

ವಿವರವಾದ ನಿರೂಪಣೆ ಇಲ್ಲಿ ಬರುವುದಿದೆ. ಶ್ರೀದೇವಿ ಮತ್ತು ಲೀಲಾಮಹಾರಾಣಿ ಸೂಕ್ಷ್ಮ ಸ್ವರೂಪದಿಂದ ವಿದೂರಥನ ಅರಮನೆಯನ್ನು ಕಿಟಕಿಯ ರಂಧ್ರದ ಮೂಲಕ ಪ್ರವೇಶಿಸಿದರು. ಇದನ್ನು ಕೇಳಿದಾಗ ಶ್ರೀರಾಮನ ಮನಸ್ಸಿನಲ್ಲಿ ಆತಿವಾಹಿಕ ಶರೀರದ ಬಗ್ಗೆ ಜಿಜ್ಞಾಸೆ ಹುಟ್ಟಿಕೊಂಡಿತು. ಯಾಕೆಂದರೆ ಅವರಿಬ್ಬರೂ ಆತಿವಾಹಿಕ ಶರೀರದಿಂದಲೇ ಸೂಕ್ಷ್ಮ ರಂಧ್ರದಲ್ಲಿ ಪ್ರವೇಶಿಸಿ ಒಳಗೆ ಹೋಗಿದ್ದಾರೆ. ಮೊದಲು, ಸ್ಥೂಲ ಶರೀರವನ್ನೇ ಕಲ್ಪನೆಯಲ್ಲಿಟ್ಟುಕೊಂಡು, ನಾಲ್ಕು ಹಸ್ತಗಳಷ್ಟು ದೀರ್ಘವಾದ ಶರೀರ ರಂಧ್ರದ ಮೂಲಕ ಹೇಗೆ ಪ್ರವೇಶಿಸಿತು? ಎಂಬ ಪ್ರಶ್ನೆಯನ್ನು ಇಟ್ಟಿದ್ದಾನೆ. ಇದಕ್ಕೆ ಶ್ರೀ ವಸಿಷ್ಠರ ಉತ್ತರವನ್ನು ಈಗ ಗಮನಿಸೋಣ.
‘ಶ್ರೀರಾಮ! ಯಾರಿಗೆ ಈ ಭೌತಿಕ ಶರೀರದಲ್ಲಿಯೇ ‘ಈ ಶರೀರವೇ ನಾನು’ ಎಂಬ ಭ್ರಾಂತಿಯುಳ್ಳ ಮನಸ್ಸು ಇದೆಯೋ, ಅಂಥವರ ಶರೀರಕ್ಕೆ ಆ ಸೂಕ್ಷ್ಮ ರಂಧ್ರದ ಮೂಲಕ ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಅವರಿಗೆ ‘ಈ ರಂಧ್ರದಲ್ಲಿ ತನ್ನ ಶರೀರವನ್ನು ಹಿಡಿಸಲು ತನಗೆ ಸಾಧ್ಯವಿಲ್ಲ’ ಎಂಬ ಬುದ್ಧಿ ಇರುತ್ತದೆ. ಮನುಷ್ಯ ದೇಹವೇ ತಾನೆಂಬ ಭಾವ ಅವರಿಗೆ ಗಾಢವಾಗಿರುತ್ತದೆ. ಹಿಂದೆ ನೂರಾರು ಜನ್ಮಗಳಿಂದಲೂ ಅನುಭವಿಸಿಕೊಂಡು ಬಂದಿರುವ ಸ್ಥೂಲದೇಹದ ತಾದಾತ್ಮ್ಯ ಈಗಲೂ ಅವನಿಗೆ ಅನುಭವಕ್ಕೆ ಬರುತ್ತಿರುತ್ತದೆ. ಆದ್ದರಿಂದ ರಂಧ್ರದ ಒಳಕ್ಕೆ ತಾನು ಹೋಗುವುದು ಅಸಂಭವ ಎಂಬುದಾಗಿ ಅವನಿಗೆ ಅನುಭವಕ್ಕೆ ಬರುತ್ತಿರುತ್ತದೆ.
ಯಾರಿಗೆ ಸ್ಥೂಲ ದೇಹದಲ್ಲಿ ತಾದಾತ್ಮ್ಯಬುದ್ಧಿ ಇರುವುದಿಲ್ಲವೋ ಮತ್ತು ಆತಿವಾಹಿಕ ಸೂಕ್ಷ್ಮ ದೇಹವೇ ತನ್ನ ದೇಹವೆಂಬ ನಿಶ್ಚಯವಿರುವುದೋ, ಅಂಥವರಿಗೆ ತಡೆಯ ಅನುಭವವಾಗುವುದಿಲ್ಲ. ಯಾಕೆಂದರೆ ಅವನಿಗೆ ಮೊದಲೇ ತಾನು ಸ್ಥೂಲದೇಹವಲ್ಲ, ಆತಿವಾಹಿಕ ಸೂಕ್ಷ್ಮದೇಹವೇ ತನ್ನ ದೇಹ ಎಂಬ ದೃಢವಾಸನೆ ಚೆನ್ನಾಗಿ ಬೆಳೆದಿರುತ್ತದೆ. ಮರಣಕ್ಕಿಂತ ಮೊದಲೇ ಸ್ಥೂಲದೇಹದಲ್ಲಿರುವಾಗಲೇ ಅವನು ಅಭ್ಯಾಸಬಲದಿಂದ ಈ ವಾಸನೆ ಗಳಿಸಿರುತ್ತಾನೆ. ಅತ್ಯಂತ ಸೂಕ್ಷ್ಮ ರಂಧ್ರದಲ್ಲೂ ಪ್ರವೇಶಿಸುವಷ್ಟು ಸೂಕ್ಷ್ಮ ಸ್ವರೂಪಿ ತಾನಾಗಿದ್ದೇನೆ ಎಂಬುದು ನೂರಾರು ಸಲ ಅನುಭವಕ್ಕೆ ಬಂದಿರುತ್ತದೆ. ಅಂತಹ ಜೀವಾತ್ಮನಿಗೆ, ಸೂಕ್ಷರಂಧ್ರದಲ್ಲಿ ಪ್ರವೇಶಿಸುವ ತನ್ನ ಸ್ವಭಾವದ ಕಡೆಗೆ ಅಭಿಮುಖತೆ ಉಂಟಾದಾಗ, ಮತ್ತು ಸೂಕ್ಷ್ಮರಂಧ್ರದಲ್ಲಿ ಪ್ರವೇಶಿಸುವ ಪ್ರಯತ್ನ ಉಂಟಾದಾಗ, ಅವನು ಎಂದಿಗೂ ಅಸಫಲನಾಗುವುದಿಲ್ಲ. ಸ್ಥೂಲ ದೇಹದಲ್ಲಿಯೇ ಅಭಿಮಾನ ಉಳ್ಳವರಿಗೆ ಬರುವ, ಆ ಸ್ಥೂಲ ಶರೀರವನ್ನು ಪ್ರಯತ್ನ ಪೂರ್ವಕವಾಗಿ ನಿರೋಧಿಸಿ (ಬಗ್ಗಿಸಿ) ಸಣ್ಣದನ್ನಾಗಿ ಮಾಡಿಕೊಳ್ಳುವ ಕ್ರಿಯೆ, ಅಂಥವನಿಗೆ ಹೇಗೆ ಬರಲು ಸಾಧ್ಯ? ಸಾಧ್ಯವಿಲ್ಲ. ಮೊದಲೇ ದೀರ್ಘ ಅಭ್ಯಾಸದಿಂದ ಪಡೆದ ಶಕ್ತಿಯುತ ಸ್ವಭಾವಕ್ಕೆ ಅನಂತರದ ಕಾಲದಲ್ಲಿ ಬದಲಾವಣೆ ಬರುವುದಿಲ್ಲ. ತಾನು ಸೂಕ್ಷ್ಮರೂಪನೇ ಹೊರತು ಸ್ಥೂಲರೂಪನಲ್ಲ ಎಂಬ ಭಾವವು ಪ್ರಬಲ ಸ್ವಭಾವವಾಗಿ ಅವನಿಗೆ ಬೆಳಗುತ್ತದೆ. ತಾನು ಸ್ಥೂಲ ಶರೀರವಲ್ಲ ಎಂಬ ಚಿಂತನೆಯ ಅಭ್ಯಾಸದ ಜೊತೆಗೆ ತನ್ನ ಸೂಕ್ಷ್ಮಸ್ವರೂಪದ ಸ್ಪಷ್ಟ ಅನುಭವ ಅವನಿಗೆ ಬಲ ಕೊಡುತ್ತದೆ.
ಸ್ವಭಾವ ಬದಲಾಗುವುದಿಲ್ಲ ಎಂಬುದಕ್ಕೆ ಜಗತ್ತಿನಲ್ಲಿ ಅನೇಕ ಉದಾಹರಣೆಗಳಿವೆ. ನೀರು ಎಂದಿಗೂ ಮೇಲ್ಮುಖವಾಗಿ ಹರಿಯುವುದಿಲ್ಲ. ಬೆಂಕಿ ಎಂದಿಗೂ ಕೆಳಮುಖವಾಗಿ ಉರಿಯುವುದಿಲ್ಲ. ವಸ್ತುವಿನ ಶಕ್ತಿಯಾಗಿರುವ ಸ್ವಭಾವವು ನಿಯಮಿತವಾಗಿ ತನ್ನ ಪ್ರವೃತ್ತಿಯನ್ನು ಇಟ್ಟುಕೊಂಡಿರುತ್ತದೆ. ಜೀವಚೇತನಕ್ಕೆ ಯಾವ ರೀತಿಯ ಶಕ್ತಿ ಸ್ವಭಾವ ಮೊದಲಿಂದಲೇ ಅವಿರ್ಭಾವಗೊಂಡಿರುವುದೋ, ಅದಕ್ಕನುಸಾರವಾಗಿಯೇ ಆ ಜೀವ ಚೇತನ ಮುಂದೆ ಮರಣಾನಂತರವೂ ನಿಂತಿರುತ್ತದೆ.
ಯೋಗಿಗಳಿಗೆ, ಪಿಶಾಚಾದಿಗಳಿಗೆ ಸ್ಥೂಲ ದೇಹದಲ್ಲಿ ತಾದಾತ್ಮ್ಯ ಬುದ್ಧಿ ಇರುವುದಿಲ್ಲ. ಆದ್ದರಿಂದಲೇ ಅವರಿಗೆ ಸೂಕ್ಷ್ಮರಂಧ್ರ ಪ್ರವೇಶಿಸಲು ಶರೀರವನ್ನು ನಿರೋಧಿಸಿ ಸಣ್ಣದಾಗಿಸಿಕೊಳ್ಳಬೇಕೆಂಬ ಪ್ರಯಾಸವಿರುವುದಿಲ್ಲ. ತನಗೆ ಅಂಟಿಕೊಂಡಿರುವ ಸ್ಥೂಲದೇಹದ ಆರೋಪ ಸತ್ಯವಲ್ಲ ಎಂಬುದು ಗೊತ್ತಾದವರಿಗೆ ಇಂತಹ ಆಯಾಸ ಇರುವುದಿಲ್ಲ. ತನ್ನದೇಹದ ತಾದಾತ್ಮ್ಯವು ಆರೋಪವೆಂದು ತಿಳಿದವರಿಗೇನೇ ಹೀಗೆ ಆಯಾಸವಿಲ್ಲದಿರುವಾಗ, ಸಮಸ್ತ ಭೇದ ಪ್ರಪಂಚವು ಆರೋಪ (ತೋರಿಕೆ) ಎಂಬುದು ಅರಿವಿಗೆ ಬಂದಂತಹ ತತ್ವಜ್ಞಾನಿಗಳಿಗೆ ಅಂತಹ ಆಯಾಸವಿಲ್ಲ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕೇ? ನೆರಳಿನಲ್ಲಿಯೇ ಇರುವವನಿಗೆ ಬಿಸಿಲಿನ ತಾಪದ ಅರಿವೇ ಆಗುವುದಿಲ್ಲ. ಹಾಗೆಯೇ ತತ್ವಜ್ಞಾನದ ನೆರಳಿನಲ್ಲಿ ಇರುವವನಿಗೆ ಭೇದಪ್ರಪಂಚದ ಆಯಾಸವಿರುವುದಿಲ್ಲ. ಪರಮಾತ್ಮನ ಸಮ್ಯಕ್ ಸಾಕ್ಷಾತ್ಕಾರವಾದಾಗ ಪರಮಾತ್ಮನ ಹೊರತಾಗಿ ಬೇರೆ ವಸ್ತು ಇದೆ ಎಂಬುದಾಗಿ ಅನುಭವಕ್ಕೆ ಬರುವುದಿಲ್ಲ. ಆದ್ದರಿಂದಲೇ ಭೇದ ಪ್ರಪಂಚದ ಆಯಾಸದ ಅರಿವು ಅವರಿಗಿರುವುದಿಲ್ಲ.