

ಸೊರಬ: ಕ್ಷೇತ್ರದ ಕಾಮಗಾರಿಗಳಿಗೆ ಅನುದಾನ ಬಿಡುಗಡೆಯಾಗಿದ್ದು, ಪ್ರತಿ ಗ್ರಾಮಗಳಲ್ಲಿ 2 ಕೋಟಿ ರೂ. ವೆಚ್ಚದ ಕೆಲಸ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಪಟ್ಟಣದ ಕೆಇಬಿ ಕಚೇರಿ ಬಳಿ 25 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಕ್ಷೇತ್ರದ ಅಭಿವೃದ್ಧಿಗೆ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಪ್ರವಾಸ ಮಾಡಿ ಸಮಸ್ಯೆ ಇತ್ಯರ್ಥಪಡಿಸಲಾಗುವುದು. ಪ್ರತಿ ಗ್ರಾಮಗಳಿಗೆ 92 ಯೋಜನೆಗಳ ಅಡಿಯಲ್ಲಿ 250 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಶಂಕುಸ್ಥಾಪನೆ ನೆರವೇರಿಸಲಾಗುವುದು. ಚಂದ್ರಗುತ್ತಿ ಹೋಬಳಿಯ 44 ಗ್ರಾಮಗಳ 3 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸಲು ವರದಾ ನದಿಗೆ ಬ್ಯಾರೇಜ್ ನಿರ್ಮಿಸಲು 53 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ತಿಳಿಸಿದರು.
ಹೆಚ್ಚುವರಿ ಅನುದಾನಕ್ಕೆ ಪ್ರಸ್ತಾವನೆ: ಕುಮಟ, ಕಡಮಡಿಗಿ ರಾಷ್ಟ್ರೀಯ ಹೆದ್ದಾರಿ-48 ಎಂದು ಕರೆಯಲ್ಪಡುವ ಸೊರಬ-ಶಿರಾಳಕೊಪ್ಪ ರಸ್ತೆ ಸಂಪೂರ್ಣ ಹಾಳಾಗಿದೆ. 10.56 ಕಿ.ಮೀ ಅಭಿವೃದ್ದಿಗೆ 25 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಇನ್ನೂ 4 ಕಿ.ಮೀ ರಸ್ತೆಗೆ ಹೆಚ್ಚುವರಿಯಾಗಿ 8 ಕೋಟಿ ರೂ. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರಸ್ತೆ ಅಗಲೀಕರಣ ಹಾಗೂ 14 ಸೇತುವೆಗಳ ನಿರ್ಮಾಣ ಕಾಮಗಾರಿಯನ್ನು 2025ರ ಜೂನ್ ಅಂತ್ಯದೊಳಗೆ ಪೂರ್ಣಗೊಳಿಸಿ, ರಸ್ತೆಯ ಎರಡು ಬದಿಯಲ್ಲಿ ಗಿಡಗಳನ್ನು ನೆಡಲು ಚಿಂತಿಸಲಾಗಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಶಾಶ್ವತ ಕುಡಿಯುವ ನೀರಿಗಾಗಿ 650 ಕೋಟಿ ರೂ. ವೆಚ್ಚದಲ್ಲಿ 355 ಗ್ರಾಮಗಳಿಗೆ ಶರಾವತಿ ನದಿಯಿಂದ ಪೂರೈಸಲು ನೀಲಿನಕ್ಷೆ ಸಿದ್ಧಪಡಿಸಲಾಗಿದೆ. ದಂಡಾವತಿ ಯೋಜನೆ ಬದಲಾಗಿ ಯಾರದ್ದೇ ಜಮೀನು, ಮನೆಗಳಿಗೆ ಹಾನಿಯಾಗದಂತೆ ಬ್ಯಾರೇಜ್ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು. ಈಗಾಗಲೆ 190 ಕೋಟಿ ರೂ. ಹಣ ಮೀಸಲಿದ್ದು, ಹೆಚ್ಚುವರಿ ಅನುದಾನ ತಂದು ಪೂರ್ಣಗೊಳಿಸಲಾಗುವುದು ಎಂದರು.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಜನತೆ ಒಪ್ಪಿಕೊಂಡಿದ್ದಾರೆ. ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಅರ್ಹ ಬಿಪಿಎಲ್ ಕಾರ್ಡ್‌ದಾರರಿಗೆ ಗ್ಯಾರಂಟಿ ಯೋಜನೆ ತಡೆಹಿಡಿಯುವುದಿಲ್ಲ. ಸರ್ಕಾರದ ಯೋಜನೆಯನ್ನು ಎಲ್ಲ ವರ್ಗದ ಜನರು ಪಕ್ಷಭೇದ ಮರೆತು ಒಪ್ಪಿಕೊಂಡಿರುವುದರಿಂದ ಮುಂದುವರಿಸಲಾಗುವುದು. ಮಧು ಬಂಗಾರಪ್ಪ ಜಿಲ್ಲಾ ಉಸ್ತುವಾರಿ ಸಚಿವ
ಪುರಸಭೆ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ ಮತ್ತಿತರ ಕಾಮಗಾರಿ ನಡೆಸಲು 17 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ರಾಜ್ಯದಲ್ಲಿನ ಕೆಪಿಎಸ್ ಶಾಲೆಗಳಿಗೆ ಎಡಿಬಿ ಬ್ಯಾಂಕಿನಿಂದ 2,500 ಕೋಟಿ ರೂ. ಬಿಡುಗಡೆಯಾಗಿದೆ. ತಾಲೂಕಿನ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಬಗರ್‌ಹುಕುಂ ಮಂಜೂರಾತಿಯಲ್ಲಿ ಅದ್ಯತೆ ನೀಡಲಾಗುವುದು. ಅರಣ್ಯ ಹಕ್ಕು ಕಾಯ್ದೆಯಡಿ ರೈತರಿಗೆ ಮಂಜೂರು ಮಾಡಲು ಸಾಕ್ಷಿ ಆಧಾರಗಳನ್ನು 25 ವರ್ಷಕ್ಕೆ ಪರಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಜೈಶೀಲಗೌಡ, ಸೊರಬ ಬ್ಲಾಕ್ ಅಧ್ಯಕ್ಷ ಡಿ.ಬಿ.ಅಣ್ಣಪ್ಪ, ಆನವಟ್ಟಿ ಬ್ಲಾಕ್ ಅಧ್ಯಕ್ಷ ಸದಾನಂದಗೌಡ ಬಿಳಗಲಿ, ಪ್ರಮುಖರಾದ ತಬಲಿ ಬಂಗಾರಪ್ಪ, ವಿಶಾಲಾಕ್ಷಿ, ಎಚ್.ಗಣಪತಿ, ಡಿ.ಎಂ.ಶೇಖರ್, ಕೆ.ಪಿ.ರುದ್ರಗೌಡ, ಪ್ರಸನ್ನಕುಮಾರ್, ಅತಿಕ್, ನಾಗರಾಜ್ ಚಿಕ್ಕಸವಿ, ಅಂಜಲಿ, ಸುರೇಶ್, ಕಲ್ಲಂಬಿ ಹಿರಿಯಣ್ಣ, ಶ್ರೀರಂಜನಿ, ಮಂಜುನಾಥ್ ತಲಗಡ್ಡೆ, ಮಂಜಣ್ಣ ನೇರಲಗಿ, ತಹಸೀಲ್ದಾರ್ ಮಂಜುಳಾ ಹೆಗಡಾಳ್, ಎಇಇ ಯಶೋಧರ್, ಮುರುಗೇಶ್, ಪರಶುರಾಮ್, ಕಿರಣ್ ಇತರರಿದ್ದರು.