

ಬೆಂಗಳೂರು: ಬಿ.ಇಡಿ ಶಿಕ್ಷಣ ಪೂರೈಸಲು ‘ಗೃಹಲಕ್ಷ್ಮಿ ಯೋಜನೆ’ ನೆರವಾಯಿತು ಎಂದು ವಿದ್ಯಾರ್ಥಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ ಸಂತಸ ವ್ಯಕ್ತಪಡಿಸಿದ್ದಾರೆ.
‘‘ಗೃಹಲಕ್ಷ್ಮಿ ಹಣದಿಂದ ಬಿ.ಇಡಿ ನಾಲ್ಕನೇ ಸೆಮಿಸ್ಟರ್ ಪರೀಕ್ಷೆ ಶುಲ್ಕ ಕಟ್ಟಿದೆ. ಕುಟುಂಬ ಸಾಲದ ಸುಳಿಯಲ್ಲಿದೆ. ತಂದೆ ಬಳಿ ಹಣ ಕೇಳೋಕೆ ಆಗದೆ ತಾಯಿ ಉಳಿಸಿಟ್ಟಿದ್ದ ಯೋಜನೆಯ ಹಣ ಸಹಾಯಕ್ಕೆ ಬಂದಿದೆ. ಸಂಕಷ್ಟದ ಸಮಯದಲ್ಲಿ ನನ್ನನ್ನು ಕಾಪಾಡಿದೆ. ಸಿದ್ದರಾಮಯ್ಯ ಅವ್ರಿಗೆ ಎಷ್ಟ್ ಧನ್ಯವಾದ ಹೇಳಿದ್ರು ಸಾಲಲ್ಲ’ ಎನ್ನುವ ಸಂದೇಶವು ಅಪ್ಪು ಎನ್ನುವವರ ಹೆಸರಿನ ಖಾತೆಯಿಂದ ಹಂಚಿಕೆಯಾಗಿದೆ.
ಈ ಸಂದೇಶವನ್ನು ಸಿಎಂ ಸಿದ್ದರಾಮಯ್ಯ ಮರು ಹಂಚಿಕೊಂಡು, ಅದಕ್ಕೆ ತಮ್ಮ ಪ್ರತಿಕ್ರಿಯೆಯನ್ನು ಸೇರಿಸಿದ್ದಾರೆ. ಬಡತನದಲ್ಲೂ ಕಲಿಕೆಯೆಡೆಗಿನ ಈ ಯುವಕನ ಹಂಬಲ ಕಂಡು ನನಗೆ ಖುಷಿಯಾಯಿತು.
ಗೃಹಲಕ್ಷ್ಮಿ ಯೋಜನೆ ನಿಜವಾಗಿ ತಲುಪಬೇಕಿರುವುದು ಮತ್ತು ತಲುಪುತ್ತಿರುವುದು ಇಂತಹ ಜನರನ್ನೆ. ತನಗೆ ಬಂದ ಗೃಹಲಕ್ಷ್ಮಿಯ ಹಣವನ್ನು ಕಡುಬಡತನದಲ್ಲೂ ಕೂಡಿಟ್ಟು ಮಗನ ಶಿಕ್ಷಣಕ್ಕಾಗಿ ಕೊಟ್ಟ ಆ ತಾಯಿಯ ಪ್ರೀತಿ, ಕಾಳಜಿಗೆ ಧನ್ಯವಾದ.
ಬಿ.ಇಡಿ ಶಿಕ್ಷಣ ಮುಗಿಸಿ ಶಿಕ್ಷಕನಾಗಿ ನೂರಾರು ಮಕ್ಕಳ ಬದುಕು ರೂಪಿಸುವಂತಾಗು. ಇಂದು ನೀನು ಧನ್ಯವಾದ ತಿಳಿಸಿದ್ದಕ್ಕಿಂತ ಹೆಚ್ಚು ಖುಷಿ ಅಂದು ನನಗಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಹಾರೈಸಿದ್ದು, ವಿದ್ಯಾರ್ಥಿ ದೆಸೆಯಲ್ಲಿ ತಮ್ಮಿಷ್ಟದ ಕಾನೂನು ವ್ಯಾಸಂಗಕ್ಕಾಗಿ ನಡೆಸಿದ ಹೋರಾಟವನ್ನು ಮೆಲುಕು ಹಾಕಿದ್ದಾರೆ.