

ಬೆಳಗಾವಿ: ಚುನಾವಣೆಯಲ್ಲಿ ಪರಾಭವಗೊಂಡ ಅಭ್ಯರ್ಥಿ ಹೆಸರಲ್ಲಿ ಅನುದಾನ ಬಿಡುಗಡೆ ಮಾಡುತ್ತಿರುವ ಸರ್ಕಾರದ ಕ್ರಮ ವಿಧಾನಸಭೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಯಿತು. ಈ ಸಂಪ್ರದಾಯ ಹಿಂದಿನಿಂದಲೂ ಇದೆ, ದಾಖಲೆ ಕೊಡಲು ಸಿದ್ಧ ಎಂದು ಸರ್ಕಾರ ಹೇಳಿದರೆ, ಈ ರೀತಿ ಅನುದಾನ ಕೊಡುವುದು ಸಂವಿಧಾನ ಬಾಹಿರ ಎಂದು ಪ್ರತಿಪಕ್ಷ ವಾದಿಸಿತು.
ಶೂನ್ಯವೇಳೆಯಲ್ಲಿ ಶೃಂಗೇರಿ ರಾಜೇಗೌಡ ವಿಷಯ ಪ್ರಸ್ತಾಪಿಸಿ ತಮ್ಮ ಕ್ಷೇತ್ರದಲ್ಲಿ ಮಾಜಿ ಶಾಸಕ ಜೀವರಾಜ್ ನೀಡುವ ಪ್ರಸ್ತಾವನೆಗೆ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿದ್ದು, ಆದೇಶದಲ್ಲಿ ಅವರ ಹೆಸರು ಹಾಕಲಾಗುತ್ತಿದೆ. ಸಂಸದರೊಂದಿಗೆ ಸೇರಿ ಗುದ್ದಲಿ ಪೂಜೆ ನೆರವೇರಿಸುತ್ತಿದ್ದು, ಕಳೆದ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗೆ ಅನುದಾನ ಕೊಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ರಾಜೇಗೌಡ ಮಾತಿಗೆ ಕುಣಿಗಲ್ ಶಾಸಕ ರಂಗನಾಥ್, ಯು.ಟಿ.ಖಾದರ್, ದಾಸರಹಳ್ಳಿ ಮಂಜುನಾಥ್, ಶಿವಲಿಂಗೇಗೌಡ ಸೇರಿ ಹಲವು ಶಾಸಕರು ದನಿಗೂಡಿಸಿದರು.
ಈ ವೇಳೆ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸೋತ ಅಭ್ಯರ್ಥಿ ಹೆಸರಲ್ಲಿ ಅನುದಾನ ಬಿಡುಗಡೆ ಮಾಡುವುದು ಕೆಟ್ಟ ಸಂಪ್ರದಾಯ, ಅದು ಯಾವುದೇ ಪಕ್ಷದ ಅಭ್ಯರ್ಥಿಯಾಗಿರಲಿ ಎಂದರು. ಸೋತವರ ಹೆಸರಿಗೆ ಅನುದಾನ ನೀಡಿ ನೀವು ಜನರ ಜತೆ ಹೋಗಿ ಕೆಲಸ ಮಾಡಿ ಎನ್ನುವುದು ಪ್ರಜಾಪ್ರಭುತ್ವ ವಿರೋಧಿ ಧೋರಣೆ ಎಂದು ಹೇಳಿದರು.
ಇದನ್ನು ಪ್ರತಿಷ್ಠೆ ಮಾಡಿಕೊಳ್ಳಬಾರದು, ಇದು ಮುಂದುವರೆಯಲೂಬಾರದು. ಸೋತವರು ಮತ್ತೆ ಗೆದ್ದು ಬಂದು ಜನರ ಜತೆ ನಿಂತು ಕೆಲಸ ಮಾಡಲಿ. ನಾನು ಮುಖ್ಯಮಂತ್ರಿಯಾಗಿರುವಾಗ ಈ ರೀತಿ ಸೋತವರಿಗೆ ಅನುದಾನ ನೀಡಿದ ನೆನಪಿಲ್ಲ ಎಂದರು. ಈ ವೇಳೆ ಈ ಹಿಂದೆಯೂ ಆಗಿದೆ, ನಾವು ಪ್ರತಿಪಕ್ಷದ ಸ್ಥಾನದಲ್ಲಿದ್ದಾಗ ಚರ್ಚೆ ಮಾಡಿದ ನೆನಪಿದೆ ಎಂದು ಸ್ಪೀಕರ್ ಕಾಗೇರಿ ಹೇಳಿದಾಗ, ನಿಮ್ಮ ಕ್ಷೇತ್ರದಲ್ಲಿ ಭೀಮಣ್ಣ ನಾಯ್್ಕ ಅವರಿಗೆ ಹಿಂದೆ ನಾನು ಅನುದಾನ ನೀಡಿದ್ದೆನಾ ಎಂದು ಸಿದ್ದರಾಮಯ್ಯ ಸ್ಪೀಕರ್ಗೆ ಪ್ರಶ್ನೆ ಮಾಡಿದರು.
ಸಂಸದೀಯ ವ್ಯವಸ್ಥೆಯಲ್ಲಿ ಈ ರೀತಿ ನಡವಳಿಕೆಗೆ ಅವಕಾಶ ಇಲ್ಲ. ಇದು ರಾಜೇಗೌಡರಿಗೆ ಮಾತ್ರವಲ್ಲ, ಖಾದರ್ ಸೇರಿ ಬಹಳಷ್ಟು ಜನರಿಗೆ ಅನ್ಯಾಯ ಆಗಿದೆ. ಮಾಧುಸ್ವಾಮಿ ಅವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದೆ ಎಂದು ಭಾವಿಸಿದ್ದೇನೆ, ಅವರು ಹಿರಿಯ ಸದಸ್ಯರು ಕೂಡ ಹೌದು. ಇದನ್ನು ಪ್ರಿವಿಲೇಜ್ ಕಮಿಟಿಗೆ ಕಳಿಸುವ ಬದಲು ಇನ್ನು ಮುಂದೆ ಈ ತಪ್ಪು ಆಗುವುದಿಲ್ಲ ಎಂದು ಸರ್ಕಾರ ಉತ್ತರ ನೀಡಲಿ ಎಂದು ಆಗ್ರಹಿಸಿದರು. ಈಗಾಗಲೆ ಸೋತ ಅಭ್ಯರ್ಥಿಗಳ ಹೆಸರಿನಲ್ಲಿ ನೀಡಿರುವ ಅನುದಾನ ವಾಪಾಸ್ ಪಡೆಯಿರಿ. ನೀವು ಅನುದಾನ ನೀಡುತ್ತೀರಿ ಎಂಬ ನಿರೀಕ್ಷೆ ಕೂಡ ನಮಗೆ ಇಲ್ಲ. ನೀವು ಅನುದಾನವನ್ನೇ ಕೊಡದಿದ್ದರೂ ಪರವಾಗಿಲ್ಲ ಆದರೆ ಈ ರೀತಿ ಶಾಸಕರಿಗೆ ಅಗೌರವ ಮಾಡಬೇಡಿ ಎಂದ ಅವರು ಶಾಸಕರ ಹಕ್ಕುಗಳನ್ನು ರಕ್ಷಣೆ ಮಾಡುವುದು ಸಭಾಧ್ಯಕ್ಷರ ಕರ್ತವ್ಯ. ಹಿಂದೆ ಹೀಗೆ ಆಗಿತ್ತು ಎಂದು ಹೇಳುವುದು ಸರಿಯಲ್ಲ, ಈ ಸಂಪ್ರದಾಯ ಇಲ್ಲಿಗೆ ಕೊನೆಯಾಗಬೇಕು ಎಂದು ಕುಟುಕಿದರು. ಸೋತ ಅಭ್ಯರ್ಥಿಗೆ ಮಾತ್ರವಲ್ಲ, ಮುಂದೆ ಅಭ್ಯರ್ಥಿಯಾಗುವವರೆಗೂ ಅನುದಾನ ಕೊಡುವ ಪರಂಪರೆ ಆರಂಭವಾಗಿದೆ ಎಂದು ಶಿವಲಿಂಗೇಗೌಡ ತಮ್ಮ ಕ್ಷೇತ್ರದ ಅನುಭವ ಹಂಚಿಕೊಂಡರು.
ಬಳಿಕ ಇಂತಹ ಬೆಳವಣಿಗೆಗೆ ಕಡಿವಾಣ ಹಾಕಲು ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳೋಣ ಎಂದು ಸ್ಪೀಕರ್ ತಿಳಿಸಿದರು. ಆದರೆ, ಈ ಉತ್ತರದಿಂದ ತೃಪ್ತರಾಗದ ರಾಜೇಗೌಡ ಸ್ಪೀಕರ್ ಪೀಠದ ಮುಂದೆ ಸಂಜೆ ಐದು ಗಂಟೆವರೆಗೂ ಧರಣಿ ನಡೆಸಿದರು.
ಹಾಲಿ ಶಾಸಕರಿಗೆ 100 ಕೋಟಿ ರೂ. ಅನುದಾನ ಕೊಟ್ಟು, ಅದೇ ಕ್ಷೇತ್ರದಲ್ಲಿ ಸೋತ ಅಭ್ಯರ್ಥಿಗೆ ಇನ್ನು 100 ಕೋಟಿ ರೂ. ಅನುದಾನ ಬಿಡುಗಡೆ ಮಾಡಲು ಅವಕಾಶ ಇದೆಯಾ? ಸೋತ ಅಭ್ಯರ್ಥಿ ಬಂದು ಬಿಲ್ಗಳ ಮೇಲೆ ಚರ್ಚೆ ಮಾಡುತ್ತಾರೆಯೇ? ಸೋತ ಅಭ್ಯರ್ಥಿಗಳು ಬಜೆಟ್ ಅನ್ನು ಪಾಸ್ ಮಾಡಿ ಕೊಡುತ್ತಾರೆಯೇ? | ಸಿದ್ದರಾಮಯ್ಯ ಪ್ರತಿಪಕ್ಷದ ನಾಯಕ
ಬೊಮ್ಮಾಯಿ ಗರಂ: ಈ ರೀತಿ ಅನುದಾನ ನೀಡುವುದನ್ನು ಸರ್ಕಾರದ ಅನುದಾನ ಎಂದು ಆದೇಶ ಮಾಡುತ್ತೇವೆ. ಕೊಟ್ಟ ಅನುದಾನ ವಾಪಸ್ ಪಡೆಯುತ್ತೇವೆ ಆಗಬಹುದೇ ಎಂದು ಬಸವರಾಜ ಬೊಮ್ಮಾಯಿ ಗರಂ ಆದ ಪ್ರಸಂಗ ನಡೆಯಿತು. ಈ ವೇಳೆ ಎಚ್ಚೆತ್ತ ಸಿದ್ದರಾಮಯ್ಯ, ಹಾಗೆ ಮಾಡಬೇಡಿ ಕ್ಷೇತ್ರದಲ್ಲಿ ಬೇರೆ ಸಂದೇಶ ಹೋಗಲಿದೆ ಎಂದು ಮುಖ್ಯಮಂತ್ರಿಯವರನ್ನು ಸಮಾಧಾನಪಡಿಸಿ, ರಾಜೇಗೌಡನರನ್ನು ಧರಣಿ ಕೈಬಿಡುವಂತೆ ತಾಕೀತು ಮಾಡಿದರು. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ನನ್ನ ಕ್ಷೇತ್ರದಲ್ಲಿ ಇದೇ ರೀತಿ ಮಾಡಿದ್ದರು, ಆದರೆ ನಾನದನ್ನು ಬೇರೆ ರೀತಿ ಸ್ವೀಕರಿಸಿದೆ. ಕ್ಷೇತ್ರಕ್ಕೆ ಹೆಚ್ಚು ಅನುದಾನ ಸಿಕ್ಕಿದಂತಾಯಿತು ಎಂದು ಭಾವಿಸಿದೆ ಎಂದರು.
ಸಹಕಾರಿಗಳಿಗಾಗಿ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯಡಿ ಸದಸ್ಯತ್ವ ನೋಂದಣಿಗೆ ಡಿ.31ರವರೆಗೆ ಕಾಲಾವಕಾಶ ನೀಡಿದ್ದು, ಅವಧಿ ವಿಸ್ತರಣೆ ಯೋಚನೆ ಸದ್ಯಕ್ಕಿಲ್ಲ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ವಿಧಾನ ಪರಿಷತ್ನಲ್ಲಿ ಮಂಗಳವಾರ ಸ್ಪಷ್ಟಪಡಿಸಿದರು. ಪ್ರಶ್ನೋತ್ತರ ವೇಳೆ ಸಿ.ಎನ್.ಮಂಜೇಗೌಡ ಪ್ರಶ್ನೆಗೆ ಉತ್ತರಿಸಿ, ಯೋಜನೆಯಡಿ 30 ಲಕ್ಷ ಸದಸ್ಯತ್ವ ನೋಂದಣಿ ಗುರಿಯಿದ್ದು, ಸೋಮವಾರ (ಡಿ.26)ದ ವರೆಗೆ 19.67 ಲಕ್ಷ ಸದಸ್ಯರ ಹೆಸರು ನೋಂದಣಿಯಾಗಿದೆ. ನಿಗದಿತ ಅವಧಿಯೊಳಗೆ ಗುರಿ ಸಾಧಿಸುವ ವಿಶ್ವಾಸವಿದೆ. ಇದು ಸಾಧ್ಯವಾಗದಿದ್ದರೆ ಇದಕ್ಕಾಗಿ ರಚಿತ ಪ್ರತ್ಯೇಕ ಸಮಿತಿ ಅವಧಿ ವಿಸ್ತರಣೆ ಬಗ್ಗೆ ರ್ಚಚಿಸಿ ನಿರ್ಧರಿಸಲಿದ್ದು, ಸರ್ಕಾರ ಸೂಕ್ತ ನಿರ್ದೇಶನ ನೀಡಲಿದೆ ಎಂದರು.
ಫ್ರೂಟ್ಸ್ ಆಪ್: ರೈತರಿಗೆ ಶೂನ್ಯ ಬಡ್ಡಿ ದರದ ಸಾಲ ವಿತರಣೆಯನ್ನು ಫ್ರೂಟ್ಸ್ ಆಪ್ ಮೂಲಕ ನಿರ್ವಹಿಸುತ್ತಿದ್ದು, ಅರ್ಹರಿಗೆ ಸಕಾಲಕ್ಕೆ ತಲುಪಿಸುವುದು ಈ ಆಪ್ ಬಳಕೆ ಉದ್ದೇಶವೆಂದು ಎಸ್.ಟಿ.ಸೋಮಶೇಖರ್ ಹೇಳಿದರು. ಬಿಜೆಪಿಯ ಛಲವಾದಿ ನಾರಾಯಣಸ್ವಾಮಿ ಪ್ರಶ್ನೆಗೆ ಉತ್ತರಿಸಿ, ಪ್ರಸಕ್ತ ವರ್ಷ ಮೂರು ಲಕ್ಷ ಹೊಸ ರೈತರು ಸೇರಿ 33 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದ ಸಾಲ ವಿತರಣೆಗೆ ಗುರಿ ನಿಗದಿಪಡಿಸಿದ್ದು, 24 ಸಾವಿರ ಕೋಟಿ ರೂ. ಮೀಸಲಿರಿಸಲಾಗಿದೆ ಎಂದರು.
ವನ್ಯಪ್ರಾಣಿಗಳ ದಾಳಿಯಿಂದ ಮಾನವ ಪ್ರಾಣ ಹಾನಿಯಾದ ಸಂದರ್ಭದಲ್ಲಿ ಕಾನೂನುಬದ್ಧ ವಾರಸುದಾರರಿಗೆ 15 ಲಕ್ಷ ರೂ.ವರೆಗೆ ಪರಿಹಾರ ನೀಡಲಾಗುತ್ತದೆ. ಇದನ್ನು ಆದೇಶ ಜಾರಿಗೆ ಬಂದ ಹಿಂದಿನ ಘಟನೆಗೆ ಅನ್ವಯಿಸುವುದು ಕಷ್ಟವಾಗಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ವಿಧಾನಸಭೆಯಲ್ಲಿ ತಿಳಿಸಿದರು. ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ನ ಎಂ.ಅಶ್ವಿನ್ ಕುಮಾರ್ ಪ್ರಶ್ನೆಗೆ ಸಿಎಂ ಪರವಾಗಿ ಉತ್ತರಿಸಿ ಆರ್.ಅಶೋಕ್, ವನ್ಯಪ್ರಾಣಿಗಳ ದಾಳಿಯಿಂದ ಉಂಟಾದ ಮಾನವ ಪ್ರಾಣ ಹಾನಿಯಾದ ಪ್ರಕರಣಗಳಲ್ಲಿ ಕುಟುಂಬಗಳಿಗೆ 7.50 ಲಕ್ಷ ರೂ. ಪರಿಹಾರ ನೀಡಲಾಗುತ್ತಿತ್ತು. ಡಿ.15ರಂದು ಪರಿಷ್ಕೃತ ಆದೇಶ ಹೊರಡಿಸಿದ್ದು, 15 ಲಕ್ಷ ರೂ.ಗೆ ಪರಿಹಾರ ಹೆಚ್ಚಳ ಮಾಡಲಾಗಿದೆ ಎಂದರು.
ಈ ಮುನ್ನ ಮಾತನಾಡಿದ ಅಶ್ವಿನ್, ಕಾಡು ಪ್ರಾಣಿಯಿಂದ ಇತ್ತೀಚೆಗೆ ಮೃತರಾದವರ ಕುಟುಂಬಕ್ಕೆ ಪರಿಷ್ಕೃತ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು. ಆದರೆ, ಈ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲವಾದರೂ ಸಿಎಂ ಜತೆ ಒಮ್ಮೆ ಚರ್ಚೆ ಮಾಡುವುದಾಗಿ ಸಚಿವರು ಭರವಸೆ ನೀಡಿದರು. ಪರಿಷ್ಕೃತ ಆದೇಶದ ಪ್ರಕಾರ ತಕ್ಷಣಕ್ಕೆ 5 ಲಕ್ಷ ರೂ. ಹಾಗೂ ಮರಣೋತ್ತರ ಪರೀಕ್ಷೆ ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಳು ಸಲ್ಲಿಕೆಯಾದ ಬಳಿಕ ಉಳಿದ 10 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ವಿವರಿಸಿದರು.
ನಿರಂತರ ಜ್ಯೋತಿ ಯೋಜನೆಯಡಿ ಆಗಿರುವ ಲೋಪದೋಷಗಳು ಹಾಗೂ ಅವ್ಯವಹಾರಗಳ ಬಗ್ಗೆ ಲೋಕಾಯುಕ್ತ ತನಿಖೆಗೆ ನೀಡಲು ಸಿದ್ಧ ಎಂದು ಸರ್ಕಾರ ಘೋಷಿಸಿದೆ. ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಕೆ.ಎಸ್.ಈಶ್ವರಪ್ಪ, ನಿರಂತರ ಜ್ಯೋತಿಯಲ್ಲಿ ಬಹಳ ವ್ಯವಸ್ಥಿತವಾಗಿ ಅವ್ಯವಹಾರ ನಡೆದಿದೆ. ಅದನ್ನು ಅಧಿಕಾರಿಗಳು ಮುಚ್ಚಿಹಾಕುವ ಪ್ರಯತ್ನ ಮಾಡಿದ್ದಾರೆ. ಸದನ ಸಮಿತಿ ಮಾಡಿ 15 ದಿನ ಸಮಯ ಕೊಟ್ಟರೆ ಎಷ್ಟು ಲೂಟಿ ಆಗಿದೆ ಎಂಬುದು ಗಮನಕ್ಕೆ ಬರಲಿದೆ ಎಂದರು. ಸಚಿವರು ತನಿಖೆಗಾಗಿ ಸಮಿತಿ ರಚಿಸಿ ಜವಾಬ್ದಾರಿ ನೀಡಿ ಒಂದು ತಿಂಗಳಲ್ಲಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ಸಮಿತಿ ಮಾಡಿ 9 ತಿಂಗಳು ಕಳೆದಿದೆ. ಈವರೆಗೆ ವರದಿ ಬಂದಿಲ್ಲ. ಎಲ್ಲ ಫೀಡರ್ 42-45 ಕೋಟಿ ರೂ. ವ್ಯತ್ಯಾಸ ಆಗಿರುವ ಸಾಧ್ಯತೆ ಇದೆ. ಅಧಿಕಾರಿಗಳು ಗುತ್ತಿಗೆದಾರರ ಹೊಂದಾಣಿಕೆಯಲ್ಲಿ ನಡೆದಿದ್ದು, ಸಚಿವರು ಮುಚ್ಚಿಹಾಕಲು ಅವಕಾಶ ಕೊಡಬಾರದು ಎಂದು ಹೇಳಿದರು. ಬಳಿಕ ಉತ್ತರ ನೀಡಿದ ಇಂಧನ ಸಚಿವ ಸುನಿಲ್ ಕುಮಾರ್, 2015-16ರ ನಿರಂತರ ಜ್ಯೋತಿ ಯೋಜನೆ ಅವ್ಯವಹಾರವಾಗಿದೆ ಎಂದು ಈಶ್ವರಪ್ಪನವರು ಗಮನಕ್ಕೆ ತಂದಿದ್ದು, ಮೇಲ್ನೋಟಕ್ಕೆ ಗಮನಿಸಿದಾಗ ಅವ್ಯವಹಾರ ಆಗಿದೆ ಎಂಬುದು ಗೊತ್ತಾಗಿ ಇಬ್ಬರು ಅಧಿಕಾರಿಗಳನ್ನು ತಕ್ಷಣವೇ ಅಮಾನತು ಮಾಡಲಾಗಿತ್ತು ಎಂದರು.
ತುರುವೇಕರೆ, ದಾವಣಗೆರೆ, ಶಿವಮೊಗ್ಗದಲ್ಲಿ ಇಂತಹ ಪ್ರಕರಣ ನಡೆದಿದ್ದು, ಒಂದು ವಾರದಲ್ಲಿ ತನಿಖೆ ಮಾಡಿ ವರದಿ ಕೊಡಲು ಸೂಚಿಸಿದ್ದೇನೆ. ಲೋಕಾಯುಕ್ತಕ್ಕೆ ಕೊಡಲು ಸಹ ಸಿದ್ಧ. ಒಂದು ವಾರದಲ್ಲಿ ವರದಿ ತರಿಸಿಕೊಂಡು ಅದರಲ್ಲಿನ ಸಂಗತಿ ನೋಡಿ ಸಮಾಧಾನ ಆಗಿಲ್ಲ ಎಂದಾದರೆ ಯಾವ ತನಿಖೆ ಆಗಬೇಕೆಂದು ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು. ಈ ಪ್ರಕರಣದಲ್ಲಿ ಭಾಗಿಯಾದ ಅಧಿಕಾರಿಗಳು, ಗುತ್ತಿಗೆದಾರರನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಯಾವುದೇ ತನಿಖೆ ಮಾಡಲು ಮುಕ್ತ ಅವಕಾಶ ಇದೆ ಎಂದು ಸ್ಪಷ್ಟಪಡಿಸಿದರು.
ಆರೋಗ್ಯ ಇಲಾಖೆ ಅಪೂರ್ಣ ಮಾಹಿತಿ ನೀಡುವ ಹಾಗೂ ತಪು್ಪದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದೆ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಆರೋಗ್ಯ ಕವಚ ಯೋಜನೆಗೆ ಸಂಬಂಧಿಸಿದಂತೆ ಕೃಷ್ಣ ಬೈರೇಗೌಡ ಅಧ್ಯಕ್ಷತೆಯ ಪಿಎಸಿ ವರದಿಯನ್ನು ವಿಧಾನಮಂಡಲದಲ್ಲಿ ಮಂಗಳವಾರ ಸಲ್ಲಿಸಿತು. ಆರೋಗ್ಯ ಕವಚ ಯೋಜನೆ ಪ್ರಾರಂಭಿಸಿರುವ ಷರತ್ತುಗಳು ಉಲ್ಲಂಘನೆಯಾಗಿರುವುದು ಸಿಎಜಿಯಲ್ಲಿಯೂ ಪ್ರಸ್ತಾಪವಾಗಿದೆ. ತಪು್ಪಗಳನ್ನು ಇಲಾಖೆ ಒಪ್ಪಿಕೊಂಡಿದ್ದರೂ ಸುಧಾರಣೆ ಕ್ರಮಗಳನ್ನು ಕೈಗೊಂಡಿಲ್ಲವೆಂದು ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.
ವಿಧಾನ ಮಂಡಲದ ಚಳಿಗಾಲದ ಅಧಿವೇಶನ ಮುಗಿದ ನಂತರ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯ ಕಚೇರಿಯು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರವಾಗಲಿದೆ ಎಂದು ಜವಳಿ ಹಾಗೂ ಸಕ್ಕರೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ತಿಳಿಸಿದರು. ವಿಧಾನ ಪರಿಷತ್ನಲ್ಲಿ ಜೆಡಿಎಸ್ನ ಟಿ.ಎ.ಶರವಣ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿರುವ ಒಟ್ಟು 73 ಸಕ್ಕರೆ ಕಾರ್ಖಾನೆಗಳಲ್ಲಿ 60 ಉತ್ತರ ಕರ್ನಾಟಕದಲ್ಲಿವೆ. ಸುವರ್ಣ ಸೌಧಕ್ಕೆ ಕಚೇರಿ ಸ್ಥಳಾಂತರದಿಂದ ಅನುಕೂಲವಾಗಲಿದೆ. ಆದರೂ ಬೆಂಗಳೂರಿನಲ್ಲಿ ಒಬ್ಬ ಅಧಿಕಾರಿ ಇರಲಿದ್ದು, ದಕ್ಷಿಣ ಕರ್ನಾಟಕದ ಸಕ್ಕರೆ ಕಾರ್ಖಾನೆಗಳಿಗೆ ಸ್ಪಂದಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು.