

ನವೀನ್ ಬಿಲ್ಗುಣಿ ಶಿವಮೊಗ್ಗ
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿಗಳಲ್ಲಿ ಒಂದಾದ ಗೃಹಜ್ಯೋತಿ ನೋಂದಣಿಗೆ ಮೆಸ್ಕಾಂ ವಿಭಾಗದ ಮಲೆನಾಡು ಶಿವಮೊಗ್ಗ ವೃತ್ತದಲ್ಲಿ ಜನರು ನಿರಾಸಕ್ತಿ ತೋರುತ್ತಿದ್ದಾರೆ. ಯೋಜನೆ ಜಾರಿಗೊಂಡು 15 ದಿನ ಕಳೆದರೂ ಕೇವಲ 35 ಸಾವಿರ ಮಂದಿ ಉಚಿತ ವಿದ್ಯುತ್ ಪಡೆಯಲು ನೋಂದಣಿ ಮಾಡಿಸಿದ್ದಾರೆ.
ಶಿವಮೊಗ್ಗ, ಸಾಗರ, ತೀರ್ಥಹಳ್ಳಿ ಮತ್ತು ಶಿಕಾರಿಪುರ ವಿಭಾಗಗಳನ್ನು ಒಳಗೊಂಡ ಶಿವಮೊಗ್ಗ ವೃತ್ತದಲ್ಲಿ ಪ್ರಸ್ತುತ ಎಲ್‌ಟಿ-1(ಭಾಗ್ಯಜ್ಯೋತಿ) 89,037 ಮತ್ತು ಎಲ್-2(ಗೃಹ) 4,36,621 ಸೇರಿ ಒಟ್ಟಾರೆ 5,25,658 ಸಂಪರ್ಕಗಳು ಚಾಲ್ತಿಯಲ್ಲಿವೆ. ಆದರೆ ಶನಿವಾರ(ಜು.1)ದವರೆಗೆ 1,154 ಎಲ್‌ಟಿ-1, 34,058 ಎಲ್‌ಟಿ-2 ಸೇರಿ ಒಟ್ಟಾರೆ 35,212 ಸಂಪರ್ಕಗಳಿಗೆ ಮಾತ್ರ ನೋಂದಣಿ ಆಗಿದೆ. ಜು.25ಕ್ಕೆ ನೋಂದಣಿಗೆ ಡೆಡ್‌ಲೈನ್ ಆಗಿದ್ದು ಇನ್ನೂ 4.90 ಲಕ್ಷಕ್ಕಿಂತ ಅಧಿಕ ಸಂಪರ್ಕಗಳ ನೋಂದಣಿ ಬಾಕಿ ಉಳಿದಿದೆ.
ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವದಲ್ಲಿ ಘೋಷಿಸಿದಂತೆ ಜೂ.18ರಂದು ಗೃಹಜ್ಯೋತಿ ಯೋಜನೆಯನ್ನು ಜಾರಿಗೊಳಿಸಿದೆ. ಆರಂಭದಲ್ಲಿ ನಾನಾ ವಿಘ್ನಗಳ ನಡುವೆ ಇದೀಗ ಗೃಹಜ್ಯೋತಿ ನೋಂದಣಿ ಸರಾಗವಾಗಿ ನಡೆಯುತ್ತಿದೆ. ಆದರೂ ಶಿವಮೊಗ್ಗ ವೃತ್ತದಲ್ಲಿ ಇನ್ನೂ ಲಕ್ಷಾಂತರ ಜನರು ಗೃಹಜ್ಯೋತಿಯನ್ನು ಗ್ಯಾರಂಟಿ ಮಾಡಿಕೊಳ್ಳಲು ಮೀನಮೇಷ ಎಣಿಸುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.
ಶಿವಮೊಗ್ಗದಲ್ಲಿ ಗರಿಷ್ಠ, ಸಾಗರದಲ್ಲಿ ಕನಿಷ್ಠ: ಶಿವಮೊಗ್ಗ ವಿಭಾಗವು ನಗರ-1, ನಗರ-2, ನಗರ-3, ಶಿವಮೊಗ್ಗ ಆರ್‌ಎಸ್‌ಡಿ, ಕುಂಸಿ, ತೀರ್ಥಹಳ್ಳಿ, ಬೆಜ್ಜವಳ್ಳಿ ಉಪವಿಭಾಗವನ್ನು ಒಳಗೊಂಡಿದ್ದು 2,16,447 ಸಂಪರ್ಕಗಳನ್ನು ಹೊಂದಿದೆ. ಅದರಲ್ಲಿ 21,318 ಸಂಪರ್ಕ ಈಗಾಗಲೇ ನೋಂದಣಿ ಆಗಿದ್ದು ವೃತ್ತದಲ್ಲಿ ಶಿವಮೊಗ್ಗ ಮೊದಲ ಸ್ಥಾನದಲ್ಲಿದೆ. ಸಾಗರ ವಿಭಾಗವು ಸಾಗರ ಸಿಎಸ್‌ಡಿ, ಸಾಗರ ಆರ್‌ಎಸ್‌ಡಿ, ಸೊರಬ, ಹೊಸನಗರ ಮತ್ತು ಜೋಗ ಉಪವಿಭಾಗಗಳನ್ನು ಒಳಗೊಂಡಿದ್ದು 1,22,823 ಸಂಪರ್ಕಗಳನ್ನು ಹೊಂದಿದೆ. ಅದರಲ್ಲಿ 1,931 ಸಂಪರ್ಕಗಳ ನೋಂದಣಿ ಮಾತ್ರ ಇದುವರೆಗೆ ಆಗಿದೆ. ಉಳಿದಂತೆ ಹೊಳೆಹೊನ್ನೂರು ಸೇರಿ ಮೂರು ಉಪವಿಭಾಗ ಹೊಂದಿರುವ ಭದ್ರಾವತಿ ವಿಭಾಗದಲ್ಲಿ 98,619 ಸಂಪರ್ಕ, ಶಿರಾಳಕೊಪ್ಪ, ಆನವಟ್ಟಿ ಸೇರಿ ಮೂರು ಉಪವಿಭಾಗ ಹೊಂದಿರುವ ಶಿಕಾರಿಪುರ ವಿಭಾಗವು 87,769 ಸಂಪರ್ಕಗಳನ್ನು ಹೊಂದಿದ್ದು ಕ್ರಮವಾಗಿ ಭದ್ರಾವತಿಯಲ್ಲಿ 5,825 ಮತ್ತು ಶಿಕಾರಿಪುರದಲ್ಲಿ 6,138 ಸಂಪರ್ಕಗಳ ನೋಂದಣಿ ಪೂರ್ಣಗೊಂಡಿದೆ.
ನಾಲ್ಕು ದಿನದಲ್ಲಿ 17,000 ನೋಂದಣಿ: ಜೂ.18ರಂದು ಯೋಜನೆ ಆರಂಭಗೊಂಡ ಬಳಿಕ ಶಿವಮೊಗ್ಗ ವೃತ್ತದಲ್ಲೂ ನೋಂದಣಿಗೆ ಆರಂಭದಲ್ಲಿ ಜನರು ಮುಗಿಬಿದ್ದರು. ಆನ್‌ಲೈನ್ ನೋಂದಣಿಯಲ್ಲಿ ನಾನಾ ದೋಷಗಳು ಕಾಣಿಸಿಕೊಂಡ ಬಳಿಕ ಜನರು ಆಸಕ್ತಿ ಕಳೆದುಕೊಂಡರು. ಮೊದಲ ಒಂದು ವಾರ ದಿನವಿಡೀ ಶಿವಮೊಗ್ಗ-1, ಗ್ರಾಮ-1 ಕೇಂದ್ರಗಳ ಮುಂದೆ ಜನರು ಕಾಯುವ ಸ್ಥಿತಿ ನಿರ್ಮಾಣವಾಗಿತ್ತು. ಸರ್ವರ್ ಸಮಸ್ಯೆಯಿಂದ ಜನರು ಪರದಾಟ ನಡೆಸುವಂತಾಗಿತ್ತು. ತದನಂತರ ಒಂದು ವಾರದ ಜನರು ನೋಂದಣಿ ಮಾಡುವ ಮನಸ್ಸು ಮಾಡಲಿಲ್ಲ. ಹಾಗಾಗಿ ಜೂ.27ರವರೆಗೆ ಜಿಲ್ಲೆಯ ನಾಲ್ಕೂ ವಿಭಾಗದಿಂದ 17,589 ಮಂದಿ ಮಾತ್ರ ನೋಂದಣಿ ಮಾಡಿಕೊಂಡಿದ್ದು, ಇದೀಗ ಸೇವಾಸಿಂಧು ಪೋರ್ಟಲ್‌ನ್ನು ಮತ್ತಷ್ಟು ಸರಳೀಕರಣ ಮಾಡಿದ್ದು ಕೆಲವರು ಮನೆ, ಕಚೇರಿಗಳಲ್ಲಿ ಕುಳಿತು ಆನ್‌ಲೈನ್ ಮೂಲಕ ನೋಂದಣಿ ಮಾಡಿದ್ದಾರೆ. ಹಾಗಾಗಿ ಕಳೆದ ನಾಲ್ಕು ದಿನದಲ್ಲಿ 17,623 ಮಂದಿ ನೋಂದಣಿ ಮಾಡಿಸಿದ್ದಾರೆ.
ಮುಂದುವರಿದ ಗೊಂದಲ: ಗ್ರಾಮೀಣ ಭಾಗದಲ್ಲಿ ಇನ್ನೂ ಗೃಹಜ್ಯೋತಿ ನೋಂದಣಿ ಬಗ್ಗೆ ಗೊಂದಲಗಳು ಮುಂದುವರಿದಿವೆ. ಕೆಲವೆಡೆ ಮನೆಗಳಲ್ಲಿ ಮಾಲೀಕರೇ ವಾಸವಿದ್ದರೂ ವಿದ್ಯುತ್ ಬಿಲ್‌ನ ಆರ್‌ಆರ್ ನಂಬರ್ ಬದಲಾಗಿಲ್ಲ. ಮೃತಪಟ್ಟಿರುವ ಅಜ್ಜ, ತಂದೆ, ತಾಯಿ, ಸಂಬಂಧಿಗಳ ಹೆಸರಲ್ಲೇ ಆರ್‌ಆರ್ ನಂಬರ್ ಚಾಲ್ತಿಯಲ್ಲಿದೆ. ಹಾಗಾಗಿ ಗೃಹಲಕ್ಷ್ಮೀ ಯೋಜನೆ ವ್ಯಾಪ್ತಿಗೆ ಅವರೆಲ್ಲ ಬರುವುದಿಲ್ಲ ಎಂಬ ಗೊಂದಲಗಳು ಇನ್ನೂ ಇವೆ. ಹಾಗಾಗಿ ಹಲವರು ಗೃಹಜ್ಯೋತಿ ನೋಂದಣಿ ಬಗ್ಗೆ ನಿರ್ಲಕ್ಷೃ ತಾಳುತ್ತಿದ್ದಾರೆ. ಇನ್ನೂ ಕೆಲವೆಡೆ ನೋಂದಣಿ ಉಚಿತವಾಗಿದ್ದರೂ 30 ರೂ. ನಿಂದ 200 ರೂ.ವರೆಗೂ ಸೈಬರ್ ಸೆಂಟರ್‌ಗಳಲ್ಲಿ ಸುಲಿಗೆ ಮಾಡಲಾಗುತ್ತಿದೆ.
ಜು.25 ಕಡೆಯ ದಿನ: ಗೃಹಜ್ಯೋತಿ ನೋಂದಣಿಗೆ ರಾಜ್ಯ ಸರ್ಕಾರ ಜು.25ರ ಗಡುವು ನೀಡಿದೆ. ಅಷ್ಟರೊಳಗೆ ಯಾರೆಲ್ಲ ನೋಂದಣಿ ಮಾಡಿಸಿಕೊಳ್ಳುತ್ತಾರೋ ಅವರಿಗೆ ಆಗಸ್ಟ್‌ನಲ್ಲಿ ಮನೆಗಳ ವಿದ್ಯುತ್ ಶುಲ್ಕ ಬರುವುದಿಲ್ಲ ಎಂದು ಹೇಳಲಾಗುತ್ತಿದೆ. ಇನ್ನೂ 22 ದಿನಗಳು ಮಾತ್ರ ಬಾಕಿ ಉಳಿದಿದ್ದು ಶಿವಮೊಗ್ಗ ವೃತ್ತದಲ್ಲೇ ಬರೋಬ್ಬರಿ 4.90 ಲಕ್ಷಕ್ಕೂ ಅಧಿಕ ಸಂಪರ್ಕಗಳ ನೋಂದಣಿ ಮಾಡುವುದು ಬಾಕಿ ಉಳಿದಿದೆ. ಕೊನೆ ದಿನಗಳಲ್ಲಿ ಎಲ್ಲರೂ ನೋಂದಣಿಗೆ ಮುಂದಾದರೆ ಸರ್ವರ್ ಕೈಕೊಡುವ ಸಾಧ್ಯತೆಯೂ ಇದೆ. ಹಾಗಾಗಿ ಜನರು ಮನೆಯಲ್ಲೇ ಕುಳಿತು (https://sevasindhugs.karnataka.gov.in)ಅಥವಾ ಹತ್ತಿರದ ಗ್ರಾಮ-1, ಶಿವಮೊಗ್ಗ-1 ಕೇಂದ್ರಗಳ ಮೂಲಕ ನೋಂದಣಿ ಮಾಡಿಸಬಹುದು ಎನ್ನುತ್ತಾರೆ ಮೆಸ್ಕಾಂ ಅಧಿಕಾರಿಗಳು.
ಮೆಸ್ಕಾಂನ ಶಿವಮೊಗ್ಗ ವೃತ್ತದ ನಾಲ್ಕು ವಿಭಾಗದಲ್ಲಿ 5.25 ಲಕ್ಷ ಸಂಪರ್ಕಗಳು ಚಾಲ್ತಿಯಲ್ಲಿದ್ದು ಜು.1ರವರೆಗೆ 35 ಸಾವಿರ ಸಂಪರ್ಕಗಳ ನೋಂದಣಿ ಆಗಿದೆ. ಜನರು ಮನೆಯಲ್ಲೇ ಕುಳಿತು ಆನ್‌ಲೈನ್ ಮೂಲಕ ಯಾವುದೇ ಶುಲ್ಕವಿಲ್ಲದೆ ನೋಂದಣಿ ಮಾಡಲು ಅವಕಾಶವಿದೆ. ಕಳೆದ ನಾಲ್ಕೈದು ದಿನಗಳಿಂದ ನೋಂದಣಿಯಲ್ಲಿ ಪ್ರಗತಿ ಕಂಡುಬರುತ್ತಿದೆ.ಎಸ್.ಜಿ.ಶಶಿಧರ್, ಮೆಸ್ಕಾಂ ಶಿವಮೊಗ್ಗ ವಿಭಾಗದ ಅಧೀಕ್ಷಕ ಇಂಜಿನಿಯರ್
ವಿಭಾಗ ಚಾಲ್ತಿಯಲ್ಲಿರುವ ಸಂಪರ್ಕ ನೋಂದಾಯಿಸಲ್ಪಟ್ಟ ಸಂಪರ್ಕ(ಜು.1ರವರೆಗೆ)
ವಿಭಾಗ-ಎಲ್‌ಟಿ 1- ಎಲ್‌ಟಿ 2-ಎಲ್‌ಟಿ 1-ಎಲ್‌ಟಿ 2-ಒಟ್ಟು
ಶಿವಮೊಗ್ಗ-18157-1,98,290-88 21-230-21,318
ಭದ್ರಾವತಿ-11868-86,751-154-5,671-5,825
ಸಾಗರ-22083 1,00,740-91-1,840-1,931
ಶಿಕಾರಿಪುರ-36929-50,840-821-5,317-6,138