

ಬೆಂಗಳೂರು: ಅಜ್ಜಿಯ ನಿಂದನೆಯಿಂದ ಬೇಸತ್ತಿದ್ದ ಮೊಮ್ಮಗಳು ಸ್ವಂತ ಮನೆಯಲ್ಲೇ ಚಿನ್ನಾಭರಣ ಕಳವು ಮಾಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಪ್ರಾಪ್ತರನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪರಪ್ಪನ ಅಗ್ರಹಾರ ಸಮೀಪದ ಚನ್ನಕೇಶವನಗರ ನಿವಾಸಿ ರೇವತಿ ಎಂಬುವರ ಮನೆಯಲ್ಲಿ ಕಳವು ನಡೆದಿತ್ತು. ಹೂವಿನ ವ್ಯಾಪಾರ ಮಾಡುವ ರೇವತಿ ಅವರು, ಒಬ್ಬಂಟಿಯಾಗಿ ವಾಸವಾಗಿದ್ದಾರೆ. ಅವರ ಮೂವರು ಮಕ್ಕಳು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಮೂವರು ಮಕ್ಕಳ ಪೈಕಿ ಮಣಿ ಎಂಬುವರ ಅಪ್ರಾಪ್ತ ಮಗಳು ಕೆಲ ದಿನಗಳ ಹಿಂದೆ ಅಜ್ಜಿ ರೇವತಿಯ ಎಟಿಎಂ ಕಾರ್ಡ್ ಕದ್ದು ಹಣ ಡ್ರಾ ಮಾಡಿಕೊಂಡಿದ್ದಳು. ಈ ವಿಚಾರಕ್ಕೆ ರೇವತಿ, ಸದಾ ಮೊಮ್ಮಗಳಿಗೆ ಬೈಯ್ಯುತ್ತಿದ್ದರು. ಈ ನಿಂದನೆಯಿಂದ ಅವಮಾನಿತಳಾಗಿದ್ದ ಮೊಮ್ಮಗಳು ಅಜ್ಜಿಗೆ ತಕ್ಕ ಪಾಠ ಕಲಿಸಲು ನಿರ್ಧರಿಸಿ, ಇಬ್ಬರು ಸಹಪಾಠಿಗಳ ಜತೆ ಸೇರಿ ತನ್ನ ಮನೆಯಲ್ಲೇ ಚಿನ್ನಾಭರಣ ಕಳವು ಮಾಡಿಸಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿವೇಶನ ಖರೀದಿಸುವ ಪ್ರಯತ್ನದಲ್ಲಿದ್ದ ಮಣಿ, ಅದಕ್ಕೆ ಹಣ ಹೊಂದಿಸುತ್ತಿದ್ದರು. ತಮ್ಮ ಬಳಿಯಿದ್ದ ಚಿನ್ನದ ಆಭರಣಗಳನ್ನು ತಂದು ತಾಯಿ ರೇವತಿಯವರ ಮನೆಯಲ್ಲಿ ಇಟ್ಟಿದ್ದರು. ಈ ವಿಚಾರ ತಿಳಿದಿದ್ದ ಮಣಿಯ ಮಗಳು ಆ ಆಭರಣಗಳನ್ನು ಕಳವು ಮಾಡಿಸಿ ಅಜ್ಜಿಗೆ ಪಾಠ ಕಲಿಸಬೇಕೆಂದು ನಿರ್ಧರಿಸಿದ್ದಳು. ಸ್ನೇಹಿತೆ ಮತ್ತು ಸ್ನೇಹಿತನ ಜತೆ ಸೇರಿ ಕಳುವು ಮಾಡುವ ಸಂಚು ರೂಪಿಸಿದ್ದಳು.
ಬುರ್ಖಾ ಧರಿಸಿ ಬಂದು ಕೃತ್ಯ:
ರೇವತಿ ಅವರು ಪ್ರತಿನಿತ್ಯದಂತೆ ಮೇ ೨೭ರಂದು ಮನೆಗೆ ಬೀಗ ಹಾಕಿ ಕೀಯನ್ನು ಬಾಗಿಲ ಪಕ್ಕದ ಶೂ ಬಾಕ್ಸ್‌ನಲ್ಲಿ ಇಟ್ಟು ವ್ಯಾಪಾರಕ್ಕೆ ಹೋಗಿದ್ದರು. ಈ ಬಗ್ಗೆ ಮಣಿಯ ಮಗಳು ಸ್ನೇಹಿತನಿಗೆ ಸುಳಿವು ಕೊಟ್ಟಿದ್ದಳು. ಇದಕ್ಕೂ ಮೊದಲೇ ಕಳವು ಕೃತ್ಯಗಾಗಿಯೇ ಆ ಸ್ನೇಹಿತನು ಪರಿಚಯದ ಮುಸ್ಲಿಂ ವ್ಯಕ್ತಿಯಿಂದ ಬುರ್ಖಾ ಪಡೆದಿದ್ದ. ಆತ ಆ ಬುರ್ಖಾ ಧರಿಸಿ ಹೋಗಿ ಕೈಚಳಕ ತೋರಿದ್ದ. ರೇವತಿ ಅವರ ಮನೆಯ ಹೊರಗಿನ ಶೂ ಬಾಕ್ಸ್‌ನಲ್ಲಿದ್ದ ಕೀ ತೆಗೆದುಕೊಂಡು ಬಾಗಿಲು ತೆರೆದು ಒಳ ಹೋಗಿ ಅಲ್ಮೇರಾದಲ್ಲಿದ್ದ ಆಭರಣಗಳನ್ನು ಕದ್ದು ಪರಾರಿಯಾಗಿದ್ದ.
ಸುಳಿವು ಕೊಟ್ಟ ಕ್ಯಾಮೆರಾ:
ಕಳವು ಮಾಡಿದ ನಂತರ ಆರೋಪಿ ಬುರ್ಖಾ ಧರಿಸಿಯೇ ಮನೆಯಿಂದ ಹೊರಬಂದು ಸ್ವಲ್ಪ ದೂರ ನಡೆದು ಹೋಗಿ ಬಾಲಕಿಯೊಬ್ಬಳನ್ನು ಭೇಟಿಯಾಗಿದ್ದ. ಆ ಬಾಲಕಿ ಮಣಿಯ ಮಗಳ ಸಹಪಾಠಿ. ರೇವತಿ ಅವರ ಮನೆಯಿಂದ ಸುಮಾರು ೩ ಕಿ.ಮೀ. ವ್ಯಾಪ್ತಿಯ ೬೦ ಸಿ.ಸಿ ಕ್ಯಾಮರಾಗಳನ್ನು ಪರಿಶೀಲಿಸಿದಾಗ ಘಟನಾ ದಿನ ವ್ಯಕ್ತಿಯೊಬ್ಬರು ಬುರ್ಖಾ ಧರಿಸಿ ಹೋಗಿರುವುದು ಗೊತ್ತಾಯಿತು. ಆ ವ್ಯಕ್ತಿ ಬಾಲಕಿಯನ್ನು ಭೇಟಿಯಾಗಿ ಮಾತನಾಡಿರುವುದು ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ಸುಳಿವು ಆಧರಿಸಿ ಆ ಬಾಲಕಿಯನ್ನು ಪತ್ತೆ ಮಾಡಿ ವಿಚಾರಣೆ ನಡೆಸಿದಾಗ ಕಳುವಿನ ರಹಸ್ಯ ಬಯಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಿಕ್ಷಕರಿಗೆ ಮಾರಿದ್ದ:
ಮಣಿಯ ಮಗಳ ಸ್ನೇಹಿತನು ಕದ್ದ ಆಭರಣಗಳ ಪೈಕಿ ಕೆಲವನ್ನು ಟ್ಯೂಷನ್‌ನ ಶಿಕ್ಷಕರಿಗೆ ಮಾರಿದ್ದ. ಉಳಿದ ಆಭರಣಗಳನ್ನು ತನ್ನ ಮನೆಯಲ್ಲೇ ಬಚ್ಚಿಟ್ಟಿದ್ದ. ಆತ ತನ್ನ ತಂದೆ ಮದ್ಯವ್ಯಸನಿಯಾಗಿದ್ದು, ಕಾಲೇಜಿನ ಫೀಸ್ ಕಟ್ಟಲು ಹಣವಿಲ್ಲ. ಹೀಗಾಗಿ, ಆಭರಣಗಳನ್ನು ತೆಗೆದುಕೊಂಡು ಹಣ ಕೊಡಿ ಎಂದು ಟ್ಯೂಷನ್‌ನ ಶಿಕ್ಷಕರಿಗೆ ಸುಳ್ಳು ಹೇಳಿ ಆಭರಣಗಳನ್ನು ಮಾರಿದ್ದ. ಅದರಿಂದ ಬಂದ ೧ ಲಕ್ಷ ರೂ. ಹಣದಲ್ಲಿ ಹೊಸ ಮೊಬೈಲ್ ಖರೀದಿಸಿದ್ದ. ಮಣಿಯ ಮಗಳು ಮತ್ತು ಆಕೆಯ ಇಬ್ಬರು ಸಹಪಾಠಿಗಳನ್ನು ಬಂಧಿಸಿ, ೨೪.೫೦ ಲಕ್ಷ ರೂ. ಮೌಲ್ಯದ ೩೮೦ ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಬಂಧಿತರನ್ನು ಪರಿವೀಕ್ಷಣಾಲಯಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.