ನೀಟಾಗಿ ಶೇವ್​ ಮಾಡದಿದ್ದಕ್ಕೆ ಮದುವೆ ರದ್ದು: ಮಗನ ವಿವಾಹಕ್ಕೆ ತಂದೆಯೇ ಅಡ್ಡಿ..

beard
ಸಾಂದರ್ಭಿಕ ಚಿತ್ರ
Published on

ಕೊಯಮತ್ತೂರು: ತಮಿಳುನಾಡಿನ ಕೊಯಮತ್ತೂರಿನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಗಡ್ಡದ ವಿವಾದದಿಂದ ಮದುವೆ ರದ್ದಾಗಿದ್ದು, ಎಲ್ಲರಿಗೂ ಆಶ್ಚರ್ಯ ಉಂಟಾಗಿದೆ.

ಇದನ್ನೂ ಓದಿ: ಬಿಹಾರ ಸಿಎಂ ಬೆಂಗಾವಲು ಪಡೆಗಾಗಿ ತುರ್ತು ಅಗತ್ಯವಿದ್ದ ಆಂಬ್ಯುಲೆನ್ಸ್​ ನಿಲ್ಲಿಸಿದ ಪೊಲೀಸರು?: ವಿಐಪಿ ಸಂಸ್ಕೃತಿಗೆ ವ್ಯಾಪಕ ವಿರೋಧ

ಸೂಲೂರು ಪ್ರದೇಶದ ಕೈಗಾರಿಕೋದ್ಯಮಿಯೊಬ್ಬರು ತಮ್ಮ ಮಗನಿಗೆ ಮದುವೆಯನ್ನು ಮಾಡಿದರು. ಮೂರು ತಿಂಗಳ ಹಿಂದೆ ಅವರ ಮಗನಿಗೆ ಪೊಲ್ಲಾಚಿಯ ಯುವತಿಯೊಂದಿಗೆ ನಿಶ್ಚಿತಾರ್ಥವಾಗಿತ್ತು. ಎರಡೂ ಸಮುದಾಯದ ಹಿರಿಯರು ಮೂರು ತಿಂಗಳಿಂದ ಮದುವೆ ಕೆಲಸದಲ್ಲಿ ತೊಡಗಿದ್ದಾರೆ. ಆದರೆ ಕೈಗಾರಿಕೋದ್ಯಮಿಯ ಮಗ ಕೆಲಸದ ಜತೆಗೆ ತನ್ನ ಭಾವಿ ಪತ್ನಿಯೊಂದಿಗೆ ಫೋನ್‌ನಲ್ಲಿ ಮಾತನಾಡುವುದರಲ್ಲಿ ನಿರತನಾಗಿದ್ದನು. ಕೊನೆಗೆ ಮದುವೆ ಸಮಯದಲ್ಲಿ ಗಡ್ಡ ತೆಗೆದು ನೀಟಾಗಿ ಶೇವ್ ಮಾಡುವಂತೆ ಮಧುಮಗನಿಗೆ ತಂದೆ ಸಲಹೆ ನೀಡುತ್ತಿದ್ದರು.

ಕೊನೆಗೆ ಸೋಮವಾರದಂದು ಅದ್ಧೂರಿಯಾಗಿ ಮದುವೆ ನಡೆಸಲು ಎರಡೂ ಸಮುದಾಯದ ಕುಟುಂಬಸ್ಥರು ಸಜ್ಜಾಗಿದ್ದು, ತಂದೆಯ ಸಲಹೆಯಂತೆ ಭಾನುವಾರವೇ ವರ ಗಡ್ಡ ತೆಗೆಸಿ ಕ್ಲೀನ್ ಶೇವ್ ಮಾಡಿಕೊಳ್ಳಲು ಹೇರ್​ಕಟಿಂಗ್​​ ಶಾಪ್​ಗೆ ತೆರಳಿದ್ದನು. ಆದರೆ ಏನಾಯಿತೋ ಗೊತ್ತಿಲ್ಲ, ಗಡ್ಡ ಶೇವ್​ ಮಾಡಿಕೊಂಡು ಬರದೇ ಆತ ಟ್ರಿಮ್ ಮಾಡಿಕೊಂಡು ಮನೆಗೆ ಬಂದಿದ್ದ. ಇದನ್ನು ಕಂಡ ತಂದೆಗೆ ಕೋಪ ಬಂದಿದ್ದು, ಯಾಕೆ ಶೇವ್ ಮಾಡಿಲ್ಲ ಎಂದು ಕೇಳಿದ್ದಾರೆ. ಆಗ ಯುವಕ ಭಾವಿ ಪತ್ನಿ ಗಡ್ಡವನ್ನು ನೀಟಾಗಿ ಶೇವ್​ ಮಾಡದೇ ಸ್ವಲ್ಪ ಟ್ರಿಮ್ ಮಾಡುವಂತೆ ಸೂಚಿಸಿದ್ದಾಗಿ ತಂದೆಗೆ ತಿಳಿಸಿದ್ದಾನೆ.

ಇದನ್ನೂ ಓದಿ: ಪ್ರಿಯತಮೆ ಜತೆಗೆ ಲಾಡ್ಜ್​ನಲ್ಲಿದ್ದ ಪ್ರೇಮಿ ಬೆಳಿಗ್ಗೆಯಾದರೂ ಏಳಲಿಲ್ಲ: ಹಾರಿಹೋಗಿತ್ತು ಪ್ರಾಣಪಕ್ಷಿ, ಕಾರಣ ನಿಗೂಢ..

ಈ ಉತ್ತರವನ್ನು ಕೇಳಿ ತಂದೆ ಗಾಬರಿಯಾಗಿದ್ದು, ಮದುವೆಗೂ ಮುನ್ನವೇ ಆತನ ಮಾತಿಗೆ ಬೆಲೆ ಇಲ್ಲವಾದರೆ ಹೇಗೆ ಎಂದು ಕೇಳಿದ್ದಾರೆ. ಅಲ್ಲದೇ, ಗಡ್ಡ ತೆಗೆದರೆ ಮಾತ್ರ ಮದುವೆ ಎಂದು ಖಡಾಖಂಡಿತವಾಗಿ ಅವರು ಹೇಳಿದಾಗ ವರನು ತನ್ನ ತಂದೆಗೆ ಮನವರಿಕೆ ಮಾಡಲು ಪ್ರಯತ್ನಿಸಿದ್ದಾನೆ. ಆದರೆ, ತಂದೆ ತಮ್ಮ ನಿರ್ಧಾರವನ್ನು ಬದಲಿಸದೇ ಪಟ್ಟು ಹಿಡಿದಿದ್ದಾರೆ ಕೊನೆಗೆ ಮದುವೆ ಕ್ಯಾನ್ಸಲ್ ಆಗಿರುವುದಾಗಿ ಸಂಬಂಧಿಕರಿಗೆ ಹಾಗೂ ವಧುವಿನ ಕಡೆಯವರಿಗೆ ಸಂದೇಶ ರವಾನಿಸಿದ್ದಾರೆ.

ಇದು ವಧುವಿನ ಮನೆಯವರ ಗಮನಕ್ಕೆ ಬಂದಿದ್ದು, ಕೂಡಲೇ ವರನ ಮನೆಗೆ ತೆರಳಿ ಈ ಬಗ್ಗೆ ವಿಚಾರಿಸಿದ್ದಾರೆ. ಆಗ ತಂದೆ ನಡೆದ ಘಟನೆಯ ಬಗ್ಗೆ ತಿಳಿಸಿದ್ದು, ಸಂಬಂಧಿಕರು ಹಾಗೂ ವಧುವಿನ ಕುಟುಂಬಸ್ಥರು ಆತನನ್ನು ಎಷ್ಟೇ ಸಮಾಧಾನ ಪಡಿಸಿದರೂ ಅದು ಸಫಲವಾಗಲಿಲ್ಲ. ಇದರಿಂದಾಗಿ ಸೋಮವಾರ ಬೆಳಿಗ್ಗೆ ನಡೆಯಬೇಕಿದ್ದ ಮದುವೆ ನಿಂತಿದೆ. ಅಲ್ಲದೇ, ಇದೇ ವೇಳೆ ತನ್ನ ಕಂಪನಿಯಲ್ಲಿ ಕೆಲಸಗಾರರು ಗಡ್ಡ ಬಿಟ್ಟರೆ ಒಪ್ಪಿಕೊಳ್ಳುವುದಿಲ್ಲ. ಈ ನಿಯಮವನ್ನು ಮಗ ಪಾಲಿಸದ ಕಾರಣ ಈ ಕಟ್ಟುನಿಟ್ಟಿನ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ತಂದೆ ಹೇಳಿದ್ದು, ಈ ವಿಚಾರ ಇದೀಗ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net