ಮಗಳಿಗಿಂತ ಕಿರಿಯ ವಯಸ್ಸಿನ ಬಾಲೆಯೊಂದಿಗೆ ತಾತಾ ಪರಾರಿ, ಗುಜರಾತ್​ನಲ್ಲೊಂದು ಹೈಡ್ರಾಮಾ!

gujarat high court
Published on

ಅಹಮದಾಬಾದ್​: ಮದುವೆಯಾಗಿ ಇತ್ತೀಚೆಗೆ ಮಗುವಿಗೆ ಜನ್ಮ ನೀಡಿರುವ ತನ್ನ ಪುತ್ರಿಗಿಂತಲೂ ಕಡಿಮೆ ವಯಸ್ಸಿನ ಯುವತಿಯೊಂದಿಗೆ ವ್ಯಕ್ತಿಯೊಬ್ಬರು ಪರಾರಿಯಾಗಿದ್ದಾರೆ.

ಗುಜರಾತ್​ನ ಪಠಾಣ್​ ಜಿಲ್ಲೆಯ ಸಿಧ್​ಪುರ್​ ತಾಲೂಕಿನ ಗ್ರಾಮವೊಂದರ ನಿವಾಸಿ 40 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಶೋವಾಂಜಿ ಠಾಕೂರ್​ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಇವರು ಜೂನ್​ 2ರಂದು ಯುವತಿಯನ್ನು ಅಪಹರಿಸಿಕೊಂಡು ಹೋಗಿರುವುದಾಗಿ ಆರೋಪಿಸಲಾಗಿದೆ.

ಯುವತಿಯ ಸಹೋದರ ಈ ಬಗ್ಗೆ ಪೊಲೀಸ್​ ಠಾಣೆಗೆ ದೂರು ಕೊಟ್ಟರೆ, ಪೊಲೀಸರು ದೂರು ದಾಖಲಿಸಿಕೊಳ್ಳಲು ವಿಳಂಬಿಸಿದರು ಎನ್ನಲಾಗಿದೆ. ಮೂರು ದಿನಗಳ ಬಳಿಕ ದೂರು ದಾಖಲಿಸಿಕೊಂಡರೂ ಶೋವಾಂಜಿ ಠಾಕೂರ್​ ಹೆಸರನ್ನು ಎಫ್​ಐಆರ್​ನಲ್ಲಿ ಪ್ರಸ್ತಾಪಿಸಿಲ್ಲ ಎಂದು ಹೇಳಲಾಗಿದೆ.

ಈ ಹಿನ್ನೆಲೆಯಲ್ಲಿ ಆತ ಗುಜರಾತ್​ ಹೈಕೋರ್ಟ್​ನಲ್ಲಿ ಹೇಬಿಯಸ್​ ಕಾರ್ಪಸ್​ ಅರ್ಜಿ ಸಲ್ಲಿಸಿದ್ದಾನೆ. ಜೂ.22ರ ಹೈಕೋರ್ಟ್​ ವಿಚಾರಣೆಯ ವೇಳೆ ಅರ್ಜಿದಾರರ ಪರ ವಕೀಲರು, ಠಾಕೂರ್​ಗೆ ಮದುವೆಯಾಗಿದೆ. ಆತನ ಹಿರಿಯ ಮಗಳಿಗೆ ಮದುವೆ ಮಾಡಲಾಗಿದ್ದು, ಆಕೆಗೆ ಒಂದು ಮಗು ಕೂಡ ಇದೆ. ಕಾಣೆಯಾಗಿರುವ ಬಾಲಕಿ ಆ ಮಹಿಳೆಗಿಂತ ಕಡಿಮೆ ವಯಸ್ಸಿನವಳು ಎಂದು ನ್ಯಾಯಪೀಠಕ್ಕೆ ತಿಳಿಸಿದರು ಎನ್ನಲಾಗಿದೆ.

ಬಾಲಕಿಯ ಪ್ರಾಣ ಅಪಾಯದಲ್ಲಿರಬಹುದು. ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿರುವ ಸಾಧ್ಯತೆ ಇದೆ. ಆದ್ದರಿಂದ ಆಕೆಯನ್ನು ತಕ್ಷಣವೇ ಠಾಕೂರ್​ ಬಂಧನದಿಂದ ಮುಕ್ತಿಗೊಳಿಸಿ, ಕೋರ್ಟ್​ಗೆ ಹಾಜರುಪಡಿಸುವಂತೆ ಪೊಲೀಸರಿಗೆ ಸೂಚಿಸುವಂತೆ ಮನವಿ ಮಾಡಿಕೊಂಡರು ಎನ್ನಲಾಗಿದೆ.

ಇದನ್ನು ಆಧರಿಸಿ ನ್ಯಾಯಾಲಯ ಜೂ.29ರೊಳಗೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸೂಚಿಸಿದರು. ಆದರೆ, ಮುಂದಿನ ವಿಚಾರಣೆಯ ವೇಳೆ ಯುವತಿಯನ್ನು ಹುಡುಕಲು ಇನ್ನಷ್ಟು ಸಮಯ ಬೇಕಾಗುತ್ತದೆ ಎಂದು ಪೊಲಿಸರು ನ್ಯಾಯಪೀಠಕ್ಕೆ ಮನವಿ ಮಾಡಿಕೊಂಡರು. ಈ ಹಿನ್ನೆಲೆಯಲ್ಲಿ ಯುವತಿಯನ್ನು ಪತ್ತೆ ಮಾಡಲು ಜುಲೈ 13ರವರೆಗೆ ನ್ಯಾಯಪೀಠ ಕಾಲಾವಕಾಶ ನೀಡಿದೆ. ಅಲ್ಲದೆ, ಹತ್ತಿರದ ಕೋರ್ಟ್​ನಿಂದ ವಿಡಿಯೋ ಕಾನ್ಫರೆನ್ಸ್​ ಮೂಲಕ ಯುವತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆಯೂ ಸೂಚಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net