ಮರೆಯಲಾಗದ ಮುದವನ್ನು ನೀಡುವ ಮೊಮ್ಮಕ್ಕಳು

Published on

ನಾವು ಈ ಜಗತ್ತಿಗೆ ಒಬ್ಬೊಬ್ಬರಾಗಿಯೇ ಬರುತ್ತೇವೆ. ಜಗತ್ತನ್ನು ಬಿಟ್ಟು ಹೋಗುವಾಗಲೂ ಒಬ್ಬೊಬ್ಬರಾಗಿಯೇ ಹೊರಟು ಹೋಗುತ್ತೇವೆ. ಆದರೆ ಬಂದು ಹೋಗುವ ಈ ನಡುವೆ, ಒಬ್ಬೊಬ್ಬರಾಗಿಯೇ ಇರೋದಿಲ್ಲ. ಮದುವೆ ಮಾಡಿಕೊಂಡು ಇಬ್ಬಿಬ್ಬರಾಗುತ್ತೇವೆ. ಮುಂದೆ ಮಕ್ಕಳನ್ನು ಹಡೆದು ದಂಪತಿಗಳಾಗಿದ್ದವರು ಸಂಸಾರಿಗಳಾಗುತ್ತೇವೆ. ಆದರೆ ಒಂದು ಸ್ವಂತ ಮನೆ ಕಟ್ಟಿಕೊಳ್ಳುವ, ವಾಹನ ಖರೀದಿಸುವ ಹಾಗೂ ಮಕ್ಕಳಿಗೆ ಒಳ್ಳೆಯ ಶಾಲೆಯಲ್ಲಿ ಶಿಕ್ಷಣವನ್ನು ಒದಗಿಸುವ ಸಾಂಸಾರಿಕ ತಾಪತ್ರಯಗಳಲ್ಲಿ ನಮ್ಮ ಮಕ್ಕಳ ಜೊತೆ ಕಾಲ ಕಳೆಯುವುದನ್ನೇ ಮರೆಯುತ್ತೇವೆ.

ದಿನವಿಡೀ ದುಡಿದು ಬರುವ ಹಾಗೂ ಬೆಳಗ್ಗೆ ಬೇಗನೇ ಎದ್ದು, ಮನೆ ಕೆಲಸವನ್ನೆಲ್ಲ ಮುಗಿಸಿ, ನೌಕರಿ ನಿಮಿತ್ತ ಮನೆ ಬಿಟ್ಟು ಹೊರಡಬೇಕಾದ ದಂಪತಿಗಳಿಗೆ ಮಕ್ಕಳ ಜೊತೆ ಆಟವಾಡಲು ಅವರು ಹೇಳಿದ್ದನ್ನೆಲ್ಲಾ ಕೇಳಿಸಿಕೊಳ್ಳಲು, ಅವರಿಗೆ ಕತೆ ಹೇಳಲು ಕಾಲಾವಕಾಶವೇ ಸಿಗುವುದಿಲ್ಲ. ಇವೆಲ್ಲದುದಕ್ಕಾಗಿ ಮೊಮ್ಮಕ್ಕಳು ತಮ್ಮ ಅಜ್ಜ-ಅಜ್ಜಿಯರತ್ತ ಮುಖ ಮಾಡುತ್ತಾರೆ, ಅಜ್ಜ-ಅಜ್ಜಿಗೂ ಇದೇ ಬೇಕು, ಇವರಿಗೂ ಮೊಮ್ಮಕ್ಕಳ ಲಾಲನೆ ಪೋಷಣೆಯಲ್ಲೇ ಆನಂದ. ಏನೋ ಒಂದು ಸಂತೃಪ್ತಿ. ಅಜ್ಜ-ಅಜ್ಜಿ ಮತ್ತು ಮೊಮ್ಮಕ್ಕಳ ನಡುವಿನ ಸಂಬಂಧ. ವರ್ಣನಾತೀತ. ಇದನ್ನು ಶಬ್ದಗಳಿಂದ ತಿಳಿಹೇಳಲಾಗದು. ಅನುಭವಿಸಿಯೇ ಆನಂದಿಸಬೇಕು. ಮೊಮ್ಮಕ್ಕಳಿಗೂ ಅಷ್ಟೆ; ಅಜ್ಜಿ-ತಾತನೆಂದರೆ ಎಲ್ಲಿಲ್ಲದ ಸಲುಗೆ- ಪ್ರೀತಿ- ವ್ಯಾಮೋಹ. ಪ್ರೀತಿಯ ಮೊಮ್ಮಗಳಿಗೆ ಅಜ್ಜಿಯೇ ಜಡೆ ಕಟ್ಟಬೇಕು, ಹೂ ಮುಡಿಸಬೇಕು, ಬಣ್ಣಬಣ್ಣದ ಬಟ್ಟೆಗಳಿಂದ ಸಿಂಗರಿಸಬೇಕು.

ದೇವಸ್ಥಾನಗಳಿಗೆ ಕರಕೊಂಡು ಹೋಗಬೇಕು, ತಿನ್ನಿಸಬೇಕು, ಮಲಗಿಸಬೇಕು ಇತ್ಯಾದಿ. ಅಜ್ಜನ ಕೆಲಸ ಮೊಮ್ಮಕ್ಕಳು ಎದ್ದ ಕೂಡಲೇ ಹಲ್ಲುಜ್ಜಿಸಿ, ಸ್ನಾನ ಮಾಡಿಸುವುದು, ಬಟ್ಟೆ ಬರೆ ಮಾಡಿ ಸ್ಕೂಲ್​ಗೆ ರೆಡಿಮಾಡೋದು. ಮತ್ತೆ ತಿಂಡಿ ತಿನ್ನಿಸಿ ಶಾಲೆಗೆ ಬಿಟ್ಟು ಬರೋದು ಮತ್ತೆ ಶಾಲೆ ಮುಗಿದ ಮೇಲೆ ಮನೆಗೆ ಕರಕೊಂಡು ಬರುವುದು. ಮಾತ್ರವೇ ಅಲ್ಲ, ದಿನಾ ಕತೆ ಹೇಳಬೇಕು: ಅದೂ ಹೊಸ ಹೊಸ ಕತೆ. ಹಾಗೂ ಅವರ ಜೊತೆ ಆಟವಾಡಬೇಕು. ಆಟದಲ್ಲಿ ಬೇಕು ಬೇಕೆಂದೇ ಸೋತು, ಅವರ ಮುಖದಲ್ಲಾಗುವ ಗೆಲುವಿನ ಹರ್ಷವನ್ನು ತಾನು ಆನಂದಿಸಬೇಕು. ಅಂತೆಯೇ ಅವರು ಕೇಳುವ ಮುಗ್ಧ ಮತ್ತು ಚಿತ್ರ ವಿಚಿತ್ರವಾದ ಪ್ರಶ್ನೆಗಳಿಗೆ ಉತ್ತರಿಸಬೇಕು. ಮರೀ ನಿನಗೀಗ ಮೂರು ವರುಷ.. ಆದುದರಿಂದ ಕನಿಷ್ಠ ಮೂರು ಇಡ್ಲಿಗಳನ್ನಾದರೂ ನೀನು ತಿನ್ನಬೇಕು ಎಂದು ಅಜ್ಜ ಒತ್ತಾಯಿಸಿದಾಗ, ಕಿಲಾಡಿ ಮೊಮ್ಮಗ ಅಜ್ಜಾ ನಿನಗೆ ಈಗ ಎಂಬತ್ತು ವರುಷ.

ನೀನೂ ಎಂಬತ್ತು ಇಡ್ಲಿಗಳನ್ನು ತಿನ್ನಬೇಕು ಎಂದು ವಾದಿಸಿದಾಗ ತೆಪ್ಪಗಾಗಬೇಕು. ಮೊಮ್ಮಕ್ಕಳು ಕೇಳಿವ ಮುಗ್ಧ ನೈಜ ಪ್ರಶ್ನೆಗಳಿಗೆ ಉತ್ತರಿಸಬೇಕು. ಮೊಬೈಲ್ ಮತ್ತು ಕಂಪ್ಯೂಟರ್ ವಿಚಾರಗಳಲ್ಲಂತೂ ಈಗಿನ ಮೊಮ್ಮಕ್ಕಳು ಬಲು ಜೋರು. ಅಜ್ಜ ಅಜ್ಜಿಯಂದಿರೇ ಅವರಿಂದ ತುಂಬಾ ಕಲಿತುಕೊಳ್ಳಬೇಕಾಗಿದೆ. ಹೆತ್ತವರು ಬೈದಾಗ ಇಲ್ಲವೇ ಹೊಡೆಯಲು ಅಣಿಯಾದಾಗ ಮೊಮ್ಮಕ್ಕಳು ಅಜ್ಜ ಅಜ್ಜಿಯರ ಆಶ್ರಯವನ್ನು ಪಡೆಯುತ್ತವೆ. ಮಕ್ಕಳ ಬಾಯಿ ಮುಚ್ಚಿಸಲೆಂದು ಅವು ಕೇಳಿದ್ದನ್ನೆಲ್ಲಾ ತಕ್ಷಣ ತೆಗೆಸಿಕೊಡುವುದು, ದುಬಾರಿ ವಸ್ತುಗಳನ್ನು ನೀಡುವುದು, ಮಕ್ಕಳ ಎದುರು ಜಗಳಾಡುವುದು, ಕೆಟ್ಟ ಕೆಲಸ, ಕೆಟ್ಟ ಪದಗಳ ಪ್ರಯೋಗ ಹೆತ್ತವರಿಗೆ ಶೋಭೆ ಎನಿಸದು. ಮಕ್ಕಳ ನಡೆ ನುಡಿಯನ್ನು ತಿದ್ದುವ ನೀತಿಕತೆಗಳೊಂದಿಗೆ ಮೌಲ್ಯಗಳನ್ನು ಸಂಸ್ಕಾರವನ್ನು ತುಂಬುವ ಕೆಲಸವನ್ನು ಅಜ್ಜ-ಅಜ್ಜಿಯರು ಬಲು ಸಂತೋಷದಿಂದ ಮಾಡುತ್ತಾರೆ. ಬರೇ ಮೊಮ್ಮಕ್ಕಳ ಏಳಿಗೆಗೆ ಮಾತ್ರವಲ್ಲ ಅವರ ಸಂತೋಷಕ್ಕೆ ಕೂಡ.

ಆದರೆ ಹೆಚ್ಚಿನ ಕುಟುಂಬಗಳಲ್ಲಿ ಮರಬೆಳೆದಂತೆ ಕೊಂಬೆಗಳು ಕಾಂಡದಿಂದ ದೂರವಾಗುವಂತೆ ನಾನಾ ಕಾರಣಗಳಿಂದ ಮಕ್ಕಳು ಹೆತ್ತವರಿಂದ ದೂರವಾಗಿ, ದೂರದ ಊರಿನಲ್ಲಿ ಇಲ್ಲವೇ ವಿದೇಶಗಳಲ್ಲಿ ವಾಸಿಸುತ್ತಿರುತ್ತಾರೆ. ಆಗೊಮ್ಮೆ, ಈಗೊಮ್ಮೆ ಈ ಮುದುಕರನ್ನ ಭೇಟಿಯಾಗಲು ಬಂದರೂ ಈ ನಿನ್ನ ತಾತ-ಅಜ್ಜಿ ಕೊಳಕು ಮನುಷ್ಯರು, ಅವರ ಬಾಯಿ ವಾಸನೆ ಬರುತ್ತದೆ, ನೀವು ಅವರ ಬಳಿ ಹೋಗಬೇಡಿ. ಅವರ ಜೊತೆ ಮಲಗಬೇಡಿ,ಇನ್ಪೆಕ್ಷನ್ ಆದೀತು ಎಂದು ಹೇಳುತ್ತಾ ಸೊಸೆ ಮೊಮ್ಮಕ್ಕಳನ್ನು ಅಜ್ಜ-ಅಜ್ಜಿಯರಿಂದ ದೂರ ಮಾಡುತ್ತಾಳೆ. ಹೀಗಾದಾಗ, ಈ ಮುದಿ ಹೃದಯಗಳಲ್ಲಿ ಆಗುವ ವೇದನೆೆ, ಆಕೆಗೆ ಅರ್ಥವಾಗಬೇಕಿದ್ದರೆ, ಅವರೂ ಒಂದು ದಿನ ಅಜ್ಜಿಯಾಗಿ ಮೊಮ್ಮಕ್ಕಳಿಂದ ದೂರವಾಗಬೇಕು. ಇಂದಿನ ದಿನಗಳಲ್ಲಂತೂ ಮೊಮ್ಮಕ್ಕಳ ಜೊತೆ ಕಾಲ ಕಳೆಯುವ ಆನಂದದ ಕ್ಷಣ ಹೆಚ್ಚಿನ ಅಜ್ಜ ಅಜ್ಜಿಯವರಿಗೆ ಲಭ್ಯವಿಲ್ಲ.

ಇಂತಹ ಸಂದರ್ಭದಲ್ಲಿ ನೆರೆಕೆರೆಯವರ ಮೊಮ್ಮಕ್ಕಳನ್ನೇ ತಮ್ಮ ಮೊಮ್ಮಕ್ಕಳೆಂದು ಭಾವಿಸಿ ಅವರ ಜೊತೆ ಕಾಲ ಕಳೆಯುವುದು ಕ್ಷೇಮ. ಇಷ್ಟಕ್ಕೂ ಇದೇ ಮೊಮ್ಮಕ್ಕಳು ಅವರ ಬಾಲ್ಯದಲ್ಲಿ ಕೊಡುವ ಮುದವನ್ನು, ಸಂತೋಷವನ್ನು ಅವರು ಬೆಳೆದು ದೊಡ್ಡವರಾದ ಮೇಲೆ ನೀಡುವುದಿಲ್ಲ. ಕಾರಣ ಅಷ್ಟು ಹೊತ್ತಿಗೆ ಅವರ ಆಸಕ್ತಿ-ಅಭಿರುಚಿಗಳ ಲೋಕ ಬೇರೆ ಬೇರೆಯಾಗಿರುತ್ತದೆ. ಮುದುಕರ ಜೊತೆ ಅವರ ಕೆಮಿಸ್ಟ್ರೀ ಮ್ಯಾಚ್ ಆಗುವುದಿಲ್ಲ. ‘ಹಲೋ ಅಜ್ಜಾ ಹೇಗಿದ್ದೀಯಾ?’ ಎಂಬ ಪ್ರಶ್ನೆಯೊಂದನ್ನು ಬಿಟ್ಟರೆ, ಮಾತುಕತೆಗೆ ಅವರ ಬಳಿ ಇನ್ನೇನೂ ಉಳಿದಿರುವುದಿಲ್ಲ. ಇದೆಲ್ಲವೂ ಲೋಕಾರೂಢಿ, ಒಪ್ಪಿಕೊಳ್ಳೋಣ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net