ಗ್ರೀನಿಚ್ ಜಗತ್ತಿಗೇ ಸಮಯ ತಿಳಿಸುವ ಸವಿರಳರೇಖೆ

dd
Published on
ಅಪ್ಪಟ ಸಮುದ್ರದ ಮಾದರಿಯಲ್ಲಿ ತೆರೆಗಳನ್ನು ಎದ್ದೇಳಿಸುವ ಥೇಮ್ಸ್, ಅಳ ಮತ್ತು ಅಗಲದಲ್ಲಿ ಸಾಗರವೇ ಎನ್ನಬಹುದಾದ ಆದರೆ ಸಾರಭರಿತ, ಪೂರ್ತಿ ಲಂಡನ್​ಗೆ ನೀರುಣಿಸುವ ಜೀವನದಿ. ಅದರ ಎರಡೂ ದಂಡೆಯಲ್ಲಿ ಬ್ರಿಟಿಷರು, ಎರಡನೇ ಶತಮಾನದಿಂದಲೇ ಇಂಗ್ಲೆಂಡು ಕಟ್ಟಿ ನಿಲ್ಲಿಸಿದ್ದು ತಮಾಶೆಯಲ್ಲ. ಅಂಥದ್ದೊಂದು ಶಿಸ್ತಿನ ಕಾರಣಕ್ಕೇನೇ ಬ್ರಿಟಿಷರು ದೊಡ್ಡ ಮಟ್ಟದಲ್ಲಿ, ‘ಸೂರ್ಯ ಮುಳುಗದ ಸಾಮ್ರಾಜ್ಯ’ ನಿರ್ಮಾಣ ಮಾಡಿಕೊಂಡು ಜಗತ್ತು ಆಳಿದರು ಎನ್ನುವುದು ಸುಳ್ಳಲ್ಲ. ಹಾಗೆ ಒಂದಲ್ಲ ಒಂದು ಕಡೆಯಲ್ಲಿ ಸೂರ್ಯ ಉದಯಿಸುತ್ತಲೇ ಇರುವ ಸಾಮ್ರಾಜ್ಯ ನಿರ್ವಿುಸಿಕೊಂಡರಲ್ಲ, ಎಲ್ಲೆಡೆಗಿನ ಸಂಪರ್ಕ, ಸಮಯ ಮತ್ತು ಮಾಹಿತಿಯ ವಿವರಗಳನ್ನು ದಾಖಲಿಸುವುದೇ ಕಷ್ಟವಾಗತೊಡಗಿತ್ತು ಬ್ರಿಟಿಷರಿಗೆ. ಯಾವಾಗ, ಯಾವ ಸಮಯದಲ್ಲಿ, ಎಲ್ಲಿ, ಏನಾಗುತ್ತಿದೆ ಎಂದು ದಾಖಲಿಸುವುದೇ ದೊಡ್ಡ ಸಮಸ್ಯೆಯಾಗತೊಡಗಿತ್ತು. ಕಾರಣ ಒಂದು ದೇಶದ ಸಮಯ ಮತ್ತೊಂದೆಡೆಗೆ ಲೆಕ್ಕಕ್ಕೇ ಸಿಗುತ್ತಿರಲಿಲ್ಲ. ಅದರಲ್ಲೂ ಸಮಯಧಾರಿತ ಕೇಂದ್ರೀಕೃತ ಆಡಳಿತ ವ್ಯವಸ್ಥೆ ಬೇಕೆಂದರೆ ತಮ್ಮದೇ ಆದ ಸಮಯದ ವ್ಯವಸ್ಥೆಯೂ ಬೇಕು. ಹಾಗಾಗಬೇಕೆಂದರೆ ಒಂದು ಜಾಗತಿಕ ಗಡಿಯಾರ ಬೇಕು. ಆಗ ಹುಟ್ಟಿದ್ದೇ ‘ಲಂಡನ್ ರಾಯಲ್ ಆಬ್ಸರ್​ವೇಟರಿ’ (1675 ಎರಡನೇ ಕಿಂಗ್ ಚಾರ್ಲ್ಸ್ ಅವಧಿ)

ಗ್ರೀನಿಚ್ ಜೆಟ್ಟಿಯಿಂದ ಒಂದೆರಡು ಕಿ.ಮೀ. ಅಂತರದ ಕಾಲ್ದಾರಿ ಮೇಲೆ ನಡೆದರೆ ತುಂಬ ಚೆಂದದ ಹೋಟೆಲ್ ಸಾಲುಗಳು, ಎರಡೂ ಕಡೆ ಎತ್ತರೆತ್ತರ ಗ್ರೀಕ್ ಮತ್ತು ರೋಮನ್ ವಾಸ್ತುಶಿಲ್ಪದ, ಚೌಕಾಕಾರದ ಕಲ್ಲುಹಾಸಿನ ರಸ್ತೆಯ ಮೇಲೆ ತೀರಾ ಗೆರೆ ಕೊರೆದಂತಹ ಯೋಜಿತ ಕಟ್ಟಡಗಳ ಸಾಲುಗಳ ನೋಡುತ್ತ ನಡೆಯುತ್ತಿದ್ದರೆ, ಪ್ರತಿ ತಿರುವೂ ಸೆಲ್ಪಿ ಪಾಯಿಂಟುಗಳೇ. ಸಾಲುಸಾಲು ಬಿಯರ್, ಕಾಫಿ ಬಾರ್​ಗಳ ಆಕರ್ಷಣೆಯಿಂದ ತಪ್ಪಿಸಿಕೊಳ್ಳುವುದು ಕಷ್ಟ. ಈ ರಸ್ತೆಗೂ ಕಾಲಿಡುವ ಮೊದಲು ಜೆಟ್ಟಿಯ ಮುಂಭಾಗದಲ್ಲೇ ಹಳೆಯದಾದ ದೊಡ್ಡ ಹಡಗೊಂದನ್ನು ಓಪನ್ ಮ್ಯೂಸಿಯಂ ಮಾಡಿ ಇರಿಸಿದ್ದು, ಅದೊಂದು ಈ ಪ್ರವಾಸದಲ್ಲಿ ಬೋನಸ್ ಆಗಿ ಸಿಗುತ್ತದೆ. ಅದರ ಆಧಾರಕ್ಕೆ ನಿಲ್ಲಿಸಿದ ಕಂಭಗಳೇ ಅನಾಮತ್ತು ಹನ್ನೆರಡಡಿಗೂ ಮಿಗಿಲು. ಅಂದರೆ ಹಡಗಿನ ದೈತ್ಯಾಕಾರದ ಊಹೆ ನಿಮಗೆ ಬಿಟ್ಟಿದ್ದು.

ಇಲ್ಲಿ ಎಲ್ಲೇ ಕಾಲಿಟ್ಟರೂ ಕಿ.ಮೀ. ಉದ್ದದ ಉದ್ಯಾನಗಳು ಇರುವುದರಿಂದ ನಡಿಗೆ ಎನ್ನುವುದೂ ಸಹಜವೇ. ಎದುರುಗಡೆ ವಿಕ್ಟೋರಿಯಾ ಮ್ಯೂಸಿಯಂ ಇದ್ದು ಸಮಯ ಇದ್ದರೆ ಆರ್ನರು ಚಿಲ್ರೆ ತೆತ್ತು ಹೋಗಬಹುದು. ಅದರ ಬಾಲ್ಕನಿಗೆ ಮುಖ ಮಾಡಿ ಎದುರಿನ ದಿಬ್ಬದ ಮೇಲೆ ಸ್ಥಾಪಿಸಲಾಗಿದೆ ಮಹತ್ವಾಕಾಂಕ್ಷೆಯ ‘ದಿ ಲಂಡನ್ ರಾಯಲ್ ಅಬ್ಸರ್ವೆಟರಿ’. ಅದರ ಎದುರಿಗಿನ ಆವಾರದ ಗೋಡೆಯಲ್ಲೇ ಮೂರು ಶತಮಾನಗಳ ಹಳೆಯ ದೊಡ್ಡ ಗಡಿಯಾರದಲ್ಲಿ ಸಮಯ ನಿಗದಿ ಪಡಿಸಿದ್ದು, ಅದರೆದುರಿಗೆ ಸೆಲ್ಪಿಗಳ ಕ್ಲಿಕ್ಕ್ಲಿಕ್ ಸುಗ್ಗಿ.

ಪಕ್ಕದ ಸರಳುಗಳ ಬಾರ್​ನಿಂದ ನೆಲದ ಮೇಲೆ ಅತ್ಯಂತ ಕರಾರುವಾಕ್ ಸಮಯ ನಿಗದಿಪಡಿಸುವ ಮಾರ್ಕಿಂಗ್ ಇರುವ ಸ್ಥಳ ಮತ್ತು ಅರ್ಧ ಲಂಡನ್ ಕಾಣಿಸುವ ವ್ಯೂ ಪಾಯಿಂಟ್ ಆಚೆಗೆ ಇದೆ. ಇದಿಷ್ಟೂ ಯಾವುದೇ ಶುಲ್ಕವಿಲ್ಲದೆ ನೋಡಲು ಲಭ್ಯವಿದ್ದು ನಿಜವಾದ ದರ್ಶನಕ್ಕಾಗಿ ಹತ್ತು ಪೌಂಡ್ ನೀಡಿ ಒಳಭಾಗಕ್ಕೆ ಪ್ರವೇಶಿಸಿದರೆ, ನಿಜಕ್ಕೂ ಇದನ್ನು ನಿರ್ವಹಿಸಿದ, ಪ್ರಯೋಗಕ್ಕೆ ಕೈ ಹಾಕಿದ ಪುಣ್ಯಾತ್ಮನ ಬಗ್ಗೆ ಹುಬ್ಬೇರುತ್ತದೆ.

ಕರಾರುವಾಕ್ಕಾಗಿ ದಿಬ್ಬದ ಮೇಲೆ ಹತ್ತಾರು ಮೀಟರ್ ಉದ್ದದ ಲೆನ್ಸ್ ಗಾರ್ಡ್ ಕೂರಿಸಿ, ಅದರ ಫೋಕಸಿಂಗ್ ಪಾಯಿಂಟ್ ಸೆಟ್ ಮಾಡುತ್ತ, ಬೆಳಕಿನ ಪ್ರತಿಫಲನದ ಮೂಲಕ ಸಮಯ ನಿಗದಿ ಪಡಿಸಲು, ದೈತ್ಯಾಕಾರದ ಆಗಿನ ವ್ಹೀಲ್ ಮತ್ತು ಗೇರ್​ನ್ನು ಚೈನ್ ಮೂಲಕ ಎಳೆದು ಬಿಗಿಯುವ ಪದ್ಧತಿಯ ತಂತ್ರಗಾರಿಕೆಯ ಕೋಣೆ, ಉದ್ದಾನು ಉದ್ದದ ಬೈನಾಕ್ಯೂಲರ್ ಎಲ್ಲ ಅದರಲ್ಲಿದೆ. ಅದನ್ನೆಲ್ಲ ಸರಿಯಾಗಿ ನಿರ್ವಹಣೆಗೆ ಒಳಪಡಿಸಿ ಈಗಲೂ ಅದೇ ಪುರಾತನ ತಂತ್ರಜ್ಞಾನ ಕಾರ್ಯ ನಿರ್ವಹಿಸುವಂತೆ ಮಾಡಿರಿಸಿದ್ದಾರೆ.

ಅನಾಮತ್ತು ಸಾವಿರ ರೂ.ಗಳ ಪ್ರವೇಶಧನ. ಭಾರತದ ದರಕ್ಕೆ ಪದೇಪದೆ ಪೌಂಡ್​ನ್ನು ಎಣಿಸುತ್ತ ಕೂತರೆ ನಾವು ಏನನ್ನೂ ನೋಡಲಾರೆವು. ಹಾಗಾಗಿ ಭಾರತದ ಲೆಕ್ಕದಲ್ಲಿ ಅದು ಸಾವಿರ ರೂ. ಆದರೂ ಗ್ರೀನ್​ವಿಚ್ ಕೇಂದ್ರದಲ್ಲಿ ಒಳಗೆ ಹೋದರೆ ದುಡ್ಡಿಗೆ ಮೋಸವಿಲ್ಲ ಎನಿಸುವುದು ಪಕ್ಕಾ.

The historic source of the Prime Meridian of the world, Longitude 0°-0'0' ಹೀಗೆಂದು ಬರೆದಿರುವ ಸಾಲಿನ, ಮುಂದಿನ ದೂರದರ್ಶಕದ ಮೂಲಕ ಬೆಳಕಿನ ಪುಂಜದ ಆಧಾರದ ಮೇಲೆ ಸಮಯ ನಿಗದಿ ಪಡಿಸುವ ಮುಖ್ಯ ರೇಖೆ ಇದೆಯಲ್ಲ, ಅದರ ಮೇಲೆ ಎರಡೂ ಕಡೆಯಲ್ಲಿ ಆಗಿನ ಕಾಲದ ಮಾದರಿಯಲ್ಲಿ ಆಯಾ ದೇಶಗಳ ಹೆಸರನ್ನು ಎನ್​ಗ್ರೇವಿಂಗ್ ಮಾಡಿದ್ದಾರೆ ಕಬ್ಬಿಣದ ಪಟ್ಟಿಯ ಮೇಲೆ. ಸಿಂಪಲ್ ಲೆಕ್ಕಾಚಾರ. ಎಡಕ್ಕಿರುವಂಥವು ಪೂರ್ವ ದೇಶಗಳು. ಬಲಕ್ಕೆ ಇರುವಂಥವು ಪಶ್ಚಿಮ ದೇಶಗಳು.

ನಾನು ಭಾರತದ ಹೆಸರು ಹುಡುಕಲು ತವಕಿಸುತ್ತಿದ್ದರೆ ರಂಗೂನ್, ಬ್ಯಾಂಕಾಕ್ ಕಾಣುತ್ತಿದೆ. ಅದರ ಆಸುಪಾಸಿನಲ್ಲೇ ಭಾರತ ಇರಬೇಕಲ್ಲವಾ? ಉಹೂಂ.. ಆದರೆ ಇದ್ದುದು ಮುಂಬೈ. ಅರೇ ಇದೇನು ಎಂದುಕೊಂಡರೆ ಅದರ ಕಾಲಾವಧಿ ಮೂರು ಶತಮಾನದ ಹಿಂದಕ್ಕೆ ಹೋಗುತ್ತದೆ. ಕಾರಣ ಬ್ರಿಟಿಷರು ಸಮಯವನ್ನು ಜಾಗತಿಕವಾಗಿ ನಿಗದಿಪಡಿಸಿದರಲ್ಲ, ಆಗ ವಿಶ್ವ ಪರ್ಯಟನೆ ಮಾಡಿಕೊಂಡು ಹುಡುಕಿದಾಗ, ಮೊದಲಿಗೆ ಅವರು ಮುಟ್ಟಿದ್ದೇ ಮುಂಬೈ ನಗರಿಯನ್ನು. ಹೆಚ್ಚಿನ ಅವರ ರಾಜಕೀಯ, ವ್ಯಾಪಾರ ವ್ಯವಹಾರವೆಲ್ಲ ಆರಂಭವಾಗಿದ್ದೆ ಮುಂಬೈ ಮೂಲಕ. ಜೊತೆಗೆ ಬ್ರಿಟಿಷರಿಗೆ ಅಸಲಿನ ಭಾರತದ ಭೂಭಾಗ ಹೇಗಿತ್ತು, ಎಷ್ಟಿತ್ತು ಎಂಬುವುದೇ ಗೊತ್ತಿರಲಿಲ್ಲ. ಹಾಗಾಗಿ ಮುಂಬೈ ಎಂದೇ ಆ ಕಬ್ಬಿಣದ ಪಟ್ಟಿಯ ಮೇಲೆ ದಾಖಲಿಸಿ ಅದರ ಪಕ್ಕದಲ್ಲಿ +530 ಎಂದು ಹಾಕಿದ್ದಾರೆ. ಅದು ಕರಾರುವಾಕ್ಕ ಲೆಕ್ಕಾಚಾರ. ಇದನ್ನೇ ಈಗಲೂ ಗ್ರೀನ್​ವ್ಹಿಚ್ ಮೀನ್ ಟೈಮ್ ಎನ್ನುತ್ತಾರೆ (ಎಛಿಛ್ಞಿಡಿಜ್ಚಿಜ ಞಛಿಚ್ಞ ಠಿಜಿಞಛಿ ಎMಖ).

ಒಂದು ಗೊತ್ತಿರಲಿ, ಆಗಿನ ಕಾಲಕ್ಕೆ ಕೇವಲ ನಾಲ್ಕು ಸಾವಿರ ಚಿಲ್ಲರೆ ಬ್ರಿಟಿಷರು ಭಾರತದ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗಿತ್ತು ಎಂದರೆ ನಮ್ಮಲ್ಲಿ ಅದ್ಯಾವ ರೇಂಜಿಗೆ ಒಡಕು ಇರಬೇಕು. ಅಕಸ್ಮಾತ್ ಕೇವಲ ಮುಂಬೈ ಆಸುಪಾಸಿನ ಜನರಷ್ಟೇ ತಿರುಗಿ ಬಿದ್ದಿದ್ದರೂ ಅವರನ್ನು ನೆಲಕ್ಕೇ ಕಾಲಿಡದಂತೆ ಮಾಡುವುದು ದೊಡ್ಡ ವಿಷಯವೇ ಆಗಿರಲಿಲ್ಲ. ಆಗಿನ ಸಂಪೂರ್ಣ ಭಾರತ ಆಳಲು ಅವರು ಬಂದ ಒಟ್ಟೂ ಜನಸಂಖ್ಯೆ ಸರಿಯಾಗಿ ಏಳು ಸಾವಿರ ದಾಟಿರಲಿಲ್ಲ. ಮೂರು ಶತಮಾನದ ಹಿರಿತನಕ್ಕೆ ಕೆಲವೇ ಕೆಲವು ಸಾವಿರ ಜನರ ಮೂಲಕ ನಿಯಂತ್ರಣ ಸಾಧಿಸಿದರಲ್ಲ, ನಮ್ಮಲ್ಲಿ ಲಕ್ಷದ ಲೆಕ್ಕದಲ್ಲಿ ಜನಸಂಖ್ಯೆ ಇದ್ದೂ ನಾವೆಲ್ಲ ಶರಣಾಗಿದ್ದು ಕಾರಣ ಅವರ ಆಳ್ವಿಕೆಗೆ. ಅವರ ಶಿಸ್ತು ಮತ್ತು ಜೀವನಶೈಲಿ ನೋಡಿದರೆ ಈಗಲೂ ನಮಗಿಂತಲೂ ಐವತ್ತು ವರ್ಷ ಮುಂದಿದ್ದಾರೆ ಎನ್ನದೇ ವಿಧಿ ಇಲ್ಲ. ನಿಜಕ್ಕೂ ಆಳಲೇ ಹುಟ್ಟಿದ ವಂಶಜರು ಬ್ರಿಟಿಷರು ಎನ್ನಿಸುತ್ತಾರೆ ಈಗಲೂ.

ಹಾಗೆ ಆಗಿನ ಲೆಕ್ಕದಲ್ಲಿ ಭಾರತ ಎನ್ನುವುದು ಅವರ ಪಾಲಿಗೆ ಮುಂಬೈ ಆಗಿದ್ದರಿಂದ, ಅಲ್ಲಿನ ಮಾಪನದ ಮಾರ್ಕ್​ನಲ್ಲಿ ಬಾಂಬೆ ಎಂದಿದೆಯೇ ಹೊರತಾಗಿ ಭಾರತ ಎನ್ನುವ ಪ್ರಸ್ತಾಪವೇ ಇಲ್ಲ. ಅದರ ಆಚೀಚೆಗೆ ಸಿಂಹಳ ಇತ್ಯಾದಿ ಭಾಗಗಳ ಮಾರ್ಕನ್ನು ಕೆತ್ತಲಾಗಿದೆ. ಅದರ ಮೂಲಕವೇ ಭಾರತ ಸೇರಿದಂತೆ ಜಗತ್ತಿನ ಎಲ್ಲ ಸಮಯಗಳ ನಿಗದಿ ಮತ್ತು ಚಾಲನೆ ಎರಡೂ ಆಗಿದೆ. ಮೂಲತಃ ಜಗತ್ತಿಗೇ ಗಣಿತ ಕಲಿಸಿದ್ದು ಭಾರತವೇ ಆದರೂ ಅದನ್ನು ಕಾಯ್ದುಕೊಳ್ಳುವಲ್ಲಿ ಮತ್ತು ನಮ್ಮನ್ನು ನಾವು ಪ್ರಸೆಂಟ್ ಮಾಡಿಕೊಳ್ಳದಿರುವ ವಿಫಲತೆಯ ಕಾರಣ ಇಂಥ ಹಲವು ಜಾಗತಿಕ ಪ್ರಸಿದ್ಧಿಯಾಗಬೇಕಾದ ಪ್ರಥಮಗಳು ವಿದೇಶದ ಪಾಲಾಗಿವೆ ಎಂದರೆ ತಪ್ಪಿಲ್ಲ.

ಗ್ರೀನಿಚ್​ನಿಂದ ಎದುರಿನ ಅರಮನೆ ಮತ್ತು ಇತ್ತಲಿನ ಲಂಡನ್​ವ್ಯೂ ಕೂಡ ಅದ್ಭುತವಾಗಿ ಗೋಚರಿಸುತ್ತದೆ. ಸುತ್ತ ಹಸಿರು ಮತ್ತು ಬಣ್ಣ ಬಣ್ಣದ ಮರಗಿಡಗಳ ದೊಡ್ಡದಾದ ಅವರಣದ ಮೂಲಕ ರಾಯಲ್ ಅಬ್ಸರ್​ವೆಟರೀ ಜಗತ್ತಿನ ಪ್ರಮುಖ ಪ್ರವಾಸಿತಾಣಗಳಲ್ಲಿ ಸ್ಥಾನ ಪಡೆದಿದೆ. ಘಚಠಿಜಿಟ್ಞಚ್ಝ Mಚ್ಟಜಿಠಿಜಿಞಛಿ Mಠಛ್ಠಿಞ ಇದರಲ್ಲಿ ಕಾಲಕಾಲಕ್ಕೆ ಗಡಿಯಾರದ ವಿವಿಧ ಹಂತದ ಬದಲಾವಣೆ ಮತ್ತು ತಂತ್ರಜ್ಞಾನವನ್ನು ವಿವರಿಸುವ ಮತ್ತು ಈಗಲೂ ಕಾರ್ಯ ನಿರ್ವಹಿಸುವ ರೀತಿಯಲ್ಲಿ ಹಳೆಯ ವಿವಿಧ ಅಳತೆಯ ಭಿನ್ನವಾದ ಗಡಿಯಾರದ ಸೆಟ್​ಗಳು ಲಭ್ಯ ಇವೆ. ಅತ್ಯಂತ ಪುರಾತನ ಗಡಿಯಾರ ಎಂಬ ಹೆಗ್ಗಳಿಕೆಯ ದೊಡ್ಡ ಗೋಲಕ ಕೂಡ ಹೇಗೆ ನಡೆಯುತ್ತದೆ ಎನ್ನುವ ಪ್ರಾತ್ಯಕ್ಷಿಕತೆ ಜಾರಿ ಇರುತ್ತದೆ.

ಅಲ್ಲಿಂದ ಮತ್ತೆ ಆರ್ಸrಗೆ ಹಿಂದಿರುಗಲು ಬಸ್ ಮಾರ್ಗ ಸುಲಭ ಎಂದು ಸಿಟಿ ಮ್ಯಾಪರ್ ತೋರಿಸುತ್ತಿತ್ತು. ಅದರ ಪ್ರಕಾರ 231 ಸಂಖ್ಯೆ ಬಸ್ ಅದೇ ಹತ್ತಿರದ ಬಸ್​ಸ್ಟಾಪ್ ಪಕ್ಕದ ರಸ್ತೆಗೆ ಇಳಿಸುವುದಾಗಿ ತೋರಿಸಿತು. ಹತ್ತಿ ಕೂತೆವು. ಅರ್ಧಗಂಟೆಯಲ್ಲಿ ರಿಜೆಂಟ್ ಸ್ಟ್ರೀಟ್ ಮತ್ತು ಸೆಂಟ್ರಲ್ ಲಂಡನ್ ಮೂಲಕ ಹಾಯ್ದು ರಾತ್ರಿ ನಗರ ದರ್ಶನ ಮಾಡಿಸಿದ ಬಸ್ ನಮ್ಮನ್ನು ಹಾನ್​ಸ್ಲೋ ಪ್ರದೇಶಕ್ಕೆ ಇಳಿಸಿದಾಗ ಅಲ್ಲಿನ ಲೆಕ್ಕಕ್ಕೆ ಒಂಭತ್ತು ಎಂದರೆ ಅಪರಾತ್ರಿ. ನನ್ನ ಕಣ್ಣ ಮುಂದೆ ಅದೇ ಚೈನ್ ಪುಲ್ಲಿ ಹಾಕಿದ್ದ ದೊಡ್ಡ ಚಕ್ರಗಳ ಗಡಿಯಾರ ಮತ್ತು ಅದರ ಹಲವು ಬಗೆಯ ಲಾಕ್​ಗಳೇ ಇನ್ನೂ ತಿರುಗುತ್ತಿದ್ದವು. ಅಂದ ಹಾಗೆ ಲಂಡನ್​ನಲ್ಲಿ ಹಳ್ಳಿಗಳಿಲ್ಲ! ಅದಿನ್ನು ಮುಂದಿನ ಅಂಕಣದಲ್ಲಿ.

(ಲೇಖಕರು ಕತೆ, ಕಾದಂಬರಿಕಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net