14ರಿಂದ ಗ್ರೂಪ್ ಬಿ ವೃಂದ ನೇಮಕಾತಿ ಪರೀಕ್ಷೆ

meeting
ಕೆಪಿಎಸ್‌ಸಿಯಿಂದ ವಿವಿಧ ಇಲಾಖೆಗಳ ಗ್ರೂಪ್ ಬಿ ವೃಂದದ(ಆರ್‌ಪಿಸಿ) ಹುದ್ದೆಗಳ ನೇಮಕಾತಿಗಾಗಿ ನಡೆಯುವ ಪರೀಕ್ಷೆಯ ಪೂರ್ವಸಿದ್ಧತೆ ಕುರಿತು ಪ್ರದೀಪ್ ನಿಕ್ಕಂ ಸಭೆ ನಡೆಸಿದರು. ಮಂಜುನಾಥ್, ಸಾವಿತ್ರಿ, ಕೃಷ್ಣಮೂರ್ತಿ, ಸುರೇಶ್ ಇತರರಿದ್ದರು.
Published on

ಶಿವಮೊಗ್ಗ: ಕರ್ನಾಟಕ ಲೋಕಸೇವಾ ಆಯೋಗದಿಂದ ವಿವಿಧ ಇಲಾಖೆಗಳ ಗ್ರೂಪ್ ಬಿ ವೃಂದದ(ಆರ್‌ಪಿಸಿ) ಹುದ್ದೆಗಳ ನೇಮಕಾತಿಗಾಗಿ ನಗರದಲ್ಲಿ ಸೆ.14 ಮತ್ತು 15ರಂದು ನಡೆಯುವ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಡಿಸಿ ಕಚೇರಿ ಸಹಾಯಕ ಅಧಿಕಾರಿ ಪ್ರದೀಪ್ ನಿಕ್ಕಂ ಸೂಚಿಸಿದರು.

ಕೆಪಿಎಸ್‌ಸಿ ಕಾರ್ಯದರ್ಶಿಯೊಂದಿಗೆ ನಡೆದ ಸಂವಾದದ ಬಳಿಕ ಬುಧವಾರ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದ ಅವರು, 28 ಪರೀಕ್ಷಾ ಕೇಂದ್ರಗಳಲ್ಲಿ ವಿವಿಧ ಇಲಾಖೆಗಳಲ್ಲಿನ ನೇಮಕಾತಿಗೆ ಕನ್ನಡ ಭಾಷಾ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿವೆ ಎಂದರು.
ಸೆ.14ರ ಮಧ್ಯಾಹ್ನ 2ರಿಂದ ಸಂಜೆ 4ರವರೆಗೆ ಕನ್ನಡ ಭಾಷಾ ಪರೀಕ್ಷೆ, 15ರ ಬೆಳಗ್ಗೆ 10ರಿಂದ 11.30ರವರೆಗೆ ಕನ್ನಡ ಭಾಷಾ ಪರೀಕ್ಷೆ ಪತ್ರಿಕೆ-1, ಸಾಮಾನ್ಯ ಪತ್ರಿಕೆ ಹಾಗೂ ಮಧ್ಯಾಹ್ನ 2ರಿಂದ ಸಂಜೆ 4ರವರೆಗೆ ಸಾಮಾನ್ಯ ಪತ್ರಿಕೆ ಪರೀಕ್ಷೆ ನಡೆಯಲಿದೆ. 14ರಂದು 7,066 ಅಭ್ಯರ್ಥಿಗಳು, 15ರ ಬೆಳಗಿನ ಪರೀಕ್ಷೆಯಲ್ಲಿ 8,993 ಮತ್ತು ಮಧ್ಯಾಹ್ನದ ಪರೀಕ್ಷೆಯಲ್ಲಿ 8,354 ಅಭ್ಯರ್ಥಿಗಳು ಹಾಗೂ 12 ಅಂಗವಿಕಲರು ಪರೀಕ್ಷೆ ಎದುರಿಸಲಿದ್ದಾರೆ ಎಂದು ತಿಳಿಸಿದರು.
ಪರೀಕ್ಷಾ ಕೇಂದ್ರಗಳಿಗೆ ಸ್ಥಳೀಯ ನಿರೀಕ್ಷಣಾಧಿಕಾರಿಗಳು, ಮಾರ್ಗಾಧಿಕಾರಿಗಳು, ವೀಕ್ಷಕರು, ಕೊಠಡಿ ಪರಿವೀಕ್ಷಕರನ್ನು ನಿಯೋಜಿಸಲಾಗಿದೆ. ಎಲ್ಲ ಕೇಂದ್ರಗಳಲ್ಲಿ ಜ್ಯಾಮರ್ ಮತ್ತು ಸಿಸಿ ಕ್ಯಾಮರಾ ಅಳವಡಿಸಲಾಗುವುದು. ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಪರೀಕ್ಷೆ ಅವಧಿಯಲ್ಲಿ ವಿದ್ಯುತ್ ವ್ಯತ್ಯಯವಾಗದಂತೆ ಕ್ರಮ ಕೈಗೊಳ್ಳಲು ಮೆಸ್ಕಾಂಗೆ ಸೂಚಿಸಲಾಗಿದೆ ಎಂದರು
ಪರೀಕ್ಷಾ ಕೇಂದ್ರಗಳಿಗೆ ಮೊಬೈಲ್ ಮತ್ತು ಯಾವುದೇ ರೀತಿಯ ಎಲೆಕ್ಟ್ರಾನಿಕ್ಸ್ ಉಪಕರಣ ತರುವಂತಿಲ್ಲ. ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ಪ್ರದೇಶದಲ್ಲಿ ನಿಷೇಧಾಜ್ಞೆ ವಿಧಿಸಲಾಗುವುದು ಎಂದು ತಿಳಿಸಿದರು.
ಡಿಡಿಪಿಐ ಮಂಜುನಾಥ್, ಖಜಾನೆ ಅಧಿಕಾರಿ ಸಾವಿತ್ರಿ, ಡಿವೈಎಸ್ಪಿ ಸುರೇಶ್, ವಿವಿಧ ಕಾಲೇಜುಗಳ ಪ್ರಾಚಾರ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net