

ತರೀಕೆರೆ: ಅಮೃತ್ ಮಹಲ್ ಕಾವಲಿನಲ್ಲಿ ಜಾಗ ಗುರುತಿಸಿರುವುದರಿಂದ ಮಿನಿ ವಿಧಾನಸೌಧ ಸ್ಥಾಪನೆಗೆ ಕ್ಯಾಬಿನೆಟ್‌ನಲ್ಲಿ 10 ಕೋಟಿ ರೂ. ಅನುದಾನ ಅನುಮೋದನೆಗಾಗಿ ಇರಿಸಲಾಗಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ತಿಳಿಸಿದರು.
ಅಜ್ಜಂಪುರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಭಾನುವಾರ ನೂತನವಾಗಿ ನಿರ್ಮಿಸಿರುವ ಡಯಾಲಿಸಿಸ್ ಘಟಕ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಸದ್ಯ ಸ್ವಂತ ಕಟ್ಟಡದ ಕೊರತೆಯಿಂದ ಲಭ್ಯವಿರುವ ಕೊಠಡಿಗಳಲ್ಲೇ ವಿವಿಧ ಇಲಾಖೆ ಕಾರ್ಯಾರಂಭ ಮಾಡಿದೆ. ಈ ವರ್ಷವೇ ತಾಲೂಕು ಆಡಳಿತ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಚಾಲನೆ ನೀಡಿದ ಬಳಿಕ ಕೋರ್ಟ್, ವಿವಿಧ ಕಚೇರಿ ಆರಂಭಕ್ಕೆ ಯೋಜನೆ ರೂಪಿಸಲಾಗುವುದು ಎಂದರು.
ಕ್ಷೇತ್ರದ ಜನತೆಯ ಬಹುದಿನಗಳ ಬೇಡಿಕೆಯಂತೆ ಡಯಾಲಿಸಿಸ್ ಕೇಂದ್ರ ಸ್ಥಾಪಿಸಲಾಗಿದೆ. ಇದರಿಂದ ಶಿವಮೊಗ್ಗ ಇನ್ನಿತರ ಕಡೆ ಡಯಾಲಿಸಿಸ್‌ಗಾಗಿ ಹೋಗಬೇಕಿದ್ದ ರೋಗಿಗಳ ಅಲೆದಾಟ ತಪ್ಪಿದೆ. ದಿನಕ್ಕೆ 6 ರಿಂದ 7 ರೋಗಿಗಳು ಹೆಸರು ನೋಂದಾಯಿಸಿ ಉಚಿತ ಚಿಕಿತ್ಸೆ ಪಡೆದುಕೊಳ್ಳಬಹುದು ಎಂದು ಹೇಳಿದರು.
ಇದಕ್ಕಾಗಿ ಪ್ರತಿ ತಿಂಗಳು 2.50 ಲಕ್ಷ ರೂ. ಖರ್ಚಾಗಲಿದ್ದು ಸರ್ಕಾರವೇ ಈ ಮೊತ್ತ ಭರಿಸಲಿದೆ. ಹೆಚ್ಚು ರೋಗಿಗಳು ಡಯಾಲಿಸಿಸ್‌ಗೆ ಮುಂದಾದರೆ ಇನ್ನೆರಡು ಯಂತ್ರ ಅಳವಡಿಸುವ ವ್ಯವಸ್ಥೆ ಮಾಡಲಾಗುವುದು ಎಂದರು. ಕೆಪಿಸಿಸಿ ಸದಸ್ಯ ನಟರಾಜ್, ತಹಸೀಲ್ದಾರ್ ಶಿವಶರಣಪ್ಪ ಕಟ್ಟೋಳಿ, ತಾಲೂಕು ಆರೋಗ್ಯ ಅಧಿಕಾರಿ ಡಾ.ಬಿ.ಜಿ.ಚಂದ್ರಶೇಖರ್, ಬಗರ್‌ಹುಕುಂ ಸಮಿತಿ ಸದಸ್ಯ ಜೋಗಿ ಪ್ರಕಾಶ್, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎನ್.ದಯಾನಂದ್, ಪ್ರಮುಖರಾದ ತಿಪ್ಪೇಶ್, ಕೆ.ಆರ್.ಕುಮಾರ್ ಮತ್ತಿತರರಿದ್ದರು.