

| ಆದರ್ಶ ಗೋಖಲೆ
‘ನಾಹಂ ಕರ್ತಾ ಕಾರಯಸಿ ತ್ವಂ’ ಭಾವನೆಯೊಂದಿಗೆ ಮಾಡುವ ಕಾರ್ಯಗಳೆಲ್ಲವನ್ನೂ ಭಗವಂತನಿಗರ್ಪಿಸಿ ಸ್ಥಿತಪ್ರಜ್ಞನಾಗುವುದು ಸಾಮಾನ್ಯವಲ್ಲ. ನವೋತ್ಥಾನಕ್ಕೆ ಸಿದ್ಧವಾಗಿದ್ದ ಭಾರತದ ದಶದಿಶೆಯ ಆತ್ಮವಿಸ್ಮೃತ ಜನಾಂಗಕ್ಕೆ ರಾಷ್ಟ್ರೀಯತೆಯ ಅಮೃತವಿತ್ತ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಸ್ಥಾಪಿಸಿದ ಯುಗದೃಷ್ಟ ಡಾ. ಕೇಶವ ಬಲಿರಾಮ ಹೆಡಗೇವಾರರು ಭಾರತಭಾಗ್ಯವಿಧಾತಾ.
ನಾಗ್ಪುರದ ಬಲಿರಾಮಪಂತ ಹೆಡಗೇವಾರ್ - ರೇವತೀಬಾಯಿ ದಂಪತಿಯ ಮಗನಾಗಿ 1889ರ ಎಪ್ರಿಲ್ 1ರಂದು ಜನಿಸಿದ ಕೇಶವ ಜಾತದೇಶಭಕ್ತ. ಕುಟುಂಬದ ಹಿನ್ನೆಲೆ, ಸಾಹಸೀ ಮಹಾರಾಜರ ಕಥಾಶ್ರವಣದಿಂದ ದೇಶಭಕ್ತಿಯ ಉಯ್ಯಾಲೆಯಲ್ಲಿ ಬೆಳೆದ ಮಹಾಸ್ವಾಭಿಮಾನಿ ಬಾಲಕ ಇಂಗ್ಲೆಂಡ್ನ ರಾಣಿಯ ಪಟ್ಟಾಭಿಷೇಕ ವಜ್ರಮಹೋತ್ಸವವನ್ನು ಧಿಕ್ಕರಿಸಿದ. ಹದಿಮೂರರ ಹರೆಯದಲ್ಲೇ ಅಪ್ಪ-ಅಮ್ಮನನ್ನು ಕಳೆದುಕೊಂಡು ಅಣ್ಣಂದಿರ ಆಶ್ರಯದಲ್ಲಿ ಬೆಳೆದ ಕೇಶವನಿಗೆ 1905ರ ವಂಗಭಂಗ ವಿರೋಧೀ ಆಂದೋಲನ ಹೊಸ ದೃಷ್ಟಿಯನ್ನಿತ್ತಿತು. ತಾನು ಓದುತ್ತಿದ್ದ ನೀಲ್ ಸಿಟಿ ವಿದ್ಯಾಲಯದಲ್ಲಿ ಬ್ರಿಟಿಷ್ ಸರ್ಕಾರ ನಿಷೇಧಿಸಿದ ವಂದೇ ಮಾತರಂ ಘೊಷಣೆಯನ್ನು ಮೊಳಗಿಸಿದ ಬಾಲವೀರನ ಧೈರ್ಯದಿಂದ ಸಂತುಷ್ಟರಾದ ಬಾಲಕೃಷ್ಣ ಶಿವರಾಮ ಮೂಂಜೆಯವರು ಉನ್ನತ ಶಿಕ್ಷಣಕ್ಕಾಗಿ ಕಲ್ಕತ್ತೆಯ ವೈದ್ಯಕೀಯ ಕಾಲೇಜಿಗೆ ಕಳುಹಿಸಿದರು.
ದೇಶದ ವಿವಿಧ ಭಾಗಗಳಿಂದ ಬಂದಿದ್ದ ತರುಣರ ಒಡನಾಟ, ಪುಲಿನಬಿಹಾರಿದಾಸರ ಅನುಶೀಲನಾ ಸಮಿತಿಯ ಸಾಂಗತ್ಯ, ಸಾಹಿತ್ಯಪ್ರಸಾರ, ಗುಪ್ತ ಕ್ರಾಂತಿಕಾರಿ ಚಟುವಟಿಕೆಗಳಿಂದ ಪ್ರಭಾವಿತರಾದ ಯುವನಾಯಕ ಹೆಡಗೇವಾರ್; ಸಹಪಾಠಿ ನಾರಾಯಣ ಸಾವರ್ಕರ್ ಸಖ್ಯದಿಂದ ವೀರ ಸಾವರ್ಕರರ ಅಂಡಮಾನ್ ವಾಸ, ಸ್ವಾತಂತ್ರ್ಯ ಸಮರದ ವೀರಗಾಥೆಯನ್ನು ತಿಳಿದರು. ಓದಿನಲ್ಲೂ ಅದ್ವಿತೀಯ ಸಾಧನೆಗೈದ ಕೇಶವ ಉನ್ನತ ಅಂಕಗಳಿಸಿ ವೈದ್ಯಪದವಿ ಪಡೆದು ಮುಂದೆ ಡಾಕ್ಟರ್ಜೀ ಎಂದೇ ಪ್ರಸಿದ್ಧರಾದರು. ಬ್ಯಾಂಕಾಕ್ನಿಂದ ಸಾವಿರಾರು ರೂಪಾಯಿ ಸಂಭಾವನೆಯ ಕರೆ ಬಂದಿದ್ದರೂ ಅದನ್ನು ನಯವಾಗಿ ತಿರಸ್ಕರಿಸಿ ಇರುವ ಒಂದು ಬಾಳು ದೇಶಕ್ಕಾಗಿ ಮೀಸಲೆಂದು ಸಂಕಲ್ಪಿಸಿದರು.
ನಾಗ್ಪುರಕ್ಕೆ ಮರಳಿದ ಬಳಿಕ ಕ್ರಾಂತಿಕಾರಿಗಳ ಸಂಪರ್ಕ ಬೆಳೆಸಿದ ಡಾಕ್ಟರ್ಜೀ ರಾಷ್ಟ್ರಸೇವಾಮಂಡಳದ ಮೂಲಕ ಲೋಕಮಾನ್ಯ ತಿಲಕರ ರಾಷ್ಟ್ರಜಾಗೃತಿಯ ಸದುದ್ದೇಶದ ಶಿವಾಜಿ ಜಯಂತಿ, ಗಣೇಶೋತ್ಸವಗಳನ್ನು ಸಂಘಟಿಸಿದರು. ಅಸಹಕಾರ ಚಳವಳಿಯಲ್ಲಿ ಧುಮುಕಿ ಅಸಹಕಾರ ಸಪ್ತಾಹ ಆಯೋಜಿಸಿ, ಸಾರ್ವಜನಿಕ ಸಭೆ, ಭಾಷಣಗಳನ್ನು ನೀಡಿದ ಡಾಕ್ಟರ್ಜೀ ರಾಜದ್ರೋಹ ಆರೋಪಕ್ಕೊಳಗಾಗಿ ಒಂದು ವರ್ಷದ ಸೆರೆವಾಸವನ್ನು ಅನುಭವಿಸಿದರು. ಜೈಲಿನೊಳಗಡೆ ಅನೇಕ ಕ್ರಾಂತಿಕಾರರ, ದೇಶಪ್ರೇಮಿ ಯುವಕರ ಪರಿಚಯವಾಗಿ ಯುವಮನಗಳಿಗೆ ಹೋರಾಟದ ಕಾವಿನ ಜೊತೆಜೊತೆಗೆ ಇತಿಹಾಸದ ಜ್ಞಾನದ ಅರಿವೂ ಲಭಿಸಿದರೆ ಪ್ರಚಂಡ ರಾಷ್ಟ್ರನಿರ್ವಣಕಾರ್ಯ ಕಷ್ಟವಲ್ಲವೆಂದರಿತು ಮಹಾಸೌಧನಿರ್ವಿುತಿಯ ಕನಸು ಕಂಡರು. ವೀರ ಸಾವರ್ಕರ್, ಬಾಬಾ ಸಾವರ್ಕರ್, ಡಾ. ಮೂಂಜೆ, ಲಕ್ಷ್ಮಣ ಪರಾಂಜಪೆ ಮೊದಲಾದ ಹಿರಿಯರೊಡನೆ ರ್ಚಚಿಸಿ ಸಂಘಸ್ಥಾಪನೆಯ ನಿರ್ಧಾರ ಕೈಗೊಂಡ ಡಾಕ್ಟರ್ಜೀ ಓಲೈಕೆ, ದೈನ್ಯತೆಯ ಸ್ಥಿತಿಯಿಂದ ಭಾರತವನ್ನು ಮೇಲೆತ್ತಲು ಪಣತೊಟ್ಟರು.
ಹಿಂದುಹಿತ - ರಾಷ್ಟ್ರರಕ್ಷಾಧ್ಯೇಯದೊಂದಿಗೆ 1925ರ ವಿಜಯದಶಮಿಯಂದು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಸ್ಥಾಪಿಸಿದ ಡಾಕ್ಟರ್ಜೀ ಮುಂದೆ ಭವ್ಯಭಾರತದ ನೀಲನಕಾಶೆಯಿತ್ತು. ಸಂಘವಿಸ್ತಾರ, ಶಾಖಾವೃದ್ಧಿ, ಕಾರ್ಯಕರ್ತಸೃಷ್ಟಿಯ ಆಯಾಮದೊಂದಿಗೆ ತರುಣವರ್ಗವನ್ನು ಸೆಳೆದ ಸ್ಪರ್ಶಮಣಿ ಡಾಕ್ಟರ್ಜೀ, ಕಾರ್ಯಕರ್ತರು ವಿದ್ಯಾವಂತರೂ ವಿನಯವಂತರೂ ಆದಾಗ ಸಂಘದ ಬಗ್ಗೆ ಜನಸಾಮಾನ್ಯರಲ್ಲಿ ಸದಭಿಪ್ರಾಯ ಮೂಡಲು ಸಾಧ್ಯ ಎಂಬುದನ್ನರಿತು ಶಿಕ್ಷಣಕ್ಕೆ ಮೊದಲ ಆದ್ಯತೆಯನ್ನು ನೀಡಿದರು. ವಿವಿಧ ಪ್ರದೇಶಗಳಿಗೆ ತೆರಳಿದ ನಾಗ್ಪುರದ ವಿದ್ಯಾರ್ಥಿ ಕಾರ್ಯಕರ್ತರು ಶಾಖೆಗಳನ್ನು ವಿಸ್ತರಿಸಿದ ಪರಿಣಾಮ ಸಂಘ ದೇಶವ್ಯಾಪಿಯಾಯಿತು. ಮಹಿಳೆಯರೂ ರಾಷ್ಟ್ರಜೀವನದ ಅವಿಭಾಜ್ಯ ಅಂಗವೆಂಬ ವೇದೋಕ್ತಿಗೆ ಅನುಗುಣವಾಗಿ ರಾಷ್ಟ್ರಸೇವಿಕಾ ಸಮಿತಿ ಲೋಕಾರ್ಪಣೆಗೊಂಡಿತು. 1930ರ ಪ್ರಸಿದ್ಧ ಜಂಗಲ್ ಸತ್ಯಾಗ್ರಹದಲ್ಲಿ ಭಾಗವಹಿಸಿ ನವಮಾಸಗಳ ಕಾರಾಗೃಹವಾಸಕ್ಕೆ ಗುರಿಯಾದ ಡಾಕ್ಟರ್ಜೀ ಜೈಲಿನೊಳಗಡೆ ಭೇಟಿಯಾದ ತರುಣರ ಮೂಲಕ ಸಂಘದ ಉದ್ದೇಶ, ಕಾರ್ಯಪದ್ಧತಿಯನ್ನು ನೂರಾರು ಊರುಗಳಿಗೆ ತಲುಪಿಸಿದರು.
ಮೇಲುಕೀಳೆಂಬ ಭೇದವಿಲ್ಲದೆ ಹಿಂದುವಾಗಿ ಆತ್ಮಸ್ಥೈರ್ಯ ಪಡೆಯುವ ಸ್ವಯಂಸೇವಕರ ಕೀರ್ತಿ ಗಾಂಧೀಜಿ ಕಿವಿಗೂ ಬಿತ್ತು. 1934ರ ವಾರ್ಧಾ ಜಿಲ್ಲಾ ಶಿಬಿರಕ್ಕೆ ಭೇಟಿಯಿತ್ತ ಗಾಂಧೀಜಿ ಸಂಘದ ಸರಳತೆ, ತ್ಯಾಗಮನೋಭಾವ, ಸೇವಾಭಾವದಿಂದ ಸ್ಪೂರ್ತಿಗೊಂಡರು. ಅಕ್ಷರಶಃ ಕಾಲಿಗೆ ಚಕ್ರ ಕಟ್ಟಿ ಓಡಾಡಿದ ಹೆಡಗೇವಾರರ ಅರ್ಪಣಾಬದುಕಿನಿಂದ ನೇತಾಜಿ, ಪಂಡಿತ ಮಾಳವೀಯರಾದಿಯಾಗಿ ಸಾವಿರಾರು ಭಾರತಭಕ್ತರು ಪ್ರಭಾವಿತರಾಗಿ ಸಂಘಕ್ಕೆ ಬೆಂಗಾವಲಾದರು. ನೋಡನೋಡುತ್ತಿದ್ದಂತೆ ಹೆಮ್ಮರವಾಗಿ ಬೆಳೆದ ಸಂಘದ 1940ರ ಶಿಕ್ಷಾವರ್ಗದಲ್ಲಿ ಭಾರತದ ಪ್ರತಿಯೊಂದು ಭಾಗದಿಂದಲೂ ಬಂದಿದ್ದ ಸ್ವಯಂಸೇವಕರನ್ನು ಕಂಡು, ‘ಇಂದು ಪುಟ್ಟ ಹಿಂದುರಾಷ್ಟ್ರವನ್ನು ನೋಡುತ್ತಿದ್ದೇನೆ’ ಎಂದು ಉದ್ಗರಿಸಿದರು.
ಕರ್ನಾಟಕದ ರೊಟ್ಟಿ ಊಟವನ್ನು ಇಷ್ಟಪಟ್ಟಿದ್ದ ಡಾಕ್ಟರ್ಜೀ, ಛಳಿ-ಮಳೆ-ಬಿಸಿಲೆನ್ನದೆ ನಡೆಸಿದ ನಿರಂತರ ಹದಿನೈದು ವರ್ಷಗಳ ಓಡಾಟದಿಂದ ದೈಹಿಕವಾಗಿ ಬಳಲಿದರು. ಸೇವೆಯೆಂಬ ಯಜ್ಞದಲ್ಲಿ ಸಮಿಧೆಯಂತೆ ಉರಿದ ಸಂತ ಡಾ. ಕೇಶವ ಬಲಿರಾಮ ಹೆಡಗೇವಾರರು 1940ರ ಜೂನ್ 21ರಂದು ಬ್ರಹ್ಮಲೀನರಾದರು. ಇಂದು ನಾವು ಅನುಭವಿಸುತ್ತಿರುವ ನವಭಾರತದ ಮೆರುಗು ಆ ಭವ್ಯವ್ಯಕ್ತಿತ್ವ ಕಂಡ ಕನಸಿನ ಪ್ರಭಾವವೇ ಆಗಿದೆ.