋಗ ದಿನವನ್ನು ಸಂಭ್ರಮದಿಂದ ಆಚರಿಸುತ್ತಿರುವುದು ಎಲ್ಲರ ಆರೋಗ್ಯ, ಮಾನಸಿಕ ನೆಮ್ಮದಿಗೆ ಕಾರಣವಾಗಿದೆ. ಯೋಗ, ಧ್ಯಾನ, ಪ್ರಾಣಾಯಾಮಗಳು ಶರೀರಕ್ಕೆ ಹೆಚ್ಚು ಆಮ್ಲಜನಕ, ಸರಾಗ ರಕ್ತ ಪರಿಚಲನೆ ಲಭಿಸಲು ದಿವ್ಯ ಔಷಧವಾಗಿದೆ ಎಂದರು.
ಗ್ರಾಮೀಣ ಪ್ರದೇಶದ ಮಕ್ಕಳಿಗೆ ಯೋಗ ದಿನಾಚರಣೆಯು ಹೊಸ ಅನುಭವ ನೀಡಿತು. ಕೆಪಿಎಸ್ ಶಾಲೆಯ ಪದವಿಪೂರ್ವ ಕಾಲೇಜು, ಪ್ರೌಢಶಾಲೆ, ಹಿರಿಯ ಹಾಗೂ ಕಿರಿಯ ಪ್ರಾಥಮಿಕ ಶಾಲೆ ವಿಭಾಗದ ಉಪನ್ಯಾಸಕ ವೃಂದ, ಮುಖ್ಯಶಿಕ್ಷಕರು, ಶಿಕ್ಷಕರು ಹಾಜರಿದ್ದರು.