ನ್ಯಾಯಬೆಲೆ ಅಂಗಡಿಯಲ್ಲಿ ದಿನಸಿ ಪದಾರ್ಥಗಳೂ ಲಭ್ಯ; ಎಂಆರ್‌ಪಿ ದರದಲ್ಲೇ ಮಾರಾಟ

ration shop
Published on

ಬೆಂಗಳೂರು: ನ್ಯಾಯಬೆಲೆ ಅಂಗಡಿಗಳಲ್ಲಿ ಮುಂದಿನ ತಿಂಗಳಿಂದ ಗರಿಷ್ಠ ಚಿಲ್ಲರೆ ಬೆಲೆ (ಎಂಆರ್‌ಪಿ) ದರದಲ್ಲಿ ಸೋಪು, ರವೆ, ಸಕ್ಕರೆ, ಅಡುಗೆ ಎಣ್ಣೆ ಹಾಗೂ ಉಪ್ಪು ಸೇರಿ ಇನ್ನಿತರ ದಿನಸಿ ಪದಾರ್ಥಗಳು ಸಿಗಲಿವೆ. ಆದರೆ, ಯಾವುದೇ ಕಾರಣಕ್ಕೂ ಮಾಲೀಕರು ದಿನಸಿ ಪದಾರ್ಥಗಳನ್ನು ಖರೀದಿಸುವಂತೆ ಕಾರ್ಡ್‌ದಾರರ ಮೇಲೆ ಒತ್ತಡ ಹಾಕುವಂತಿಲ್ಲ. ಒಂದು ವೇಳೆ ಒತ್ತಡ ಹಾಕಿದರೆ ಮಾಲೀಕರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಬಜೆಟ್ ಮಂಡನೆ ಬಳಿಕ ಪಡಿತರ ಜತೆಗೆ ಎಂಆರ್‌ಪಿ ದರದಲ್ಲಿ ಮೈಸೂರು ಸ್ಯಾಂಡಲ್ ಸೋಪು, ಅಡುಗೆ ಎಣ್ಣೆ ಹಾಗೂ ಉಪ್ಪು ಮಾರಾಟಕ್ಕೆ ಈಗಾಗಲೇ ಸರ್ಕಾರ ಅವಕಾಶ ಕಲ್ಪಿಸಿದೆ. ಹಾಗಾಗಿ, ನಾವೇ ಬಂಡವಾಳ ಹಾಕಿ ದಿನಸಿ ಪದಾರ್ಥಗಳನ್ನು ಖರೀದಿಸಿ ಎಂಆರ್‌ಪಿ ದರದಲ್ಲಿ ಅಂಗಡಿಗಳಲ್ಲಿ ಮಾರಾಟ ಮಾಡಲು ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ರಾಜ್ಯ ಪಡಿತರ ವಿತರಕ ಸಂಘದ ಅಧ್ಯಕ್ಷ ಟಿ.ಕೃಷ್ಣಪ್ಪ ತಿಳಿಸಿದ್ದಾರೆ.

ರಾಜ್ಯದಲ್ಲಿ 19,906 ನ್ಯಾಯಬೆಲೆ ಅಂಗಡಿಗಳಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಆಹಾರ ಧಾನ್ಯಗಳನ್ನು ವಿತರಿಸುತ್ತಿದ್ದೇವೆ. ಸರ್ಕಾರದ ವತಿಯಿಂದ ದಿನಸಿ ಪದಾರ್ಥಗಳ ನೀಡಿದರೆ ಅವುಗಳನ್ನೂ ಸಹ ಮಾರಾಟ ಮಾಡಲಾಗುವುದು. ಆದರೆ, ನಿಗದಿತ ಸಮಯದಲ್ಲಿ ಸರ್ಕಾರ ಕಮಿಷನ್ ಹಣ ನೀಡದಿರುವ ಹಿನ್ನೆಲೆಯಲ್ಲಿ ಮಾರಾಟದಿಂದ ಬಂದಿರುವ ಹಣದಲ್ಲಿ ಕಮಿಷನ್ ಕಡಿತ ಮಾಡಿಕೊಂಡು ಉಳಿದ ಹಣವನ್ನು ಸರ್ಕಾರಕ್ಕೆ ಜಮೆ ಮಾಡಲಾಗುವುದು. ಉಚಿತವಾಗಿ ನೀಡುತ್ತಿರುವ ಅನ್ನಭಾಗ್ಯ ಅಕ್ಕಿಗೆ ಕನಿಷ್ಠ ದರ ನಿಗದಿಗೆ ನಮ್ಮದೇನೂ ಅಭ್ಯಂತರವಿಲ್ಲ ಎಂದು ಕೃಷ್ಣಪ್ಪ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net