

ಬೆಂಗಳೂರು: “ಬೆಂಗಳೂರಿಗೆ ಆರ್ಥಿಕ ಶಕ್ತಿ ಹಾಗೂ ಆಡಳಿತದಲ್ಲಿ ಹೊಸ ರೂಪ ನೀಡುವ ಉದ್ದೇಶದಿಂದ ರೂಪಿಸಲಾಗಿರುವ ಗ್ರೇಟರ್ ಬೆಂಗಳೂರು ವಿಧೇಯಕವನ್ನು ಪರಾಮರ್ಶಿಸಲು ಸದನ ಸಮಿತಿ ರಚನೆಗೆ ನಮ್ಮ ಒಪ್ಪಿಗೆ ಇದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಇದನ್ನೂ ಓದಿ: ನಟ ದರ್ಶನ್ ಭೇಟಿ ಮಾಡಿದ ಬಳಿಕ ಸಾಧುಕೋಕಿಲ ಹೇಳಿದ್ದೇನು?
ವಿಧಾನಸಭೆಯಲ್ಲಿ ಗ್ರೇಟರ್ ಬೆಂಗಳೂರು ವಿಧೇಯಕವನ್ನು ಪರ್ಯಾಲೋಚನೆ ಪ್ರಸ್ತಾಪಿಸಿ ಗುರುವಾರ ಮಾತನಾಡಿದ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಶಿವಕುಮಾರ್ ಅವರು, “ಬೆಂಗಳೂರು ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದ್ದು, ನಗರದ ಜನಸಂಖ್ಯೆ 1.40 ಕೋಟಿಗೆ ಏರಿದೆ. ಬೆಂಗಳೂರನ್ನು ಅತ್ಯುತ್ತಮ ನಗರವಾಗಿ ಮಾಡಬೇಕು. ಅಂತಾರಾಷ್ಟೀಯ ಮಟ್ಟದಲ್ಲಿ ಬೆಂಗಳೂರು ಹೆಸರು ಮಾಡುತ್ತಿದ್ದು, ರಾಜ್ಯ ರಾಜಧಾನಿಗೆ ಹೊಸ ರೂಪ ನೀಡಲು ಗ್ರೇಟರ್ ಬೆಂಗಳೂರು ಬಿಲ್ ಗೆ ಹೊಸದಾಗಿ ಪ್ರಸ್ತಾವನೆ ಸಲ್ಲಿಸುತ್ತಿದ್ದೇನೆ” ಎಂದು ಹೇಳಿದರು.
ಈ ವೇಳೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮತ್ತು ಶಾಸಕ ಎಸ್.ಟಿ.ಸೋಮಶೇಖರ್ ಅವರು ಮಾತನಾಡಿ, ಬೆಂಗಳೂರಿನ ಶಾಸಕರು, ವಿಧಾನಪರಿಷತ್ ಸದಸ್ಯರು ಸೇರಿದ ಸದನ ಸಮಿತಿ ರಚಿಸಬೇಕು. ವಿಶೇಷ ಚರ್ಚೆ ಮಾಡಬೇಕು. ಬಿಲ್ ಅನ್ನು ಬಾಕಿ ಇರಿಸಬೇಕು ಎಂದು ಎಂದು ಮನವಿ ಮಾಡಿದರು.
ಸದನ ಸಮಿತಿ ರಚನೆ ಮಾಡಲು ನಮ್ಮ ಒಪ್ಪಿಗೆಯಿದೆ: ಇದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್ ಅವರು, “ಅಶೋಕ್ ಹಾಗೂ ಸೋಮಶೇಖರ್ ಅವರು ಚರ್ಚೆ ನಡೆಸಬೇಕು ಎಂದು ಹೇಳಿದ್ದಾರೆ. ಬೆಂಗಳೂರಿನ ಶಾಸಕರಾದ ಸತೀಶ್ ರೆಡ್ಡಿ, ರಾಮಮೂರ್ತಿ ಅವರು ನನ್ನನ್ನು ಭೇಟಿ ಮಾಡಿ ಒಂದಷ್ಟು ವಿಚಾರಗಳನ್ನು ಚರ್ಚೆ ಮಾಡಿದ್ದಾರೆ. ನಮಗೂ ಸಹ ತರಾತುರಿಯಲ್ಲಿ ಈ ಬಿಲ್ ಅನ್ನು ತರುವ ಆಲೋಚನೆ ಇಲ್ಲ. ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್, ರಿಜ್ವಾನ್ ಅರ್ಷದ್, ಕೃಷ್ಣಬೈರೇಗೌಡ ಅವರ ಬಳಿಯೂ ಈ ವಿಚಾರವಾಗಿ ಚರ್ಚೆ ನಡೆಸಿದ್ದೇನೆ. ಈ ವಿಚಾರವಾಗಿ ಸದನ ಸಮಿತಿ ರಚನೆ ಮಾಡಲು ನಮ್ಮ ಒಪ್ಪಿಗೆಯಿದೆ” ಎಂದು ಹೇಳಿದರು.
ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯ ಪ್ರದೇಶಗಳನ್ನು ಸೇರಿಸಿ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ ರಚನೆ ಮಾಡಲು ಹಾಗೂ ಇದರಡಿ ಹತ್ತರವರೆಗೆ ನಗರ ಪಾಲಿಕೆಗಳನ್ನು ರಚಿಸಲು ಅವಕಾಶ ಕಲ್ಪಿಸುವ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ ಆಡಳಿತ ವಿಧೇಯಕ-2024' ಇದಾಗಿದೆ. ಬಿಬಿಎಂಪಿ, ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯ ಹೊಸಕೋಟೆ, ನೆಲಮಂಗಲ, ದೇವನಹಳ್ಳಿ, ದೊಡ್ಡಬಳ್ಳಾಪುರ (ಎಲೆಕ್ಟ್ರಾನಿಕ್ ಸಿಟಿ, ಬಿಡದಿ, ಆನೇಕಲ್ ಸೇರಿ) ಎರಡೂ ಜಿಲ್ಲೆ ಹಾಗೂ ಸುತ್ತಮುತ್ತ ಪ್ರದೇಶಗಳನ್ನು ಸೇರಿಸಿ ಗ್ರೇಟರ್ ಬೆಂಗಳೂರು ರಚಿಸುವುದು ಚಿಂತನೆಯಾಗಿದೆ.
ಕನಿಷ್ಠ ಹತ್ತು ಲಕ್ಷ ಜನಸಂಖ್ಯೆಗೆ ಕಡಿಮೆ ಇಲ್ಲದಂತೆ ಒಂದೊಂದು ನಗರ ಪಾಲಿಕೆ ರಚನೆ ಮಾಡಲು ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ. ಪ್ರತಿ ಚದರ ಕಿ.ಮೀ.ಗೆ 5 ಸಾವಿರ ಜನಸಂಖ್ಯೆ ಇರಬೇಕು ಎಂಬುದನ್ನು ಗಮನದಲ್ಲಿಟ್ಟುಕೊಂಡು ಒಂದೊಂದು ಪಾಲಿಕೆಗೆ 200 ವಾರ್ಡ್‌ವರೆಗೆ ರಚನೆ ಮಾಡಲು ಅವಕಾಶವಿದೆ.
ಬಿಬಿಎಂಪಿ ವ್ಯಾಪ್ತಿ ಸದ್ಯ 708 ಚ.ಕಿ.ಮೀ. ಇದೆ. ಪ್ರತಿಯೊಂದು ಪಾಲಿಕೆಯು ಸರಾಸರಿ 200 ಚ.ಕಿ.ಮೀ. ವಿಸ್ತೀರ್ಣ ಹೊಂದಿರಲಿವೆ. ಜಿಬಿಎ ವ್ಯಾಪ್ತಿ ಸುಮಾರು 1400 ಚ.ಕಿ.ಮೀ. ಇರಲಿದೆ. ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಹೊರವಲಯದಲ್ಲಿ ಹೆಚ್ಚು ಅಭಿವೃದ್ಧಿ ಹೊಂದಿರುವ ಪ್ರದೇಶಗಳು ಜಿಬಿಎ ವ್ಯಾಪ್ತಿಗೆ ತರಲು ಶಿಫಾರಸು ಮಾಡಲಾಗಿದೆ.