Grammy - BTS : ಗ್ರ್ಯಾಮಿಯಲ್ಲಿ ವಿವಾದದ ಗೀತೆ!

Grammy Awards BTS
Grammy Awards BTS
Published on
Grammy - BTS :
ವಿಶ್ವ ಸಂಗೀತ ಲೋಕದಲ್ಲೇ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಎಂಬ ಹೆಗ್ಗಳಿಕೆ ಅಮೆರಿಕದ ರೆಕಾರ್ಡಿಂಗ್​ ಅಕಾಡೆಮಿ ಪ್ರತಿವರ್ಷ ಕೊಡಮಾಡುವ ಗ್ರ್ಯಾಮಿಗೆ ಸಲ್ಲುತ್ತದೆ. 1959ರಲ್ಲಿ 28 ವಿಭಾಗಗಳಲ್ಲಿ ಪ್ರಶಸ್ತಿ ಪ್ರದಾನ ಮಾಡುವ ಮೂಲಕ ಆರಂಭವಾದ ಗ್ರ್ಯಾಮಿ, ಸದ್ಯ 2027ರಲ್ಲಿ ಆಯೋಜಿಸಲಾಗುವ 69ನೇ ಸಾಲಿನಲ್ಲಿ ಒಟ್ಟು 96 ವಿಭಾಗಗಳಲ್ಲಿ ಪ್ರಶಸ್ತಿ ನೀಡುವುದಾಗಿ ಘೋಷಿಸಿದೆ. ಕೆಲ ಹಳೆಯ ಕೆಟಗರಿಗಳಿಗೆ ಕೊಕ್​ ಕೊಟ್ಟು, "ಬೆಸ್ಟ್​ ಏಷಿಯನ್​ ಪಾಪ್​ ಮ್ಯೂಸಿಕ್​ ಪರ್ಫಾರ್ಮೆನ್ಸ್​​' ಸೇರಿ ಕೆಲ ಹೊಸ ವಿಭಾಗಗಳನ್ನು ಪರಿಚಯಿಸಿದ್ದು, ಇತ್ತೀಚೆಗಷ್ಟೆ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಆದರೆ, ಪ್ರಾರಂಭದಲ್ಲೇ ಕೊರಿಯಾ ಮೂಲದ ಬಿಟಿಎಸ್​ (ಬಿಯಾಂಡ್​ ದ ಸೀನ್​) ತಂಡ, ಗ್ರ್ಯಾಮಿಯಿಂದ ಹೊರನಡೆದಿದೆ. ""ಬೆಸ್ಟ್​ ಏಷಿಯನ್​ ಪಾಪ್​ ಮ್ಯೂಸಿಕ್​ ಪರ್ಫಾರ್ಮೆನ್ಸ್​' ಕೆಟಗರಿ ಮೂಲಕ ಸಂಗೀತವನ್ನು ಪ್ರಾದೇಶಿಕವಾಗಿ ವಿಭಜಿಸಲಾಗುತ್ತಿದೆ. ಆ ಮೂಲಕ ಏಷಿಯಾ ಮೂಲಕ ಕಲಾವಿದರು, ಸಂಗೀತಗಾರರು ಪ್ರಮುಖ ವಿಭಾಗಗಳಲ್ಲಿ ಸ್ಪರ್ಧಿಸಲು ಅಡ್ಡಿಯುಂಟು ಮಾಡಲಾಗುತ್ತಿದೆ. ಸಂಗೀತವನ್ನು ಸಂಗೀತದಂತೆ ನೋಡಬೇಕೇ ವಿನಃ ಭಾಷೆ, ಗಡಿ ಎಂದು ಇಬ್ಭಾಗ ಮಾಡಬಾರದು' ಎಂದು ಬಿಟಿಎಸ್​ ತಂಡ ಅಧಿಕೃತವಾಗಿ ಅಸಮಾಧಾನ ವ್ಯಕ್ತಪಡಿಸಿದೆ. ವಿಶ್ವಾದ್ಯಂತ 500ಕ್ಕೂ ಅಧಿಕ ಪ್ರಶಸ್ತಿಗಳನ್ನು ಪಡೆದಿರುವ ಬಿಟಿಎಸ್​, 20ಕ್ಕೂ ಹೆಚ್ಚು ವಿಶ್ವದಾಖಲೆಗಳನ್ನು ನಿರ್ಮಿಸಿದೆ. ಈ ಹಿಂದೆ ಐದು ಬಾರಿ ಗ್ರ್ಯಾಮಿಯಲ್ಲಿ ನಾಮಾಂಕಿತಗೊಂಡಿದ್ದರೂ, ಒಮ್ಮೆಯೂ ಪ್ರಶಸ್ತಿಗೆ ಮುತ್ತಿಡುವ ಭಾಗ್ಯ ದೊರೆತಿಲ್ಲ. ಈ ಬಾರಿ ಗೆಲ್ಲುವ ಹುಮ್ಮಸ್ಸಿನಲ್ಲಿದ್ದ ಬಿಟಿಎಸ್​ ತಂಡಕ್ಕೆ ಗ್ರ್ಯಾಮಿ ಹೊಸ ವಿಭಾಗ ಪರಿಚಯಿಸಿರುವುದು ಹೊಸ ಸಮಸ್ಯೆ ತಂದೊಡ್ಡಿದೆ. ಕೆಲವರು ಬಿಟಿಎಸ್​ ಪರ ನಿಂತರೆ, ಇನ್ನೂ ಕೆಲವರು ಗ್ರ್ಯಾಮಿ ಪರ ನಿಂತಿದ್ದಾರೆ. ಅಲ್ಲಿಗೆ 2027ರ ಗ್ರ್ಯಾಮಿ ಪ್ರಶಸ್ತಿಗಳು ಈಗಿನಿಂದಲೇ ಕುತೂಹಲ ಮೂಡಿಸಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net