

Greater Noida Dog News: ರಾಷ್ಟ್ರ ರಾಜಧಾನಿ ದೆಹಲಿಯ ಪಕ್ಕದಲ್ಲಿರುವ ಗ್ರೇಟರ್ ನೋಯ್ಡಾದಲ್ಲಿ ಶ್ವಾನವನ್ನ ಲಿಫ್ಟ್ನಲ್ಲಿ ಕರೆದುಕೊಂಡು ಹೋಗುವ ವಿಚಾರವಾಗಿ ಗಲಾಟೆ ನಡೆದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನೋಯ್ಡಾದ ಗೋರ್ಸಿಟಿ 7 ನೇ ಅವೆನ್ಯೂ ಅಪಾರ್ಟ್ಮೆಂಟ್ನಲ್ಲಿ ಘಟನೆ ನಡೆದಿದ್ದು, ವ್ಯಕ್ತಿ ಅಪಾರ್ಟ್ಮೆಂಟ್ನ ಲಿಫ್ಟ್ ಒಳಗೆ ತನ್ನ ಶ್ವಾನವನ್ನ ಕೆರೆದೊಯ್ದಿದ್ದಾನೆ. ಈ ಸಂದರ್ಭ ಲಿಫ್ಟ್ನೊಳಗಿದ್ದ ಮಗುವೊಂದು ಜೋರಾಗಿ ಅಳಲು ಪ್ರಾರಂಭಿಸಿದೆ. ತಕ್ಷಣವೇ ವ್ಯಕ್ತಿ ಮಗುವನ್ನ ಲಿಫ್ಟ್ನಿಂದ ಹೊರ ಕರೆದುಕೊಂಡು ಹೋಗುವಂತೆ ಮಗುವಿನ ತಾಯಿಗೆ ಹೇಳಿದ್ದಾನೆ.
ಲಿಫ್ಟ್‌ನಲ್ಲಿದ್ದ ಮಗು ಹೆದರಿ ಅಳಲು ಪ್ರಾರಂಭಿಸಿದರೂ ಕೂಡಾ ಅದಕ್ಕೆ ಕ್ಯಾರೇ ಅನ್ನದ ಶ್ವಾನದ ಮಾಲೀಕ ಮಗುವನ್ನೇ ಲಿಫ್ಟ್ನಿಂದ ಹೊರ ಹೋಗಲು ಹೇಳಿದ್ದಾನೆ. ಇದರಿಂದ ಕೋಪಗೊಂಡ ತಾಯಿ ಶ್ವಾನದ ಮಾಲೀಕನನ್ನ ತರಾಟೆಗೆ ತೆಗೆದುಕೊಂಡಿದ್ದಾಳೆ.
ಮಹಿಳೆ ಮತ್ತು ನಾಯಿ ಮಾಲೀಕರ ನಡುವೆ ವಾಗ್ವಾದ
ಇನ್ನು ಲಿಫ್ಟ್ ಬಳಿಯೇ ಇದ್ದ ಸಿಬ್ಬಂದಿಯೂ ಶ್ವಾನವನ್ನು ಲಿಫ್ಟ್ನಲ್ಲಿ ಕೊಂಡೊಯ್ಯ ಬೇಡಿ ಎಂದು ಮನವಿ ಮಾಡಿದ್ದಾನೆ. ಇದಕ್ಕೆ ಕ್ಯಾರೇ ಅನ್ನದ ಮಾಲೀಕ ಲಿಫ್ಟ್ನಲ್ಲಿಯೇ ನನ್ನ ಶ್ವಾನ ತೆರಳೋದು. ನಾನು ಸುರಕ್ಷತಾ ಕ್ರಮಗಳನ್ನ ವಹಿಸಿ ಅದಕ್ಕೆ ಬಾಯಿ ಕಟ್ಟನ್ನ ಕೂಡಾ ಹಾಕಲಾಗಿದೆ. ಬೇಕಿದ್ದರೆ ಈ ಮಹಿಳೆಯೇ ಮೆಟ್ಟಿಲುಗಳನ್ನ ಹತ್ತಿಕೊಂಡು ಹೋಗಲಿ ಎಂದಿದ್ದಾನೆ. ನಂತರದಲ್ಲಿ ಇಬ್ಬರ ನಡುವಿನ ವಗ್ವಾದ ತಾರಕಕ್ಕೇರಿದ್ದು, ಮಹಿಳೆ ವಿಡಿಯೋ ಮಾಡಲು ಪ್ರಾರಂಭಿಸಿದ್ದಾಳೆ. ವಿಡಿಯೋ ವೈರಲ್ ಮಾಡುವುದಾಗಿ ಯುವತಿ ಯುವಕನಿಗೆ ಬೆದರಿಕೆ ಹಾಕಿದಾಗ ಆತ ಅಲ್ಲಿಂದ ಹೊರಟು ಹೋಗಿದ್ದಾನೆ.