ಮೊದಲ ರಾತ್ರಿಯಂದು ವಧುವನ್ನು ಏಕಾಂಗಿಯಾಗಿ ಬಿಟ್ಟು ವರ ಎಸ್ಕೇಪ್​! 3 ದಿನಗಳ ಬಳಿಕ ಕಾದಿತ್ತು ಅಚ್ಚರಿ

Bride and Groom
Published on

ಪಟನಾ: ಮೊದಲ ರಾತ್ರಿಯಂದೇ ವಧುವನ್ನು ಒಂಟಿಯಾಗಿ ಬಿಟ್ಟು ವರ ಎಸ್ಕೇಪ್​ ಆದ ವಿಚಿತ್ರ ಘಟನೆ ಬಿಹಾರದ ಮುಜಾಫರ್​ಪುರದಲ್ಲಿ ನಡೆದಿದೆ. ಭಾಗಲ್‌ಪುರಿ ಬ್ಯಾಂಕ್‌ನ ಉದ್ಯೋಗಿ ವಿಶ್ವಜಿತ್‌ ಶಾಹಿ ಅವರ ಪುತ್ರ ಆದಿತ್ಯ ಶಾಹಿ ಮದುವೆಯ ಬಳಿಕ ಮೊದಲ ರಾತ್ರಿಯಂದೇ ಮನೆ ಬಿಟ್ಟು ಹೊಗಿದ್ದಾರೆ.

ಆದಿತ್ಯ ಶಾಹಿ ಫೆಬ್ರವರಿ 4 ರಂದು ವಿವಾಹವಾದರು. ಮದುವೆಯ ನಂತರ ದಂಪತಿ ಮನೆಗೆ ಮರಳಿದರು. ಮೊದಲ ರಾತ್ರಿಗೆ ಎಲ್ಲ ಸಿದ್ಧತೆ ಮಾಡಲಾಗಿತ್ತು. ಆದರೆ, ಅದೇ ದಿನ ರಾತ್ರಿಯಿಂದ ವರ ನಾಪತ್ತೆಯಾಗಿದ್ದಾನೆ. ಸಾಕಷ್ಟು ಹುಡುಕಾಡಿ ಸುಸ್ತಾದ ಬಳಿಕ ಅವರ ಕುಟುಂಬ ಪೊಲೀಸರಿಗೆ ದೂರು ನೀಡಿದೆ. ಆರಂಭದಲ್ಲಿ ಮೊಬೈಲ್ ಫೋನ್​ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿತ್ತು. ಎಲ್ಲಿ ಹೋದನು ಎಂದು ತುಂಬಾ ಚಿಂತೆಯಲ್ಲಿರುವಾಗಲೇ ಮೂರು ದಿನಗಳ ನಂತರ ವರನ ಫೋನ್ ಆನ್ ಆಯಿತು.

ಇದಾದ ಬಳಿಕ ಪೋಲಿಸರು ಆದಿತ್ಯ ಶಾಹಿ ಫೋನ್ ಟ್ರ್ಯಾಕ್ ಮಾಡಿ ಆತನ ಸ್ಥಳವನ್ನು ಪತ್ತೆ ಮಾಡಿದರು. ನಂತರ ಆದಿತ್ಯನನ್ನು ವಶಕ್ಕೆ ಪಡೆಯಲಾಯಿತು. ಮನೆಯಿಂದ ಹೊರಡುವ ವೇಳೆ ಸಮೀಪದ ಎಟಿಎಂನಿಂದ 50,000 ರೂಪಾಯಿ ಡ್ರಾ ಮಾಡಿದ್ದಾನೆ ಎಂದು ವರದಿಯಾಗಿದೆ. ಮೊದಲು ಬಸ್ಸಿನಲ್ಲಿ ಪಟನಾಗೆ ಹೋಗಿ, ನಂತರ ಅಲ್ಲಿಂದ ಡಣಾಪುರಕ್ಕೆ ಹೋದೆ ಎಂದು ಆದಿತ್ಯ ಹೇಳಿದ್ದಾರೆ.

ಒಂದು ರಾತ್ರಿ ಡಣಾಪುರದಲ್ಲೇ ಇದ್ದು ಬೆಳಗ್ಗೆ ಪಟನಾಗೆ ವಾಪಸ್​ ಬಂದೆ ಎಂದು ಆದಿತ್ಯ ಹೇಳಿದ್ದಾನೆ. ಪಟನಾಗೆ ಮರಳಿದಾಗ ಫೋನ್ ಆಫ್ ಆಗಿತ್ತು. ಇಲ್ಲಿಂದ ಬಿಹಾರದ ಅರಾಕ್ಕೆ ಹೋಗುವುದು ವರನ ಯೋಜನೆಯಾಗಿತ್ತು. ಆದರೆ ಫೋನ್ ಸ್ವಿಚ್ ಆನ್ ಮಾಡಿದಾಗ ಪೊಲೀಸರು ಆತನನ್ನು ಹಿಡಿದಿದ್ದಾರೆ. ಆದಿತ್ಯ ಯಾಕೆ ಮನೆ ಬಿಟ್ಟು ಹೋದರು ಎಂಬುದು ಇನ್ನೂ ಬಹಿರಂಗವಾಗಿಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net