

ಶಿವಮೊಗ್ಗ: ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಳೆ ನೀರನ್ನು ಇಂಗಿಸುವ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದ ಹೋಟೆಲ್ ಹರ್ಷ ದಿ ಫರ್ನ್‌ನಲ್ಲಿ ಸೋಮವಾರ ಜಲಾಮೃತ ಹಾಗೂ ನೀರಿನ ಸಂರಕ್ಷಣೆ ಕುರಿತು ಅಧಿಕಾರಿಗಳಿಗೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಕೇಂದ್ರ ಸರ್ಕಾರದ ಈ ಯೋಜನೆಯಡಿ ಶಿವಮೊಗ್ಗ ಹಾಗೂ ತುಮಕೂರು ಜಿಲ್ಲೆಗಳನ್ನು ಪ್ರಾಯೋಗಿಕ ಮಾದರಿಯಲ್ಲಿ ಆಯ್ಕೆ ಮಾಡಲಾಗಿದೆ ಎಂದರು.
ದೇಶಾದ್ಯಂತ ನವೆಂಬರ್ ವೇಳೆಗೆ ಯೋಜನೆ ಅನುಷ್ಠಾನಗೊಳ್ಳಲಿದೆ. ಆದರೆ ನಮ್ಮ ಜಿಲ್ಲೆಯಲ್ಲಿ ಮುಂದಿನ ಮೂರು ತಿಂಗಳೊಳಗೆ ಮಳೆ ನೀರನ್ನು ಬಿದ್ದಲ್ಲಿಯೇ ಇಂಗಿಸಲು ಯೋಜನೆ ರೂಪಿಸಿದ್ದು ತಕ್ಷಣದಿಂದ ಅನುಷ್ಠಾನಗೊಳಿಸಲು ಸೂಚನೆ ನೀಡಲಾಗಿದೆ ಎಂದರು.
ಮಳೆಗಾಲಕ್ಕಿಂತ ಪೂರ್ವದಲ್ಲಿಯೇ ಪ್ರತಿ ಗ್ರಾಮಗಳಲ್ಲಿ ಕೆರೆಗಳ ರಿಪೇರಿ, ಪ್ರತಿ ದೇವಸ್ಥಾನದ ಕಲ್ಯಾಣಿಗಳ ಸ್ವಚ್ಛತಾ ಕಾರ್ಯ, ಬೋರ್‌ವೆಲ್ ರೀಚಾರ್ಜ್ ಮೊದಲಾದ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕು. ಪ್ರತಿಯೊಂದು ಗ್ರಾಪಂ ವ್ಯಾಪ್ತಿಯಲ್ಲಿ ಕಾಮಗಾರಿಗಳನ್ನು ಗುರುತಿಸಿ ಅನುಷ್ಠಾನಗೊಳಿಸಬೇಕು. ನೆಲಕ್ಕೆ ಬಿದ್ದ ನೀರು ಸುಮ್ಮನೆ ಹರಿದು ಹೋಗಲು ಬಿಡದೆ ಆದಷ್ಟು ನೆಲದಲ್ಲಿ ಇಂಗಿಸುವುದು ಈ ಯೋಜನೆಯ ಗುರಿಯಾಗಿದೆ ಎಂದು ಹೇಳಿದರು.
ಜಿಪಂ ಸಿಇಒ ಎಂ.ಎಲ್.ವೈಶಾಲಿ, ಸೂಡಾ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಕೆ.ಪಿ.ಪುರುಷೋತ್ತಮ್, ಯೋಜನೆ ಹಿರಿಯ ಅಧಿಕಾರಿ ಅಮರ್ ಸಕ್ಸೇನಾ ಇತರರಿದ್ದರು.