ಲಾಕ್​ಡೌನ್​ ಸ್ಟೈಲ್‌...‌!‌ ಪೊಲೀಸ್ ಜೀಪ್‌ನಲ್ಲಿ ಎಂಟ್ರಿ ಕೊಟ್ಟ- ಮದುಮಗಳನ್ನ ಕರ್ಕೊಂಡು ಹೋದ...

maduve1
Published on

ನವದೆಹಲಿ: ಮದುವೆ ಹೀಗೆಯೇ ಆಗಬೇಕು, ಹಾಗೆಯೇ ಆಗಬೇಕು ಎಂದು ಎಲ್ಲರೂ ಕನಸು ಕಟ್ಟಿಕೊಂಡಿರುತ್ತಾರೆ. ಅದರಲ್ಲಿಯೂ ಇಂದಿನ ಅನೇಕ ಯುವಕ-ಯುವತಿಯರು ಮದುವೆ ಮನೆಗೆ ಡಿಫರೆಂಟ್​ ಆಗಿ ಎಂಟ್ರಿ ಕೊಡಬೇಕೆಂಬ ಲೆಕ್ಕಾಚಾರ ಹಾಕುತ್ತಲಿರುತ್ತಾರೆ.

ಎಲ್ಲವೂ ಚಲನಚಿತ್ರ, ಧಾರಾವಾಹಿಗಳ ಮಹಿಮೆ. ಏಕೆಂದರೆ, ಇವುಗಳಲ್ಲಿ ಮದುವೆಯ ಸೀನ್​ಗಳನ್ನು ಭಾರಿ ವಿಶೇಷವಾಗಿ ತೋರಿಸಲಾಗುತ್ತದೆ. ಅದರಂತೆಯೇ ತಾವೂ ಮದುವೆ ಮನೆಯಲ್ಲಿ ಕಾಣಿಸಿಕೊಳ್ಳಬೇಕು ಎನ್ನುವ ಹಂಬಲ ಇಂದಿನ ಯುವಜನರದ್ದು.

ಅದೇನೇ ಇರಲಿ. ದೆಹಲಿಯಲ್ಲಿ ನಡೆದ ಮದುವೆಯೊಂದರಲ್ಲಿ ಮದುಮಗ ಕೊಟ್ಟ ಎಂಟ್ರಿ ಮಾತ್ರ ಯಾವ ಚಿತ್ರದಲ್ಲಿಯೂ ಕಾಣಲು ಸಿಗುವುದಿಲ್ಲವೇನೋ. ಅದೇನಂತೀರಾ? ಮದುವೆ ಸ್ಥಳಕ್ಕೆ ಮದುಮಗ ಬಂದದ್ದು ಪೊಲೀಸ್​ ಜೀಪ್​ನಲ್ಲಿ!

ಹೌದು. ಹಾಗೆಂದು ಮದುವೆ ನಿಲ್ಲಿಸಲು ಆತ ಬಂದದ್ದಲ್ಲ, ಅಥವಾ ಯಾರ ವಿರುದ್ಧ ದೂರು ದಾಖಲಿಸಲೂ ಪೊಲೀಸರ ಜತೆ ಬಂದಿದ್ದಲ್ಲ. ಇದು ಲಾಕ್​ಡೌನ್​ ಮಹಿಮೆ! ಏಕೆಂದರೆ ನರೇಶ್​ ಅಹಲುವಾಲಾ ವಿವಾಹ ಪೂಜಾಳ ಜತೆ ಏರ್ಪಟ್ಟಿತ್ತು. ಇಂದು ಅವರ ಮದುವೆಗೆ ಮುಹೂರ್ತ ಫಿಕ್ಸ್​ ಆಗಿತ್ತು. ಆರ್ಯ ಸಮಾಜ ಮಂದಿರದಲ್ಲಿ ಅವರ ಮದುವೆ ನಡೆಯಲು ಸಿದ್ಧತೆಯೂ ಭರ್ಜರಿಯಾಗಿಯೇ ನಡೆದಿತ್ತು.

ಆದರೇನು ಮಾಡುವುದು? ಲಾಕ್​ಡೌನ್​ ಘೋಷಣೆ ಆಗಿ ಹೋಯಿತು. ಮದುವೆಯ ಕನಸು ಕಾಣುತ್ತಿದ್ದ ಅನೇಕ ಮದುಮಕ್ಕಳಂತೆ ಪೂಜಾ, ನರೇಶ್​ ಕೂಡ ಬೇಸರಗೊಂಡರು. ಇದು ಶುಭ ಮುಹೂರ್ತ ಆಗಿದ್ದ ಕಾರಣ, ಮದುವೆಯನ್ನು ಮುಂದೂಡಲು ಮನೆಯವರಿಗೂ ಇಷ್ಟವಿರಲಿಲ್ಲ. ಆದರೆ ಲಾಕ್​ಡೌನ್​ ನಿಯಮ ಉಲ್ಲಂಘಿಸಿ ಭರ್ಜರಿ ಮದುವೆಯನ್ನೂ ಮಾಡಿಸುವಂತಿರಲಿಲ್ಲ.

ಸರಿ. ಎರಡೂ ಮನೆಯವರು ಕೂತು ಚರ್ಚಿಸಿದರು. ಇಟ್ಟ ಮುಹೂರ್ತದಲ್ಲಿಯೇ ಮದುವೆ ನೆರವೇರಿಸುವ ತೀರ್ಮಾನಕ್ಕೆ ಬಂದರು. ಆದರೆ ಭರ್ಜರಿ ಮದುವೆ ಸಾಧ್ಯವಿಲ್ಲ ಎಂದು ಸಿಂಪಲ್​ ಆಗಿಯೇ ಮದುವೆಗೆ ಸಿದ್ಧತೆ ನಡೆಸಿದರು. ನಿಗದಿತ ಸ್ಥಳದಲ್ಲಿ ಮೊದಲು ವಧು ಹಾಗೂ ಆಕೆಯ ಅಪ್ಪ ಹೋದರು. ಆದರೆ ವರ ನರೇಶ್​ನ ಮನೆ ದೂರವಿದ್ದುದರಿಂದ ಈ ಸಮಯದಲ್ಲಿ, ಸಾರಿಗೆ ವ್ಯವಸ್ಥೆ ಇಲ್ಲದೇ ಇರುವ ಕಾರಣ, ಆತನ ತಂದೆ ಪೊಲೀಸರಿಗೆ ಮನವಿ ಮಾಡಿದ್ದರು.

ಲಾಕ್​ಡೌನ್​ ನಿಯಮ ಉಲ್ಲಂಘನೆ ಆಗದ ಕಾರಣ, ಪೊಲೀಸರೂ ಮದುವೆಗೆ ನೆರವಾದರು. ಮದುಮಗ ಮತ್ತು ಆತನ ಅಪ್ಪನನ್ನು ಕುಳ್ಳರಿಸಿಕೊಂಡು ಮದುವೆಯ ಸ್ಥಳಕ್ಕೆ ಹೋದರು. ಅದಾಗಲೇ ಅಲ್ಲಿ ವಧು ಮತ್ತು ಮದುವೆ ಮಾಡಿಸುವ ಪುರೋಹಿತರು ಇದ್ದರು. ಹೀಗೆ ಪೊಲೀಸ್​ ಜೀಪಿನಿಂದ ಇಳಿದು ಡಿಫರೆಂಟ್​ ಆಗಿ ತಮ್ಮದೇ ಮದುವೆಗೆ ಎಂಟ್ರಿ ಕೊಟ್ಟ ನರೇಶ್​, ಪೂಜಾ ಜತೆ ಶಾಸ್ತ್ರೋಕ್ತವಾಗಿ ವಿವಾಹವಾದರು. ಮದುವೆಯ ನಂತರವೂ ಪೊಲೀಸರು ಮದುಮಕ್ಕಳನ್ನು ತಮ್ಮದೇ ಗಾಡಿಯಲ್ಲಿ ಬಿಟ್ಟು ಬಂದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net