

ಕೋಲಾರ: ಸೌದಿ ಅರೇಬಿಯಾದಲ್ಲಿ ನಡೆದ ಸ್ನೂಕರ್ ವಿಶ್ವ ಚಾಂಪಿಯನ್ ಶಿಪ್ ಟೂರ್ನಿಯಲ್ಲಿ ಚಿನ್ನದ ಪದಕ ಗೆದ್ದು ದೇಶಕ್ಕೆ ಹೆಮ್ಮೆ ತಂದಿರುವ ಕೋಲಾರ ಮೂಲದ ಕೀರ್ತನಾ ಪಾಂಡಿಯನ್ರನ್ನು ಅದ್ಧೂರಿಯಾಗಿ ಸನ್ಮಾಯಿಸಲಾಯಿತು.
ಸ್ನೂಕರ್ ಟೂರ್ನಿಯ ಅಂಡರ್ 16ನಲ್ಲಿ ಬೆಳ್ಳಿ, ಅಂಡರ್ 18 ನಲ್ಲಿ ಕಂಚು ಗೆದ್ದಿದ್ದ ಕೀರ್ತನಾ ಇದೀಗ ಅಂಡರ್ 21ನಲ್ಲಿ ಚಿನ್ನಕ್ಕೆ ಮುತ್ತಿಟ್ಟು ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಕೋಲಾರಕ್ಕೆ ಆಗಮಿಸಿರುವ ಕೀರ್ತನಾರನ್ನ ಅವರ ಕಾಲೇಜಿನಲ್ಲಿ ಅದ್ದೂರಿಯಾಗಿ ಸನ್ಮಾನಿಸಲಾಗಿದೆ.
ಕೆಜಿಎಫ್ನ ಬೆಮಲ್ನಗರದ ನಿವಾಸಿ ಪಾಂಡಿಯನ್-ಜಯಲಕ್ಷ್ಮಿ ದಂಪತಿ ಪುತ್ರಿಯಾದ ಕೀರ್ತನಾ ಕೆಜಿಎಫ್ನ ಜೈನ್ಸ್ ಕಾಲೇಜು ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿನಿಯಾಗಿದ್ದಾರೆ.
ಕಳೆದ ಜುಲೈ ತಿಂಗಳಲ್ಲಿ ಸೌದಿಅರೇಬಿಯಾ ದೇಶದಲ್ಲಿ ನಡೆದ ಸ್ನೂಕರ್ ಕ್ರೀಡೆಯಲ್ಲಿ ಚಾಂಪಿಯನ್ ಆಗುವ ಮೂಲಕ, ತನ್ನ ಕಾಲೇಜುಗೆ, ಜಿಲ್ಲೆಗೆ ಮತ್ತು ರಾಜ್ಯದ ಕೀರ್ತಿ ಪತಾಕೆ ಹಾರಿಸಿದ್ದಾರೆ. ಈ ಹಿನ್ನಲೆಯಲ್ಲಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಕೀರ್ತನರನ್ನು ಮೆರವಣಿಗೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ನಂತರ ಕಾಲೇಜಿನಲ್ಲಿ ಸನ್ಮಾನ ಮಾಡುವ ಮೂಲಕ ಅಭಿನಂದಿಸಿದರು.