ಶ್ರೇಷ್ಠ ಶಿಕ್ಷಕರತ್ನ ಸಾವಿತ್ರಿಬಾಯಿ ಫುಲೆ

savitri bai pule
Published on
ಡಾ. ವೆಂಕಟೇಶ್ ಎಸ್.

ಶಿಕ್ಷಣದ ಮಹತ್ವ ಕುರಿತಂತೆ ನವಜಾಗೃತಿಯ ಮೂಲಕ ಇತಿಹಾಸ ಸೃಷ್ಟಿಸಿದವರು ಆದರ್ಶ ರಾಷ್ಟ್ರೀಯಮಾತಾ ಎಂದು ಖ್ಯಾತಿವೆತ್ತ ಭಾರತದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ. ಮಹಾರಾಷ್ಟ್ರದಲ್ಲಿ 1831ರ ಜನವರಿ 3ರಂದು ಜನಿಸಿದ ಸಾವಿತ್ರಿಬಾಯಿ ಫುಲೆ 9ನೇ ವರ್ಷದಲ್ಲಿ 12 ವರ್ಷದ ಜ್ಯೋತಿಬಾ ಫುಲೆ ಅವರನ್ನು ಮದುವೆಯಾದರು. ಜ್ಯೋತಿಬಾ ಫುಲೆ ಸಾಮಾಜಿಕ ಕಳಕಳಿ ಹೊಂದಿದ್ದ ವ್ಯಕ್ತಿ. ಸಮಾಜದಲ್ಲಿ ಅಸಮಾನತೆಯನ್ನು ಹೋಗಲಾಡಿಸಲು ಶಿಕ್ಷಣ ಒಂದು ಸಮರ್ಥ ಮಾರ್ಗ ಎಂಬುದನ್ನು ಮನಗಂಡಿದ್ದ ಫುಲೆ ಕೆಳವರ್ಗದವರಿಗೆ ಶಿಕ್ಷಣಭಾಗ್ಯ ಕಲ್ಪಿಸಲು ಮುಂದಾದರು. 1848ರಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ಬಯಲುಶಾಲೆ ಪ್ರಾರಂಭಿಸಿದರು. ಆ ಶಾಲೆಯಲ್ಲಿ ಇಬ್ಬರು ಶಿಕ್ಷಕರನ್ನು ನೇಮಿಸಿದರು. ಆ ಕಾಲಘಟ್ಟದ ವ್ಯವಸ್ಥೆಯ ಒತ್ತಡಕ್ಕೆ ಒಳಗಾದ ಆ ಶಿಕ್ಷಕರು ಶಾಲೆಯನ್ನು ತ್ಯಜಿಸಿದರು. ಫುಲೆ ಧೃತಿಗೆಡದೆ ಅಲ್ಪಸ್ವಲ್ಪ ಅಕ್ಷರಜ್ಞಾನವಿರುವ ಸಾವಿತ್ರಿಬಾಯಿ ಅವರಿಗೆ ನಿರಂತರ ಅಕ್ಷರಾಭ್ಯಾಸ ಮಾಡಿಸಿ ಶಿಕ್ಷಕ ತರಬೇತಿ ಕೊಡಿಸಿದರು. ಉತ್ತಮ ಗ್ರಹಣ ಶಕ್ತಿ ಹೊಂದಿದ್ದ ಸಾವಿತ್ರಿಬಾಯಿ ಹೆಣ್ಣುಮಕ್ಕಳಿಗೆ ಬೋಧಿಸಲು ಮುಂದಾದರು.

ಪ್ರಾರಂಭದಲ್ಲಿ ಒಂಭತ್ತು ಮಹಿಳೆಯರು ಶಾಲೆಗೆ ಸೇರಿದರು. ಪುರುಷಪ್ರಧಾನವಾದ ಆಗಿನ ಸಮಾಜದಲ್ಲಿ ಕೇವಲ ಪುರುಷರಷ್ಟೇ ವಿದ್ಯಾವಂತರಾಗಬೇಕೆಂಬ ಭ್ರಮೆ ಇತ್ತು. ಆದರೆ ಶಿಕ್ಷಣ ಪಡೆಯುವುದು ಪ್ರತಿಯೊಬ್ಬರ ಮೂಲಭೂತ ಹಕ್ಕು, ಎಲ್ಲರಿಗೂ ಶಿಕ್ಷಣ ಬೇಕು ಎಂಬ ಅರಿವನ್ನು ಫುಲೆ ದಂಪತಿ ವ್ಯಾಪಕಗೊಳಿಸಿದರು. ಆಗಿನ ಸಾಮಾಜಿಕ ವ್ಯವಸ್ಥೆಯ ವೈರುಧ್ಯ ಮತ್ತು ನಿಂದನೆಗಳನ್ನು ಎದುರಿಸಿ ಸಾವಿತ್ರಿಬಾಯಿ ಶಾಲಾಬೋಧನೆ ಮುಂದುವರಿಸಿದರು. ಆಗ ಸಾವಿತ್ರಿಬಾಯಿ ಅವರ ಮೈಮೇಲೆ ಕೆಲವರು ಸಿಟ್ಟಿನಿಂದ ಸಗಣಿರಾಡಿಯನ್ನು ಹಾಕಿದರು. ಇದನ್ನು ಗಮನಿಸಿದ ಜ್ಯೋತಿಬಾ, ‘ನೀನು ಹೆದರಬೇಡ, ಶಾಲೆಗೆ ಹೋಗುವಾಗ ಇನ್ನೊಂದು ಹಳೆಯ ಸೀರೆ ತೆಗೆದುಕೊಂಡು ಹೋಗು. ಪಾಠ ಮುಗಿಸಿದ ನಂತರ ಆ ಹಳೆಯ ಸೀರೆಯನ್ನು ಉಟ್ಟುಕೊಂಡು ಬಾ’ ಎಂದು ಹೇಳಿದರಂತೆ. ನಿತ್ಯವೂ ಮೈಮೇಲೆ ಎರಚುತ್ತಿದ್ದ ಸಗಣಿ ಮತ್ತು ಮೊಟ್ಟೆಗಳಿಂದ ಹಿಂಸೆ ಅನುಭವಿಸಿಯೂ ಸಾವಿತ್ರಿಬಾಯಿ ಕಲಿಸುವುದನ್ನು ಮುಂದುವರಿಸಿದರು. ಬೋಧನೆಯ ಖುಷಿಯಲ್ಲಿ ಆ ಯಾತನೆಯನ್ನು ಮರೆಯುತ್ತಿದ್ದರು.

ನಂತರ ಸಾವಿತ್ರಿಬಾಯಿ ಶಾಲೆಗೆ ಹೋಗುತ್ತಿರುವಾಗ ಕೆಲವು ಪುಂಡರು ಕಲ್ಲುಗಳನ್ನು ಎಸೆಯಲು ಆರಂಭಿಸಿದರು. ಒಂದು ದಿನ ಕಲ್ಲು ಸಾವಿತ್ರಿಯವರ ಹಣೆಗೆ ಬಿದ್ದಿತು. ಒಂದೇ ಸಮನೆ ರಕ್ತ ಸೋರತೊಡಗಿತು. ಒಂದು ಕೈಯಿಂದ ರಕ್ತವನ್ನು ಒತ್ತಿ ಹಿಡಿದುಕೊಂಡು ಏರುಧ್ವನಿಯಲ್ಲಿ, ‘ನಾನು ಶಾಲೆಗೆ ಹೋಗುವುದನ್ನು ನಿಲ್ಲಿಸುತ್ತೇನೆಂದು ನೀವು ಭಾವಿಸಿದರೆ ಅದು ನಿಮ್ಮ ಭ್ರಮೆ ಮಾತ್ರ, ನಾನು ನನ್ನ ಕೆಲಸವನ್ನು ಮಾಡಿಯೇ ತೀರುತ್ತೇನೆ. ಈ ನೆಲದ ಮೇಲೆ ಬಿದ್ದ ರಕ್ತದ ಒಂದೊಂದು ಹನಿಯೂ ಮುಂದೊಂದು ದಿನ ಒಂದೊಂದು ಶಾಲೆಯಾಗಿ ಉದಯಿಸುತ್ತವೆ. ದೇವರು ನಿಮ್ಮನ್ನು ಕ್ಷಮಿಸಲಿ’ ಎಂದು ಹೇಳಿ ಶಾಲೆಯ ಕಡೆ ನಡೆದರು. ಈ ಘಟನೆ ತಿಳಿದ ಜ್ಯೋತಿಬಾ, ‘ಇಂದು ಯಾರು ನಿನಗೆ ಕಲ್ಲಿನಿಂದ ಹೊಡೆದು ಅವಮಾನಿಸಿದ್ದಾರೋ ಮುಂದೆ ಅವರೇ ನಿನ್ನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸುತ್ತಾರೆ’ ಎಂದು ಪತ್ನಿಗೆ ಸಮಾಧಾನ ಹೇಳಿ ಪ್ರೋತ್ಸಾಹಿಸಿದರು.

ಜ್ಯೋತಿಬಾ ಮಾತು ಇಂದು ನಿಜವಾಗಿದೆ. ದೇಶಾದ್ಯಂತ ಕೋಟ್ಯಂತರ ಜನರು ಸಾವಿತ್ರಿಬಾಯಿ ಅವರನ್ನು ನೆನೆದು ಅವರ ಭಾವಚಿತ್ರಕ್ಕೆ ಹೂವಿನಹಾರ ಹಾಕುತ್ತಿದ್ದಾರೆ. 1949ರಲ್ಲಿ ಪುಣೆಯ 411 ಎಕರೆಯಲ್ಲಿ ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾಲಯ ಸ್ಥಾಪನೆಯಾಗಿದೆ. ‘ಆಕಾಶ ಕಳಚಿ ಬೀಳಲಿ, ಭೂಮಿ ಚೂರಾಗಲಿ, ಸಮುದ್ರಗಳು ಉಕ್ಕಿ ಹರಿಯಲಿ, ಬದುಕಿನ ಗುರಿಯತ್ತ ನಿಮ್ಮ ಪ್ರಯಾಣ ಮಾತ್ರ ನಿಲ್ಲದೆ ಸಾಗಲಿ’ ಎಂಬ ಸ್ವಾಮಿ ವಿವೇಕಾನಂದರ ಮಾತಿನ ಆಶಯವನ್ನು ಈ ದಂಪತಿ ನಿಜ ಮಾಡಿ ತೋರಿಸಿದ್ದಾರೆ. ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆಯವರ ಬದುಕು ಇಂದಿನ ಶಿಕ್ಷಕರಿಗೆ ಆದರ್ಶ.

(ಲೇಖಕರು ಸಹಾಯಕ ಪ್ರಾಧ್ಯಾಪಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net