

ಬೆಂಗಳೂರು: ಗ್ಯಾರಂಟಿ ಯೋಜನೆಗಳಿಂದ ಕ್ಷೇತ್ರಕ್ಕೆ ಹೆಚ್ಚು ಅನುದಾನ ಸಿಗುತ್ತಿಲ್ಲ ಎಂಬ ಅಭಿಪ್ರಾಯ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಬಲಗೊಳ್ಳುತ್ತಲೇ ಇದ್ದು, ಇದೀಗ ಶಾಸಕ ಗವಿಯಪ್ಪ ಅಭಿಪ್ರಾಯ ಚರ್ಚೆಗೊಳಗಾಗಿದೆ.
ಗವಿಯಪ್ಪ ಸೇರಿದಂತೆ ತಮ್ಮದೇ ಪಕ್ಷದ ಶಾಸಕರ ಬಹಿರಂಗ ಹೇಳಿಕೆಗಳಿಗೆ ಡಿ.ಕೆ ಶಿವಕುಮಾರ್ ಅಸಮಾಧಾನ ಹೊರಹಾಕಿದ್ದು, ಎಲ್ಲಾ ಶಾಸಕರಿಗೂ ಅನುದಾನವನ್ನ ನೀಡಿದ್ದೇವೆ. ಗವಿಯಪ್ಪಗೆ ಸರಿಯಾದ ಮಾಹಿತಿ ಇಲ್ಲಾ ಅನಿಸುತ್ತಿದೆ. ಅಭಿವೃದ್ಧಿಗೆ ಅನುದಾನ ನೀಡುತ್ತಿದ್ದೇವೆ. ಗವಿಯಪ್ಪ ಜತೆಯೂ ಮಾತನ್ನಾಡುತ್ತೇನೆ. ಯಾರೇ ಹೇಳಿಕೆಗಳನ್ನ ನೀಡಿದರೂ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಇದೇ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿರುವ ಸಚಿವ ಸತೀಶ್ ಜಾರಕಿಹೊಳಿ, ಬಜೆಟ್‌ನಲ್ಲಿ ಏನಿದೆಯೋ ಅದನ್ನ ಕೊಡುತ್ತಿದ್ದೇವೆ. ಅದರ ಹೊರತಾಗಿ ಹೆಚ್ಚಿಗೆ ಏನನ್ನೂ ಕೊಡುತ್ತಿಲ್ಲ. ಹೆಚ್ಚಿಗೆ ಬೇಡಿಕೆ ಇಟ್ಟರೆ ಕೊಡಲು ಸಾಧ್ಯವಿಲ್ಲ ಎಂದರು.
ಗ್ಯಾರಂಟಿ ಬಂದ್ ಮಾಡುವುದಿಲ್ಲ ಎಂದು ಹೇಳಿದ್ದೇವೆ. ಗ್ಯಾರಂಟಿ ಯೋಜನೆ ಇಟ್ಟುಕೊಂಡೇ ಅಭಿವೃದ್ಧಿ ಮಾಡಲು ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದರು.